ಕನ್ನಡಪ್ರಭ ವಾರ್ತೆ ಹೊಸಪೇಟೆ
ಇಲ್ಲೊಬ್ಬ ಭೂಪ ಸರ್ಕಾರಿ ಬಸ್‌ಅನ್ನೇ ಎಗರಿಸಿ ಪೊಲೀಸರ ಅತಿಥಿಯಾಗಿದ್ದಾನೆ. ನಿತ್ಯವೂ ಜನರು ಪ್ರಯಾಣ ಮಾಡುವ ಸಾರಿಗೆ ಬಸ್‌ಅನ್ನೇ ಕಳವು ಮಾಡುವ ಐಡಿಯಾಕ್ಕೆ ಹೋದ ಈ ಆಸಾಮಿ ಈಗ ಜೈಲು ಸೇರಿದ್ದಾನೆ.ಹೌದು, ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಪಟ್ಟಣದ ಬಸ್ ನಿಲ್ದಾಣದಲ್ಲಿ ತಂಗಿದ್ದ ಬಸ್‌ಅನ್ನು ಹಗರಿಬೊಮ್ಮನಹಳ್ಳಿ ತಾಲೂಕಿನ ಮಗಿಮಾವಿನಹಳ್ಳಿಯ ಎಚ್. ಕೆಂಚಪ್ಪ(37) ಎಂಬ ವ್ಯಕ್ತಿ ಭಾನುವಾರ ರಾತ್ರಿ ಕಳವು ಮಾಡಿಕೊಂಡು ಪರಾರಿಯಾಗಿದ್ದಾನೆ.
ಸಂಡೂರು ಬಸ್ ಡಿಪೋಗೆ ಸೇರಿದ ಬಸ್(ಕೆಎ 35, ಎಫ್ 85) ಎನ್ನುವ ಸಂಖ್ಯೆಯ ಬಸ್ ಕಳವು ಮಾಡಿದ್ದಾನೆ. ಮರಿಯಮ್ಮನಹಳ್ಳಿಯಿಂದ ಗರಗ ಮಾರ್ಗವಾಗಿ ಸಂಡೂರು ಪಟ್ಟಣಕ್ಕೆ ನಿತ್ಯ ಸಂಚರಿಸುವ ಬಸ್ ಕಳವು ಆಗಿದ್ದಕ್ಕೆ ಬಸ್ಸಿನ ನಿರ್ವಾಹಕ, ಚಾಲಕರಿಬ್ಬರು ಹೈರಾಣಾಗಿದ್ದರು. ಇವರಿಬ್ಬರು ನಿಲ್ದಾಣದಲ್ಲಿ ಮಲಗಿದ್ದಾಗ ಕಳ್ಳ ತನ್ನ ಚಾಲನಾ ಜಾಣ್ಮೆ ತೋರಿಸಿದ್ದಾನೆ. ಮೊದಲು ಟಿಪ್ಪರ್ ಓಡಿಸುತ್ತಿದ್ದ ಕೆಂಚಪ್ಪ ಬಸ್ ಕಳವು ಮಾಡಿ, ಎಲ್ಲರ ಹುಬ್ಬೇರಿಸಿದ್ದಾನೆ. ಬಸ್ ಮಾಯವಾಗಿದ್ದರಿಂದ ಸಾರಿಗೆ ಇಲಾಖೆಯ ಅಧಿಕಾರಿಗಳು ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಬಸ್ ಪತ್ತೆ ಹಚ್ಚಿದ್ದಾರೆ.ವಿಜಯನಗರ ಎಸ್ಪಿ ಬಿ.ಎಲ್. ಶ್ರೀಹರಿಬಾಬು, ಕೂಡ್ಲಿಗಿ ವಿಭಾಗ ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪುರ ಮಾರ್ಗದರ್ಶನದಲ್ಲಿ ಸಿಪಿಐ ವಿಕಾಸ್ ಲಮಾಣಿ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು. ಚಿಲಕನಹಟ್ಟಿ ಬಸ್ ತಂಗುದಾಣದಲ್ಲಿ ಆರೋಪಿ ಎಚ್. ಕೆಂಚಪ್ಪ ಸಿಕ್ಕಿದ್ದು, ವಿಚಾರಣೆ ಮಾಡಲಾಗಿ ಬಸ್ಸನ್ನು ಕಳುವು ಮಾಡಿ ಮಗಿಮಾವಿನಹಳ್ಳಿ ಕ್ರಾಸ್ ಪಕ್ಕದಲ್ಲಿರುವ ಕಸ ವಿಲೇವಾರಿ ಮಾಡುವ ಸ್ಥಳದಲ್ಲಿ ಬಚ್ಚಿಟ್ಟ ಬಗ್ಗೆ ಬಾಯ್ಬಿಟ್ಟಿದ್ದಾನೆ. ಬಸ್ಸನ್ನು ಜಪ್ತು ಮಾಡಿದ್ದು ತಾನೂ ಟೈಯರ್ ಮತ್ತು ಡಿಸೇಲ್ ಕಳುವು ಮಾಡುವ ಸಲುವಾಗಿ ಕಳ್ಳತನ ಮಾಡಿದ ಕುರಿತು ಒಪ್ಪಿಕೊಂಡಿದ್ದಾನೆ. ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ಪ್ರಕರಣದ 24 ಗಂಟೆಯೊಳಗಾಗಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿ ಮತ್ತು ಬಸ್ ಪತ್ತೆ ಮಾಡಿದ್ದಕ್ಕಾಗಿ, ಎಸ್‌ಪಿ ಶ್ರೀಹರಿಬಾಬು ಅವರು, ತನಿಖಾಧಿಕಾರಿಗಳಾದ ಸಿಪಿಐ ವಿಕಾಸ್ ಲಮಾಣಿ, ಮರಿಯಮ್ಮನಹಳ್ಳಿ ಪಿಎಸ್ಐಗಳಾದ ಮೌನೇಶ್ ರಾಠೋಡ್, ಬೀಬಿ ಮರ್ರಮ್, ಎಎಸ್ಐ ಎನ್. ಮುರಾರಿ, ಹಾಗೂ ಸಿಬ್ಬಂದಿ ಹೆಗ್ಗಪ್ಪ, ದೇವೇಂದ್ರ, ವಿಶ್ವನಾಥ, ಯು. ಚಿದಾನಂದ, ಕೆ. ನಂದೀಶ್, ಕೆ.ಎಚ್, ಚಿದಾನಂದ ಸಂತೋಷ್, ಪರಶುರಾಮರವರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.