ಆರೋಗ್ಯವಂತ ವ್ಯಕ್ತಿ ವರ್ಷದಲ್ಲಿ 5 ಬಾರಿ ರಕ್ತದಾನ ಮಾಡಬಹುದು: ರೆಡ್‌ಕ್ರಾಸ್ ಸಭಾಪತಿ ಕೆ.ಎನ್.ಕಾಂತರಾಜು

KannadaprabhaNewsNetwork |  
Published : Sep 24, 2024, 01:50 AM IST
ಆಲೂರು ತಾಲೂಕು ರಾಯರ ಕೊಪ್ಪಲು ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಲಾಯಿತು. | Kannada Prabha

ಸಾರಾಂಶ

ತುರ್ತು ಮತ್ತು ಅಪಘಾತಗಳ ಸಂದರ್ಭಗಳಲ್ಲಿ ನಾವು ಮಾಡುವ ರಕ್ತದಾನದಿಂದ ಅದೆಷ್ಟೋ ಜೀವಗಳನ್ನು ಉಳಿಸಲು ಸಹಕಾರಿಯಾಗುತ್ತದೆ ಎಂದು ಆಲೂರು ತಾಲೂಕು ರೆಡ್ ಕ್ರಾಸ್ ಸಭಾಪತಿಗಳಾದ ಕೆಎನ್ ಕಾಂತರಾಜು ತಿಳಿಸಿದರು. ಆಲೂರಿನಲ್ಲಿ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ರಕ್ತದಾನ ಮಾಡಿ ಜೀವ ಉಳಿಸಿ ಕನ್ನಡಪ್ರಭ ವಾರ್ತೆ ಆಲೂರು

ತುರ್ತು ಮತ್ತು ಅಪಘಾತಗಳ ಸಂದರ್ಭಗಳಲ್ಲಿ ನಾವು ಮಾಡುವ ರಕ್ತದಾನದಿಂದ ಅದೆಷ್ಟೋ ಜೀವಗಳನ್ನು ಉಳಿಸಲು ಸಹಕಾರಿಯಾಗುತ್ತದೆ ಎಂದು ಆಲೂರು ತಾಲೂಕು ರೆಡ್ ಕ್ರಾಸ್ ಸಭಾಪತಿಗಳಾದ ಕೆಎನ್ ಕಾಂತರಾಜು ತಿಳಿಸಿದರು.

ಆಲೂರು ತಾಲೂಕು ರೆಡ್ ಕ್ರಾಸ್ ಘಟಕ, ಪ್ರಾಥಮಿಕ ಆರೋಗ್ಯ ಕೇಂದ್ರ ರಾಯರ ಕೊಪ್ಪಲು, ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ರಕ್ತ ನಿಧಿ ವಿಭಾಗ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ರಾಯರ ಕೊಪ್ಪಲು ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶ್ರೇಷ್ಠ ದಾನಗಳಲ್ಲಿ ರಕ್ತದಾನ ಕೂಡ ಒಂದಾಗಿದ್ದು, ನಾವು ಹಲವಾರು ವರ್ಷಗಳಿಂದ ಭಾರತೀಯ ರೆಡ್‌ಕ್ರಾಸ್ ಸಹಯೋಗದಲ್ಲಿ ಹಲವಾರು ಬಾರಿ ರಕ್ತದಾನ ಶಿಬಿರಗಳನ್ನು ಏರ್ಪಡಿಸುತ್ತೇವೆ. ನಾವು ಇಲ್ಲಿಯವರೆಗೆ ಹಾಸನ ಜಿಲ್ಲೆಯಲ್ಲಿ ಇರುವ ಖಾಸಗಿ ರಕ್ತ ನಿಧಿ ಕೇಂದ್ರಗಳಿಗೆ ಮಾಹಿತಿ ನೀಡಿ ರಕ್ತದಾನ ಶಿಬಿರಗಳನ್ನು ಏರ್ಪಡಿಸುತ್ತಿದ್ದೆವು. ಇದೇ ಮೊದಲ ಬಾರಿಗೆ ಸರ್ಕಾರಿ ಆಸ್ಪತ್ರೆಯ ಸಹಯೋಗದಲ್ಲಿ ಈ ಶಿಬಿರವನ್ನು ಏರ್ಪಡಿಸಿದ್ದು, ಇನ್ನು ಮುಂದೆ ಬಡವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರಿ ಆಸ್ಪತ್ರೆಗಳ ಸಹಯೋಗದಲ್ಲಿ ಈ ಶಿಬಿರಗಳನ್ನು ಮುಂದುವರಿಸಿಕೊಂಡು ಹೋಗುವುದಾಗಿ ತಿಳಿಸಿದರು.

ರಾಯರ ಕೊಪ್ಪಲು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಸಾಗರ್‌ ಮಾತನಾಡಿ, ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಕಳೆದ ಗುರುವಾರ ತಾಲೂಕು ಆಸ್ಪತ್ರೆಯಿಂದ ಕಾರ್ಯಕ್ರಮ ಮಾಡುವಂತೆ ಮಾಹಿತಿ ನೀಡಿದ್ದರು. ಈ ವಿಚಾರವನ್ನು ಕೆ.ಎನ್ ಕಾಂತರಾಜುರವರ ಗಮನಕ್ಕೆ ತಂದಾಗ ಅವರು ಈ ಕಾರ್ಯಕ್ರಮವನ್ನು ನಮ್ಮ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಮಾಡಲು ಸಲಹೆ ನೀಡಿದರು. ಅದರಂತೆ ಅತ್ಯಂತ ಕಡಿಮೆ ಅವಧಿಯಲ್ಲಿ ಅಚ್ಚುಕಟ್ಟಾಗಿ ಈ ಕಾರ್ಯಕ್ರಮವು ಆಯೋಜನೆಗೊಂಡಿದೆ. ರಕ್ತದಾನ ಮಾಡುವುದರ ಉದ್ದೇಶ ಇನ್ನೊಂದು ಜೀವವನ್ನು ಉಳಿಸುವುದೇ ಆಗಿದೆ ಎಂದರು.

