ಹಳ್ಳದ ನೀರಿನಲ್ಲಿ ವಿಶ್ರಾಂತಿಗೆ ಜಾರಿದ ಆನೆಗಳ ಹಿಂಡು

KannadaprabhaNewsNetwork | Published : Apr 3, 2025 12:34 AM

ಸಾರಾಂಶ

ನೆತ್ತಿ ಸುಡುವ ಬೇಗೆಗೆ ಹಳ್ಳದ ನೀರಿನಲ್ಲಿ ಆನೆಗಳು ವಿಶ್ರಾಂತಿಗೆ ಜಾರಿದ್ದು, ಮತ್ತೊಂದೆಡೆ ಆನೆಗಳ ಹಿಂಡು ರಸ್ತೆ ದಾಟುವುದನ್ನು ಸಾರ್ವಜನಿಕರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.
ಕನ್ನಡಪ್ರಭ ವಾರ್ತೆ ಹನೂರು

ನೆತ್ತಿ ಸುಡುವ ಬೇಗೆಗೆ ಹಳ್ಳದ ನೀರಿನಲ್ಲಿ ಆನೆಗಳು ವಿಶ್ರಾಂತಿಗೆ ಜಾರಿದ್ದು, ಮತ್ತೊಂದೆಡೆ ಆನೆಗಳ ಹಿಂಡು ರಸ್ತೆ ದಾಟುವುದನ್ನು ಸಾರ್ವಜನಿಕರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.

ಹನೂರು ತಾಲೂಕಿನ ಮಲೆ ಮಾದೇಶ್ವರ ಬೆಟ್ಟಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿ ಸಿಗುವ ಒಡಕೆ ಹಳ್ಳದಿಂದ ಮುಂದೆ ಸಾಗುವ ರಸ್ತೆಯಲ್ಲಿ ಕಾಡಾನೆಗಳ ಹಿಂಡು ನೆತ್ತಿ ಸುಡುವ ಬಿಸಿಲ ಬೇಗೆಗೆ ಅರಣ್ಯ ಪ್ರದೇಶದಲ್ಲಿ ನೀರು ಆಹಾರ ಸಿಗದೇ ಸಂತೆಕಾನಿ ಬಳಿಯ ಹಳ್ಳದ ನೀರಿನಲ್ಲಿ ಮುಳುಗಿ ನೀರಿನ ದಾಹ ನೀಗಿಸಿಕೊಂಡಿವೆ.

ಜಲ ಕ್ರೀಡೆಯಲ್ಲಿ ಗಜ ಪಡೆ:

ಕಳೆದ ಹಲವಾರು ದಿನಗಳಿಂದ ಮಳೆ ಇಲ್ಲದೆ ತತ್ತರಿಸಿರುವ ಅರಣ್ಯ ಪ್ರದೇಶದಲ್ಲಿ ಪ್ರಾಣಿ ಪಕ್ಷಿಗಳು ಸಹ ನೀರಿಗಾಗಿ ತಹಾತಯಿಸುತ್ತಿದ್ದು, ಹೀಗಾಗಿ ಗಜ ಪಡೆ ಸಹ ಅರಣ್ಯ ಪ್ರದೇಶದಲ್ಲಿ ನೀರು ಆಹಾರ ಸಿಗದೇ ನೆತ್ತಿ ಸುಡುವ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಸಂತೆಕಾನೆ ಬಳಿಯ ಹಳ್ಳದಲ್ಲಿ ಜಲ ಕ್ರೀಡೆಯಲ್ಲಿ ಗಜಪಡೆ ತೊಡಗಿಕೊಂಡಿವೆ.

ರಸ್ತೆಗೆ ಅಡ್ಡಲಾಗಿ ನಿಂತ ಆನೆಗಳ ಹಿಂಡು:

ಮಲೆ ಮಾದೇಶ್ವರ ಬೆಟ್ಟದ ಮುಖ್ಯರಸ್ತೆಯಲ್ಲಿ ಕಾಡಾನೆಗಳು ರಸ್ತೆಯಲ್ಲೇ ನಿಂತು ಕೆಲಕಾಲ ವಾಹನ ಸವಾರರಿಗೆ ಆತಂಕ ಸೃಷ್ಟಿಸಿವೆ. ಹೀಗಾಗಿ ವಾಹನ ಸವಾರರು ಸಹ ಆನೆಗಳ ಹಿಂಡನ್ನು ಕಂಡು ಕೆಲಕಾಲ ಅಲ್ಲಿಯೇ ನಿಂತು ಆನೆಗಳ ಪೋಟೋವನ್ನು ಮೊಬೈಲ್ನಲ್ಲಿ ಸೆರೆಹಿಡಿದರು. ಈ ರಸ್ತೆಯಲ್ಲಿ ದಿನನಿತ್ಯ ನೂರಾರು ವಾಹನಗಳು ಸಂಚರಿಸುವುದರಿಂದ ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು, ಕಾಡಾನೆಗಳು ರಸ್ತೆಗೆ ಬರದಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ವಾಹನ ಸವಾರರಿಗೆ ಯಾವುದೇ ಅನಾಹುತ ಸಂಭವಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಜೊತೆಗೆ ಪ್ರಾಣಿಗಳಿಗೂ ಸಹ ಅರಣ್ಯದಲ್ಲಿ ನೀರು ಆಹಾರ ಸಿಗದೇ ರಸ್ತೆಗೆ ಬರುತ್ತಿರುವುದರಿಂದ ಅರಣ್ಯ ಪ್ರದೇಶದ ಆಯಕಟ್ಟಿನ ಸ್ಥಳಗಳಲ್ಲಿ ಪ್ರಾಣಿಗಳಿಗೆ, ಪಕ್ಷಿಗಳಿಗೆ ನೀರಿನ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Share this article