ರಾಜ್ಯದ ಬಡವರ ಪಾಲಿಗೆ ಕಾಂಗ್ರೆಸ್‌ ಅನಿಷ್ಠ ಸರ್ಕಾರ

KannadaprabhaNewsNetwork | Published : Apr 3, 2025 12:34 AM

ಸಾರಾಂಶ

ರಾಜ್ಯದ ಜನರಿಗೆ ಪ್ರತಿದಿನ ಬೆಲೆ ಏರಿಕೆಯ ಬರೆ ಎಳೆಯುವುದೇ ಮುಖ್ಯಮಂತ್ರಿ ಸಿದ್ದರಾಮಯ್ಯನ ಕಾಯಕವಾಗಿದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ರಾಜ್ಯದ ಜನರಿಗೆ ಪ್ರತಿದಿನ ಬೆಲೆ ಏರಿಕೆಯ ಬರೆ ಎಳೆಯುವುದೇ ಮುಖ್ಯಮಂತ್ರಿ ಸಿದ್ದರಾಮಯ್ಯನ ಕಾಯಕವಾಗಿದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಕಿಡಿಕಾರಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಿತ್ಯ ಒಂದಲ್ಲಾ ಒಂದು ವಸ್ತುಗಳ ಬೆಲೆಯನ್ನು ಏರಿಸುತ್ತಲೇ ಇದ್ದಾರೆ. ಇದು ಬಡವರ ಪಾಲಿಗೆ ಇದೊಂದು ಅನಿಷ್ಠದ ಸರ್ಕಾರ. ಎಂದಿಗೆ ಈ ಸರ್ಕಾರ ಹೋಗುವುದೋ ಎಂದು ಜನರು ಹಿಡಿಶಾಪ ಹಾಕುತ್ತಿದ್ದಾರೆ. ಗ್ಯಾರಂಟಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ಜನರ ಶೋಷಣೆ ಮಾಡುತ್ತಿದ್ದಾರೆ. ಗಂಡಸರ ತಲೆ ಒಡೆದು ಅವರಿಂದ ಹಣ ವಸೂಲಿ ಮಾಡಿ ಹೆಂಗಸರಿಗೆ ಹಣ ನೀಡಲಾಗುತ್ತಿದೆ. ಡೀಸೆಲ್, ಪೆಟ್ರೋಲ್, ಹಾಲು, ವಿದ್ಯುತ್ ಬೆಲೆ ಹೆಚ್ಚು ಮಾಡಲಾಗಿದೆ. ಸಾರ್ವಜನಿಕರಿಗೆ ಇದರ ಬಗ್ಗೆ ಲೆಕ್ಕ ನೀಡಿಲ್ಲ. ಮೆಟ್ರೋ ಪ್ರಯಾಣ ದುಬಾರಿಯಾಗಿದೆ. ಲಿಕ್ಕರ್ ನಂತೂ ಕೇಳುವಂತೆಯೇ ಇಲ್ಲ. ಮೂರು ಬಾರಿ ಬೆಲೆ ಹೆಚ್ಚಿಸಲಾಗಿದೆ. ಹಾಲಿನ ಬೆಲೆ ಹೆಚ್ಚು ಮಾಡಲಾಗಿದೆ. ಅದನ್ನು ಹಾಲು ಉತ್ಪಾದಕರಿಗೆ ನೀಡಲಾಗುವುದು ಎಂದು ಹೇಳಿದ್ದಾರೆ. ಆದರೆ ಇದಕ್ಕೆ ಮೊದಲೇ ನಾಲ್ಕು ರುಪಾಯಿಗಳನ್ನು ಕಡಿತಗೊಳಿಸಲಾಗಿತ್ತು. ಈಗ ರೈತರಿಗೆ ನೀಡಲು ಗ್ರಾಹಕರಿಗೆ ಬರೆ ಎಳೆಯಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಹಿಂದಿನಿಂದಲೂ ರೈತರಿಗೆ ನೀಡಬೇಕಿರುವ ಹಾಲಿನ ಪ್ರೋತ್ಸಾಹ ಧನ ಸುಮಾರು ₹600 ಕೋಟಿ ಬಿಡುಗಡೆ ಮಾಡಿಲ್ಲ. ಹೀಗಾದರೆ ರೈತರು ಬಾಳುವುದಾದರೂ ಹೇಗೆ. ರೈತರು ಕಂಗಾಲಾಗಿದ್ದಾರೆ. ಜನರ ತಲೆಯ ಮೇಲೆ ತೆರಿಗೆ ವಿಧಿಸುತ್ತಲೇ ಇರುವುದರಿಂದ ಸಿದ್ದರಾಮಯ್ಯನವರನ್ನು ಟ್ಯಾಕ್ಸ್ ರಾಮಯ್ಯ ಅಂತ ಹೆಸರಿಡಬೇಕಿದೆ. ತಾಲೂಕಿಗೆ ಕಾನೂನು ಕಾಲೇಜು, ಸಿಎಸ್ ಪುರಕ್ಕೆ ಪಾಲಿಟೆಕ್ನಿಕ್, ಜಿಐಸಿ ಕಾಲೇಜು ಕೇಳಿದ್ದೆ. ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಈ ಎಲ್ಲಾ ಸವಲತ್ತುಗಳು ಬೇಕೆಂದರೆ ಕಾಂಗ್ರೆಸ್ ಗೆ ಬಾ ಎಂದು ಕರೆಯುತ್ತಾರೆ. ಇದು ಸರಿಯಲ್ಲ. ಸಿದ್ದರಾಮಯ್ಯ ಕೇವಲ ಕಾಂಗ್ರೆಸ್ಸಿಗರಿಗೇ ಮಾತ್ರ ಮುಖ್ಯಮಂತ್ರಿನಾ?. ಇಂತಹ ಆಡಳಿತ ನಡೆಸಬಾರದು.

