ಬೆಂಗಳೂರಿಗೆ ದಿನನಿತ್ಯ ಕುಡಿವ ನೀರಿನ ಸಮಸ್ಯೆ ಬಾರದಂತೆ ಕ್ರಮ : ಡಿಸಿಎಂ ಡಿ.ಕೆ.ಶಿವಕುಮಾರ್

KannadaprabhaNewsNetwork |  
Published : Sep 24, 2024, 01:50 AM ISTUpdated : Sep 24, 2024, 09:27 AM IST
೨೩ಕೆಎಂಎನ್‌ಡಿ-೪ಹಲಗೂರು ಸಮೀಪದ ತೊರೆಕಾಡನಹಳ್ಳಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿದರು. | Kannada Prabha

ಸಾರಾಂಶ

ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಎದುರಾಗದಂತೆ ತಡೆಯಲು ಕಾವೇರಿ 5 ನೇ ಹಂತದ ಯೋಜನೆಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಈ ಯೋಜನೆಯಿಂದ 50 ಲಕ್ಷ ಜನರಿಗೆ ಅನುಕೂಲವಾಗಲಿದೆ.

  ಹಲಗೂರು :  ಬೆಂಗಳೂರಿನಲ್ಲಿ ದಿನನಿತ್ಯ ಜನಸಂಖ್ಯೆ ಹೆಚ್ಚಾಗುತ್ತಿದ್ದು ಯಾವುದೇ ಕಾರಣಕ್ಕೂ ಅಲ್ಲಿನ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ತಡೆಯುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿರುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಇಲ್ಲಿಗೆ ಸಮೀಪದ ತೊರೆಕಾಡನಹಳ್ಳಿಯ ಕಾವೇರಿ 5 ನೇ ಹಂತದಲ್ಲಿ ನಿರ್ಮಿಸಿರುವ 64 ದಶಲಕ್ಷ ಲೀಟರ್ ಸಾಮರ್ಥ್ಯದ ಶುದ್ಧ ನೀರಿನ ಜಲಾಗಾರ. 775  ದಶ ಲಕ್ಷ ಲೀಟರ್ ಸಾಮರ್ಥ್ಯದ ಜಲರೇಚಕ ಯಂತ್ರಾಗಾರ ಘಟಕದ ಪರಿಶೀಲನೆ ನಡೆಸಿ ಮಾತನಾಡಿದರು.

ಐದೂವರೆ ಸಾವಿರ ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿರುವ ಈ ಯೋಜನೆಯಿಂದ ೫೦ ಲಕ್ಷ ಜನರಿಗೆ ಅನುಕೂಲವಾಗಲಿದೆ. ಒಂದು ವಾರ, 10 ದಿನಗಳಲ್ಲಿ ಕಾಮಗಾರಿ ಪೂರ್ಣ ವಾಗಲಿದೆ. ಯೋಜನೆಗಾಗಿ ಜೈಕಾ ಜೊತೆ ಸಾಲದ ಒಪ್ಪಂದ ಮಾಡಿಕೊಂಡಿದ್ದೇವೆ. 1.45 ಲಕ್ಷ ಮೆಗಾಟನ್ ಸ್ಟೀಲ್ ಪೈಪ್‌ನ್ನು 110 ಕಿಲೋ ಮೀಟರ್ ದೂರದವರೆಗೆ ಅಳವಡಿಸಲಾಗಿದೆ. 110  ಹಳ್ಳಿಗಳು ಹೊಸದಾಗಿ ಬೆಂಗಳೂರು ನಗರಕ್ಕೆ ಸೇರಿದೆ. ಇಲ್ಲಿವರೆಗೆ ನಾಲ್ಕು ಹಂತದಲ್ಲಿ ಬೆಂಗಳೂರಿಗೆ ನೀರನ್ನು ಒದಗಿಸಲಾಗುತ್ತಿತ್ತು. ಈಗ ಒಂದೇ ಹಂತದಲ್ಲಿ 775  ದಶಲಕ್ಷ ಲೀಟರ್ ಸಾಮರ್ಥ್ಯದ ನೀರೊದಗಿಸುವ ಯೋಜನೆಯಾಗಿದೆ. ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ನೀರಿನ ಸಮಸ್ಯೆ ಬಾರದಂತೆ ಕ್ರಮ ವಹಿಸುವುದಾಗಿ ತಿಳಿಸಿದರು.

