ಕನ್ನಡಪ್ರಭ ವಾರ್ತೆ ಸಾಗರ ಸಂಗೀತ, ನೃತ್ಯದಂತಹ ಪ್ರಾಕಾರಗಳು ಮಾನಸಿಕ ವಿಕಸನದ ಜೊತೆಗೆ ಸಾಮರಸ್ಯ ಸಮಾಜ ನಿರ್ಮಾಣಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಉದ್ಯಮಿ ಮಧುಕರ ನರಸಿಂಹ ಹೆಗಡೆ ಹೇಳಿದರು.
ನಗರದ ವೇದನಾದ ಪ್ರತಿಷ್ಠಾನ ಮತ್ತು ಸದ್ಗುರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ವಿದ್ಯಾಲಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಸಂಗೀತೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಸಂಗೀತವನ್ನು ಆಸ್ವಾದನೆ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದರು.ಕಳೆದ 24 ವರ್ಷಗಳಿಂದ ರಾಷ್ಟ್ರೀಯ ಸಂಗೀತೋತ್ಸವ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವುದು ಸಣ್ಣ ಕೆಲಸವಲ್ಲ. ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಕಲಾವಿದರನ್ನು ಇಲ್ಲಿಗೆ ಕರೆಸಿ, ಅವರ ಕಲೆಯನ್ನು ನಮ್ಮೂರಿನ ಜನರು ಆಸ್ವಾದಿಸುವಂತೆ ಮಾಡುವ ಕೆಲಸವನ್ನು ವಿದುಷಿ ವಸುಧಾ ಶರ್ಮ ಮತ್ತವರ ತಂಡ ಮಾಡುತ್ತಿದೆ. ಇಂತಹ ಸಂಗೀತೋತ್ಸವಗಳಿಗೆ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.
ಪಂ.ಮೋಹನ್ ಹೆಗಡೆ ಹುಣಸೆಕೊಪ್ಪ ಮಾತನಾಡಿ, ರಾಷ್ಟ್ರೀಯ ಸಂಗೀತೋತ್ಸವ ನಡೆಸುವುದು ಸುಲಭವಲ್ಲ. ಆದರೆ, ವಿದುಷಿ ವಸುಧಾ ಶರ್ಮ ಹೆಸರಾಂತ ಗಾಯಕಿ, ಕಾರ್ಯಕ್ರಮ ಸಂಘಟಕರಾಗಿ ಇಂತಹ ದೊಡ್ಡಮಟ್ಟದ ಕಾರ್ಯಕ್ರಮ ನಡೆಸುತ್ತಿದ್ದಾರೆ. 3 ದಿನ ನಡೆಯುವ ಸಂಗೀತೋತ್ಸವದಲ್ಲಿ ಖ್ಯಾತನಾಮ ಕಲಾವಿದರು ಭಾಗವಹಿಸುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ ಎಂದರು.ವೇದನಾದ ಪ್ರತಿಷ್ಟಾನ ಅಧ್ಯಕ್ಷ ಎಚ್.ಕೆ. ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು. ವಿದುಷಿ ವಸುಧಾ ಶರ್ಮ, ನರಸಿಂಹಮೂರ್ತಿ ಹಳೇ ಇಕ್ಕೇರಿ, ಮಾಧವ ಭಟ್ ಹಾಜರಿದ್ದರು.
ಅನಂತರ ಶಿರಸಿಯ ಸ್ಮಿತಾ ಹೆಗಡೆ ಅವರಿಂದ ಹಿಂದೂಸ್ತಾನಿ ಗಾಯನ, ಚಲನಚಿತ್ರ ಹಿನ್ನೆಲೆ ಗಾಯಕಿ ವಿದುಷಿ ಚೈತ್ರಾ ಎಚ್.ಜಿ. ಅವರಿಂದ ಭಕ್ತಿ ಸಂಗೀತ, ಉಸ್ತಾದ್ ಶಫೀಕ್ ಖಾನ್ ಧಾರವಾಡ ಮತ್ತು ಶೌರಿ ಶಾನಭೋಗ್ ಬೆಂಗಳೂರು ಅವರಿಂದ ಸಿತಾರ್ ವಾದನ ನಡೆಯಿತು.- - - -14ಕೆ.ಎಸ್.ಎ.ಜಿ.2:
ರಾಷ್ಟ್ರೀಯ ಸಂಗೀತೋತ್ಸವವನ್ನು ಉದ್ಯಮಿ ಮಧುಕರ ನರಸಿಂಹ ಹೆಗಡೆ ವೀಣೆ ನುಡಿಸುವ ಮೂಲಕ ಉದ್ಘಾಟಿಸಿದರು.