ಬಿಜೆಪಿ ಮತ್ತು ಜೆಡಿಎಸ್ ತೆರಿಗೆ ಕಟ್ಟುತ್ತಿಲ್ಲವಾ?. ನಾನ್ಯಾಕೆ ಕಾಂಗ್ರೆಸ್ ಗೆ ಹೋಗಬೇಕು. ಹಾಗಾದರೆ ಸಿದ್ದರಾಮಯ್ಯ ಬಿಜೆಪಿ ಮತ್ತು ಜೆಡಿಎಸ್ ನವರಿಂದ ಟ್ಯಾಕ್ಸ್ ಕಲೆಕ್ಟ್ ಮಾಡುವುದು ಬೇಡ. ಬರೀ ಕಾಂಗ್ರೆಸ್ ಗೆ ಮಾತ್ರ ಅನುದಾನ ನೀಡುವುದಾದರೆ ನಾವ್ಯಾಕೆ ಶಾಸಕರಾಗಿರಬೇಕು. 42 ಲಕ್ಷ ಜನಸಂಖ್ಯೆ ಉಳ್ಳ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದ ಅಭಿವೃದ್ಧಿಗೆ ಕೇವಲ ₹100 ಕೋಟಿ ಮೀಸಲಿಡಲಾಗಿದೆ. ಆದರೆ 67 ಲಕ್ಷ ಜನವಿರುವ ಒಂದು ಸಮುದಾಯಕ್ಕೆ (ಮುಸ್ಲಿಂ) ನಾಲ್ಕುವರೆ ಸಾವಿರ ಕೋಟಿ ರು. ನೀಡಲಾಗುತ್ತಿರುವುದು ಯಾವ ನ್ಯಾಯ. ಇಂತಹ ಮುಖ್ಯಮಂತ್ರಿಗಳಿಂದ ರಾಜ್ಯದ ಜನ ನಿರೀಕ್ಷಿಸುವುದಾದರೂ ಏನನ್ನು? ಎಂದು ಪ್ರಶ್ನಿಸಿದರು.

ತಾಲೂಕಿನಿಂದಲೇ ಬಿಜೆಪಿ ಮತ್ತು ಜೆಡಿಎಸ್ ಹೋರಾಟ ಹಮ್ಮಿಕೊಳ್ಳಲಾಗುವುದು. ಮುಂಬರುವ ಸೋಮವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಎರಡೂ ಪಕ್ಷಗಳ ಮುಖಂಡರ ಸಭೆ ಕರೆದು ದಿನಾಂಕವನ್ನು ಗೊತ್ತುಪಡಿಸಲಾಗುವುದು ಎಂದರು. ಪಕ್ಷದ ವಕ್ತಾರ ವೆಂಕಟಾಪುರ ಯೋಗೀಶ್, ಮುಖಂಡರಾದ ವೆಂಕಟೇಶ್ ಕೃಷ್ಣಪ್ಪ, ಹೆಡಿಗೇಹಳ್ಳಿ ವಿಶ್ವನಾಥ್, ಬಡಗರಹಳ್ಳಿ ತ್ಯಾಗರಾಜ್, ಮುನಿಯೂರು ರಂಗಸ್ವಾಮಿ, ಚಂದ್ರಾಪುರ ರಾಮಚಂದ್ರು, ಗೊಟ್ಟೀಕೆರೆ ಪ್ರಕಾಶ್, ಹೊಸಳ್ಳಿ ದೇವರಾಜು, ದಂಡಿನಶಿವರ ಜಿಬಿ ಗೌಡ. ಹೆಗ್ಗೆರೆ ರಾಜು, ನಟರಾಜು ಉಪಸ್ಥಿತರಿದ್ದರು.

Share this article