- ತಮಿಳುನಾಡಿನ ಪ್ರಾಚೀನ ದೇಗುಲಗಳ ಸಮಗ್ರ ಮಾಹಿತಿ ಪುಸ್ತಕವಿದೆ: ಹಿರೇಮಗಳೂರು ಕಣ್ಣನ್ - ದೇವಾಲಯಗಳನ್ನು ಪುರಾಣ ಮಾಡದೆ ಇತಿಹಾಸವನ್ನಾಗಿಸಲು ಸಲಹೆ ಕನ್ನಡಪ್ರಭ ವಾರ್ತೆ ಮಂಡ್ಯ ರಾಜ್ಯದ ಪ್ರತಿ ದೇವಾಲಯಗಳ ಸಮಗ್ರ ಇತಿಹಾಸವನ್ನು ಒಳಗೊಂಡಿರುವ ಕೈಪಿಡಿಯೊಂದನ್ನು ರಚನೆ ಮಾಡುವ ಅಗತ್ಯವಿದೆ ಎಂದು ಕನ್ನಡದ ಪೂಜಾರಿ, ಖ್ಯಾತ ವಾಗ್ಮಿ ಹಿರೇಮಗಳೂರು ಕಣ್ಣನ್ ಅಭಿಪ್ರಾಯಪಟ್ಟರು. ನಗರದ ಹರ್ಡಿಕರ್ ಭವನದಲ್ಲಿ ಪತ್ರಕರ್ತ ಗಣಂಗೂರು ನಂಜೇಗೌಡರ ಶ್ರೀರಂಗಪಟ್ಟಣದ ಪ್ರಾಚೀನ ದೇಗುಲಗಳು’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು. ರಾಜ್ಯದ ಪ್ರತಿ ದೇವಾಲಯಗಳ ಎದುರು ದೇವಾಲಯದ ಮಾಹಿತಿಯ ಫಲಕಗಳನ್ನು ಹಾಕಬೇಕು. ಅದರ ಸುತ್ತಳತೆ, ವಿನ್ಯಾಸ, ನಿರ್ಮಾಣದ ಮಾಹಿತಿ, ಪೂಜೆ ಪುನಸ್ಕಾರದ ವಿವರಗಳನ್ನು ಒಳಗೊಂಡಿರುವ ಕೈಪಿಡಿ ರಚನೆಯಾಗಬೇಕು. ವಿಶೇಷವಾಗಿ ದೇವಾಲಯದ ಸುತ್ತಲೂ ಸುಂದರ ಉದ್ಯಾನವನ, ವೈದ್ಯಕೀಯ ಕೇಂದ್ರ, ಮಕ್ಕಳಿಗೆ ಶಿಕ್ಷಣ ಕೊಡಿಸುವುದು, ಸೇವಕನನ್ನು ನೇಮಿಸಿ ಉದ್ಯೋಗ ನೀಡುವ ಕೆಲಸ ಆಗಬೇಕು ಎಂದರು. ದೇವಾಲಯಗಳು ಸಾಂಸ್ಕೃತಿಕ ಕೇಂದ್ರಗಳು. ಅವುಗಳನ್ನು ಪುರಾಣಗಳನ್ನಾಗಿ ಮಾಡದೆ ಇತಿಹಾಸವನ್ನಾಗಿಸುವುದು ಇಂದಿನ ಅಗತ್ಯವಾಗಿದೆ. ಜನ ಸಾಮಾನ್ಯರಿಗೆ ದೇವಾಲಯಗಳ ವಿವರ, ಅದರ ಮಹತ್ವವನ್ನು ಪರಿಚಯಿಸಬೇಕು. ದೇವಾಲಯಗಳು ಪಾಳು ಬೀಳಲು ಬಿಡದೆ ಅವುಗಳು ಜನರನ್ನು ಆಕರ್ಷಿಸುವಂತೆ ಪ್ರವಾಸಿ ತಾಣಗಳನ್ನಾಗಿ ಮಾಡುವ ಕೆಲಸ ಸರ್ಕಾರಗಳಿಂದ ನಡೆಯಬೇಕಿದೆ ಎಂದರು. ತಮಿಳುನಾಡಿನ ಪ್ರಾಚೀನ ದೇಗುಲಗಳ ಕುರಿತು ಬೆಂಗಳೂರು ವಿಶ್ವವಿದ್ಯಾನಿಲಯ ಸಮಗ್ರ ಮಾಹಿತಿಯುಳ್ಳ ಪುಸ್ತಕ ಪ್ರಕಟಿಸಿದೆ. ಆದರೆ, ಕರ್ನಾಟಕದ ದೇವಾಲಯಗಳ ಕುರಿತು ಮಾಹಿತಿ ಪ್ರಕಟಿಸಿಲ್ಲ. ದೇವಾಲಯಗಳ ಸಮಗ್ರ ಇತಿಹಾಸವನ್ನು ತಿಳಿಸುವ ಮೂಲಕ ಸಂಸ್ಕೃತಿಯನ್ನು ರಕ್ಷಿಸಬೇಕು. ಸಂಸ್ಕೃತಿಯ ಪ್ರತಿಬಿಂಬದಂತೆ ಇರುವ ದೇವಾಲಯಗಳು ಕೆಲವೆಡೆ ಅವುಗಳ ಪಳೆಯುಳಿಕೆ ಮಾತ್ರ ಉಳಿದಿವೆ. ಹಾಗಾಗಿ ದೇವಾಲಯಗಳನ್ನು ಪರಿಚಯಿಸುವ ಮಾಹಿತಿ ಪುಸ್ತಕಗಳು ಹೆಚ್ಚಿನದಾಗಿ ಹೊರಬರಬೇಕು ಎಂದರು. ಸನಾತನ ಧರ್ಮ ಮತ್ತು ಜಾತಿ ನಿರ್ಮೂಲನೆ ಆಂದೋಲನ ನಡೆಸುವುದಾಗಿ ಸಾಹಿತಿ ಭಗವಾನ್ ಹೇಳಿದ್ದು, ಪರಂಪರೆಯ ಪ್ರತೀಕವಾಗಿರುವ ಸನಾತನ ಧರ್ಮ ವಿನೂತನ ಹಾಗೂ ನೂತನ ಧರ್ಮವಾಗಿದೆ. ಈ ವಿಭಿನ್ನ ಸಂಸ್ಕೃತಿಯನ್ನು ಉಳಿಸಿಕೊಂಡು ಬೆಳೆಸಬೇಕಿರುವುದು ಎಲ್ಲರ ಕರ್ತವ್ಯವಾಗಿದೆ ಎಂದರು. ಸ್ವಾಮಿ ವಿವೇಕಾನಂದರು ಚಿಕಾಗೋಗೆ ತೆರಳಲು ಧನಸಂಗ್ರಹಿಸಿ ಸಹಾಯ ಮಾಡಿದ ಚಿಕ್ಕಮಗಳೂರಿನ ಅರಸಿಂಗ ಪೆರುಮಾಳ್ ಪತ್ನಿ ಶ್ರೀರಂಗಮ್ಮ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಗ್ರಾಮದವರಾಗಿದ್ದು, ಇವರು ವಿವೇಕಾನಂದರಿಗೆ ಆರೈಕೆ ಮಾಡಿದ್ದಾರೆ, ಇವರ ಕುರಿತು ಕೃತಿ ರಚನೆಯಾಗುತ್ತಿದ್ದು, ಶೀಘ್ರದಲ್ಲೇ ಲೋಕಾರ್ಪಣೆ ಯಾಗಲಿದೆ ಎಂದರು. ಸಮಾರಂಭ ಉದ್ಘಾಟಿಸಿದ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಮಾತನಾಡಿ, ಶ್ರೀರಂಗಪಟ್ಟಣ ಪಾರಂಪರಿಕ ನಗರಿ. ಇಲ್ಲಿನ ಪ್ರಾಚೀನ ದೇಗುಲಗಳ ಬಗ್ಗೆ ಪರಿಚಯ ಮಾಡಿಕೊಡುವ ಕೆಲಸ ಮಾಡಿರುವುದು ಒಳ್ಳೆಯ ಬೆಳವಣಿಗೆ, ವಿಷಯ ಸಂಗ್ರಹಿಸಿ ಪುಸ್ತಕ ಬರೆಯುವುದು ಸುಲಭವಲ್ಲ, ಸತತ ಪರಿಶ್ರಮ ಬೇಕು, ಮುಂದಿನ ದಿನಗಳಲ್ಲಿ ಶ್ರೀರಂಗಪಟ್ಟಣದ ಇತಿಹಾಸ ಹೊರ ತೆಗೆಯುವ ಕೆಲಸ ಮಾಡಬೇಕಾಗಿದೆ ಎಂದರು. ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್ ನಾಗರಾಜು ಪುಸ್ತಕ ಕುರಿತು ಮಾತನಾಡಿದರು, ಇತಿಹಾಸ ಸಂಶೋಧಕ ತೈಲೂರು ವೆಂಕಟ ಕೃಷ್ಣ ಅಧ್ಯಕ್ಷತೆ ವಹಿಸಿದ್ದರು, ಸಾಹಿತ್ಯ ಚಿಂತಕಿ ನಾಗಶ್ರೀ ತ್ಯಾಗರಾಜು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಸಿ.ಮಂಜುನಾಥ್ ಇತರರಿದ್ದರು, ಪತ್ರಕರ್ತ ಗಣಂಗೂರು ನಂಜೇಗೌಡ ಸ್ವಾಗತಿಸಿದರು.