ಇತ್ತೀಚೇಗೆ ಕಳೆದ 2-3 ತಿಂಗಳ ಹಿಂದೆ ರಾಜ್ಯಾದ್ಯಂತ ಡೆಂಘೀ ಪ್ರಕರಣಗಳು ಹೆಚ್ಚಾಗಿತ್ತು. ಅದರಲ್ಲಿ ಡೆಂಘೀ ಪ್ರಕರಣಗಳಲ್ಲಿ ಹಾಸನ ಜಿಲ್ಲೆಯ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿ ಇದ್ದಂತ ಸಂದರ್ಭದಲ್ಲಿ ನಮ್ಮ ಭಾಗದ ಸಾರ್ವಜನಿಕರು ನಮ್ಮ ಅಪ್ಪ, ಅಮ್ಮ, ಅಕ್ಕ,ತಂಗಿ, ಹೆಂಡತಿ, ಮಕ್ಕಳು ಹೀಗೆ ತಮ್ಮ ಸಂಬಂಧಿಕರು ಡೆಂಘೀ ಇಂದ ಬಿಳಿ ರಕ್ತ ಕಣಗಳು ಕಡಿಮೆಯಾಗಿ ಪ್ಲೇಟ್ಲೆಟ್ಸ್ 2-3 ಸಾವಿರಕ್ಕೆ ಬಂದಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ದಯಮಾಡಿ ರಕ್ತದ ವ್ಯವಸ್ಥೆ ಮಾಡಿಕೊಡಿ ಎಂದು ನನ್ನ ಬಳಿ ತಮ್ಮ ನೋವನ್ನು ಹಂಚಿಕೊಂಡ ಸಂದರ್ಭದಲ್ಲಿ ನಾನು ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಿಗೆ ಕರೆ ಮಾಡಿ ತಕ್ಕಮಟ್ಟಿಗೆ ರಕ್ತದ ವ್ಯವಸ್ಥೆ ಮಾಡಿದ ಉದಾಹರಣೆಗಳಿವೆ. ಅಂದರೆ ಇಂತಹ ತುರ್ತು ಸಂದರ್ಭಗಳಲ್ಲಿ ರಕ್ತದ ಮಹತ್ವ ಏನು ಎಂಬುದು ತಿಳಿಯುತ್ತದೆ. ಆದರೆ ಜನರಲ್ಲಿ ರಕ್ತ ಕೊಟ್ಟರೆ ನಮ್ಮ ದೇಹದಲ್ಲಿರುವ ರಕ್ತದ ಪ್ರಮಾಣ ಕಡಿಮೆಯಾಗುತ್ತದೆ ಎಂಬ ತಪ್ಪು ಕಲ್ಪನೆ ಇದೆ. ಇದನ್ನು ಅವರು ತಮ್ಮ ಮನಸ್ಸಿನಿಂದ ತೆಗೆದು ಹಾಕಬೇಕು, ಕಾರಣ ಒಬ್ಬ ಆರೋಗ್ಯವಂತ ವ್ಯಕ್ತಿ ವರ್ಷದಲ್ಲಿ 5 ಬಾರಿ ರಕ್ತದಾನ ಮಾಡಬಹುದು ಎಂದು ವೈದ್ಯಕೀಯ ವರದಿಗಳಿಂದ ಸಾಬೀತಾಗಿದೆ. ಆದುದರಿಂದ ಸಾರ್ವಜನಿಕರು ಯಾವುದೇ ಅಂಜಿಕೆ ಇಲ್ಲದೆ, ಭಯವಿಲ್ಲದೆ, ನಿರಾತಂಕವಾಗಿ ರಕ್ತದಾನವನ್ನು ಮಾಡುವಂತೆ ಕರೆ ನೀಡಿದರು.

ಈ ಸಮಯದಲ್ಲಿ ಸಾರ್ವಜನಿಕರಿಂದ 250 ಮಿ.ಲೀ.ನ 37 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕು ರೆಡ್‌ಕ್ರಾಸ್ ಕಾರ್ಯದರ್ಶಿ ವೀರಭದ್ರಸ್ವಾಮಿ, ಪದಾಧಿಕಾರಿಗಳಾದ ಶಶಿಧರ್ ಬೆಕ್ಕಡಿ, ರಘು ಧರ್ಮಣ್ಣ, ವೈದ್ಯಕೀಯ ಸಿಬ್ಬಂದಿಯಾದ ಡಾ. ಪ್ರತೀಕ್ ಅಶ್ವತ್ಥ್‌, ಲೀಲಾವತಿ, ಭಾನುಮತಿ, ಹನುಮಂತ, ಶುಶ್ರೂಷಕಿಯರಾದ ನೀಲಾಂಬಿಕೆ, ಶಿಲ್ಪ, ನಾಜಿಮಾ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''