ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಜಗತ್ತಿನಲ್ಲಿ ಗುರುವಿನ ಸ್ಥಾನಮಾನ ತುಂಬಾ ದೊಡ್ಡದು. ಹೆತ್ತ ತಂದೆ ತಾಯಿ ಹಾಗೂ ಗುರುವಿನ ಋಣ ತೀರಿಸುವುದು ತುಂಬಾ ಕಷ್ಟ. ಅಸಾಧ್ಯವಾದದನ್ನು ಸಾಧಿಸುವ ಶಕ್ತಿ ಗುರುವಿಗೆ ಮಾತ್ರ ಇದೆ ಎಂದು ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.ನಗರದ ಕಲ್ಲಹಳ್ಳಿಯ ಶ್ರೀ ಶಿವಗಂಗಾ ಯೋಗ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ ವ್ಯಾಸ ಪೂರ್ಣಿಮೆ, ಗುರು ಪೂರ್ಣಿಮೆ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿ, ಗುರುಹಿರಿಯರನ್ನು ನಾವೆಲ್ಲರೂ ಗೌರವಿಸಬೇಕು. ಪ್ರತಿಯೊಂದು ಹಂತದಲ್ಲೂ ಕ್ಷೇತ್ರದಲ್ಲೂ ಗುರುವಿನ ಮಾರ್ಗದರ್ಶನ ಬೇಕೇ ಬೇಕು. ಶಿಕ್ಷಣದ ಜೊತೆಗೆ ಯಾವುದೇ ಸಂದರ್ಭದಲ್ಲಿ ಸಣ್ಣಪುಟ್ಟ ಸಹಾಯವನ್ನು ಮಾಡಿದವನು ಸಹ ಗುರುವಾಗುತ್ತಾನೆ ಎಂದು ತಿಳಿಸಿದರು.
ಮನೆಯ ಯಜಮಾನ ಕುಟುಂಬವನ್ನು ರಕ್ಷಿಸಿದರೆ ಒಬ್ಬ ಗುರು ಸಮಾಜವನ್ನು ರಕ್ಷಿಸುತ್ತಾನೆ. ಗುರುವಿಗೆ ಸಹಿಸಿಕೊಳ್ಳುವ ಶಕ್ತಿಯೊಂದಿಗೆ ಸಮಾಜವನ್ನು ತಿದ್ದುವ ಭಾರವಾದ ಶಕ್ತಿಯನ್ನು ಗುರು ಹೊಂದಿರುತ್ತಾನೆ ಎಂದರು.ಶ್ರೀ ಶಿವಗಂಗಾ ಯೋಗ ಕೇಂದ್ರ ರಾಜ್ಯದಲ್ಲಿ ಮಾದರಿಯಾಗಿದೆ. ಬೆಳಗ್ಗೆ ಸಾವಿರಾರು ಜನ ಯೋಗ ಶಿಬಿರಾರ್ಥಿಗಳು ಬಂದು ಸೇರುವುದು ಸಣ್ಣ ಮಾತಲ್ಲ. ಈ ಸ್ಥಳಕ್ಕೆ ಅಂತ ದಿವ್ಯವಾದ ಶಕ್ತಿ ಇದೆ. ಪ್ರಾತಃಕಾಲದಲ್ಲಿ ಯೋಗ ಮಾಡುವವರು ಸದಾ ಹಸನ್ಮುಖಿಗಳಾಗಿ ಇರುವ ಜತೆಯಲ್ಲಿ ದೀರ್ಘಾಯುಷ್ಯ ಹೊಂದಿರುವವರಾಗಿರುತ್ತಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಯೋಗಾಚಾರ್ಯ ಡಾ. ಸಿ.ವಿ.ರುದ್ರಾರಾಧ್ಯ ಮಾತನಾಡಿ, ಗುರುಪೂರ್ಣಿಮೆ ನಡೆದು ಬಂದ ದಾರಿ ಹಾಗೂ ಗುರುವಿನ ಮಹತ್ವ ಅದರ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು. ಯೋಗ ಕೇಂದ್ರದ ಶಿಕ್ಷಕರಾದ ಡಾ. ಪದ್ಮನಾಭ ಅಡಿಗ ಮಾತನಾಡಿ, ಗುರು ಎಂದರೆ ದೊಡ್ಡ ಶಕ್ತಿ. ಗುರುವಿನ ಆಶೀರ್ವಾದ ಬೆನ್ನಿಗೆ ವಜ್ರ ಕವಚ. ಗುರುವಿನಿಂದ ಕಲಿತ ಪಾಠ ನಮಗೆ ದಾರಿ ದೀಪ ಎಂದು ತಿಳಿಸಿದರು.ಶ್ರೀ ಶಿವಗಂಗಾ ಯೋಗ ಕೇಂದ್ರದ ಅಧ್ಯಕ್ಷ ಎಸ್.ರುದ್ರೇಗೌಡ ಎಲ್ಲರನ್ನೂ ಸನ್ಮಾನಿಸಿದರು. ಉರಗತಜ್ಞ ಪ್ರಭಾಕರ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಜಿಪಂ ಮಾಜಿ ಸದಸ್ಯ ಕೆ.ಇ.ಕಾಂತೇಶ್, ಜನಶಿಕ್ಷಣ ಸಂಸ್ಥೆ ನಿರ್ದೇಶಕಿ ಎಸ್.ವೈ.ಅರುಣಾದೇವಿ, ಹೊಸತೋಟ ಸೂರ್ಯನಾರಾಯಣ, ಮೋಹನ್ ಬಾಳೇಕಾಯಿ, ಕಾಟನ್ ಜಗದೀಶ್, ಕೆ.ವಿ.ವಸಂತಕುಮಾರ್, ಹಾಲಪ್ಪ, ಕಲಗೋಡು ರತ್ನಾಕರ್, ಕಿರಣ್, ಎಂ.ಪಿ. ಆನಂದಮೂರ್ತಿ, ಜಿ.ಎಸ್. ಓಂಕಾರ್, ಜಿ.ವಿಜಯಕುಮಾರ್, ದೇವೇಂದ್ರ ಹಾಗೂ ಟ್ರಸ್ಟಿಗಳು, ಪೋಷಕರು. ಶಿಕ್ಷಕರು. ಉಪಸ್ಥಿತರಿದ್ದರು.