ಈಗಾಗಲೇ ಬೆಂಗಳೂರಿನಲ್ಲಿ 10 ಲಕ್ಷ ಕನೆಕ್ಷನ್ ಇದೆ. ಕಾವೇರಿ ಐದನೇ ಹಂತದ ಜಾರಿ ಬಳಿಕ 4 ಲಕ್ಷ ಹೊಸ ಸಂಪರ್ಕ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಂಗಳೂರನ್ನು ವಾಟರ್ ಸಪ್‌ಪ್ಲೇಸ್ ಮಾಡಬೇಕೆನ್ನುವುದು ನಮ್ಮ ಗುರಿ. ಅಲ್ಲದೇ, ಒಳಚರಂಡಿ ಕಾಮಗಾರಿಗೂ ಒಂದು ಸಾವಿರ ಕೋಟಿ ರು. ಮೀಸಲಿಟ್ಟಿದ್ದೇವೆ ಎಂದು ನುಡಿದರು.

ಎತ್ತಿನಹೊಳೆ ಯೋಜನೆ ಆಗೋದಿಲ್ಲ ಎಂದಿದ್ದರು. ಅದಕ್ಕೂ ಚಾಲನೆ ಕೊಡಲಾಗಿದೆ. ಟಿಬಿ ಡ್ಯಾಂನ ಕ್ರಸ್ಟ್‌ಗೇಟ್ ಕೂಡ ಅಲ್ಪಾವಧಿಯಲ್ಲೇ ದುರಸ್ತಿಯಾಗಿದೆ. ವಿಪಕ್ಷಗಳಿಗೆ ಟೀಕೆ ಮಾಡುವುದೇ ಕೆಲಸ. ಆದರೆ, ಟೀಕೆಗಳು ಸಾಯುತ್ತವೆ, ನಾವು ಮಾಡುವ ಕೆಲಸಗಳು ಉಳಿಯುತ್ತವೆ. ಹಾಗಾಗಿ ಈ ಯೋಜನೆಯನ್ನು ಅಮಾವಾಸ್ಯೆ ಬಳಿಕ ಉದ್ಘಾಟಿಸುವುದಾಗಿ ಹೇಳಿದರು.

ಮಾಜಿ ಸಚಿವ ಎಸ್.ಟಿ.ಸೋಮಶೇಖರ್, ಶಾಸಕ ಪಿ.ಎಂ.ನರೇಂದ್ರಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಎಸ್.ರವಿ ಇತರರಿದ್ದರು.

ಆರತಿಯೊಂದಿಗೆ ಕಾವೇರಿಗೆ ವಿಶೇಷ ರೂಪ: ಡಿಕೆಶಿ

 ಹಲಗೂರು : ಕಾವೇರಿ ಆರತಿಯ ಮೂಲಕ ಕಾವೇರಿ ನದಿಗೆ ಹೊಸ ರೂಪ ನೀಡುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ಸಮೀಪದ ತೊರೆಕಾಡನಹಳ್ಳಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಕಾವೇರಿ ಆರತಿ ವಿಚಾರವಾಗಿ ನಮ್ಮ ನಿಯೋಗ ವಾರಾಣಸಿ, ಹರಿದ್ವಾರಕ್ಕೆ ಹೋಗಿ ಬಂದಿದೆ. ಇದು ನಮ್ಮ ಭಕ್ತಿ, ಭಾವನೆ ವಿಚಾರ. ಗಂಗೆ ರೀತಿಯಲ್ಲೇ ಕಾವೇರಿಗೂ ಆರತಿ ನಡೆಯುತ್ತದೆ. ಕಾವೇರಿಗೆ ವಿಶೇಷ ರೂಪ ಕೊಡಬೇಕೆಂಬ ಉದ್ದೇಶದಿಂದ ನಾಲ್ಕು ಇಲಾಖೆ ಸೇರಿಕೊಂಡು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ನುಡಿದರು.

ಕಾಟಾಚಾರಕ್ಕೆ ಕಾವೇರಿ ಆರತಿ ಮಾಡುವುದಿಲ್ಲ. ಕಾವೇರಿ ಆರತಿಗೆ ಆರಂಭದಲ್ಲೇ ಅಪಸ್ವರ ಎದುರಾಗಿದೆ ನಿಜ. ಅಪಸ್ಪರದಿಂದ ನಮ್ಮ ಬದ್ಧತೆ ಹೆಚ್ಚಾಗುತ್ತದೆ ಎಂದ ಅವರು, ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣ ಸಂಬಂಧ ನನಗೆ ಮಾಹಿತಿ ಇಲ್ಲ, ಮಾಹಿತಿ ಪಡೆದು ಮಾತನಾಡುತ್ತೇನೆ ಎಂದು ಪ್ರತಿಕ್ರಿಯಿಸಿದರು.

ನಾಲೆ ಎರಡೂ ಕಡೆ ಅರ್ಧ ಕಿ.ಮೀ. ಪಂಪ್‌ಸೆಟ್ ಅಳವಡಿಸುವಂತಿಲ್ಲ: ಡಿಕೆಶಿ

 ಮಂಡ್ಯ : ಮದ್ದೂರು ಮತ್ತು ಮಳವಳ್ಳಿ ಕೊನೆಯ ಭಾಗಕ್ಕೆ ನೀರು ತಲುಪಿಸಲು ಹಾಗೂ ಈ ಭಾಗದ ಕೆರೆ-ಕಟ್ಟೆಗಳನ್ನು ತುಂಬಿಸಿ ರೈತರ ರಕ್ಷಣೆ ಮಾಡಲು ಹೊಸ ಕಾನೂನನ್ನು ತಂದಿರುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ಮಳವಳ್ಳಿ ತಾಲೂಕು ಹಲಗೂರು ಸಮೀಪದ ತೊರೆಕಾಡನಹಳ್ಳಿಯ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಎತ್ತಿನಹೊಳೆಗಾಗಿ ಈ ಕಾನೂನನ್ನು ತಂದಿದ್ದು, ಅದನ್ನೇ ಇಲ್ಲಿಯೂ ಜಾರಿಗೊಳಿಸಲಾಗುವುದು. ಅದರಂತೆ ನಾಲೆ ಅಕ್ಕ-ಪಕ್ಕ ಅರ್ಧ ಕಿ.ಮೀ. ದೂರದವರೆಗೆ ಯಾರೂ ನಾಲೆಗೆ ಪಂಪ್‌ಸೆಟ್‌ಗಳನ್ನು ಅಳವಡಿಸದಂತೆ ಕ್ರಮ ವಹಿಸಲಾಗುವುದು. ನಾಲೆಗಳಿಗೆ ಪಂಪ್‌ಸೆಟ್ ಅಳವಡಿಸುವುದನ್ನು ನಿಯಂತ್ರಿಸಲಾಗುವುದು ಎಂದರು.

ನಾಲೆಯ ಮೇಲ್ಭಾಗದಲ್ಲಿ ನಾಲೆಗಳಿಗೆ ಪಂಪ್‌ ಸೆಟ್ ಅಳವಡಿಸಿರುವುದನ್ನು ಹಂತ ಹಂತವಾಗಿ ತೆರವುಗೊಳಿಸಲಾಗುವುದು. ಈ ಪ್ರಕ್ರಿಯೆಯನ್ನು ಒಂದೇ ಬಾರಿಗೆ ಮಾಡಲಾಗುವುದಿಲ್ಲ. ಇವತ್ತಲ್ಲ ನಾಳೆ ಅದನ್ನು ಮಾಡಲೇಬೇಕಿದೆ. ಈಗಷ್ಟೇ ಹೊಸ ಕಾನೂನನ್ನು ತಂದಿದ್ದೇವೆ. ಮುಂದೆ ಅದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುತ್ತದೆ. ಇದಕ್ಕೆ ಎಲ್ಲಾ ರೈತರೂ ಸಹಕಾರ ನೀಡೇ ನೀಡುತ್ತಾರೆ. ಏಕೆಂದರೆ, ಇಲ್ಲಿರುವವರೂ ರೈತರೇ ಆಗಿರುವುದರಿಂದ ಅವರ ರಕ್ಷಣೆಯೂ ಮುಖ್ಯವಾಗಿದೆ. ಜೊತೆಗೆ ನಾಲೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದಕ್ಕೂ ಕ್ರಮ ವಹಿಸಲಾಗುವುದು ಎಂದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