ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಅಭ್ಯರ್ಥಿ ಘೋಷಣೆ ಆಗುವ ಮುನ್ನವೇ ಮಾಜಿ ಶಾಸಕ ದಿವಂಗತ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ, ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಅವರ ಪುತ್ರ ಎಂ.ಸರ್ಮಥ್‌ ಶಾಮನೂರು ಅವರು ನಾಮಪತ್ರ ಸಲ್ಲಿಸಿದ್ದಾರೆ

ದಾವಣಗೆರೆ : ರಾಜ್ಯದ ಉಪ ಚುನಾವಣೆ ದಿನಾಂಕ ಘೋಷಣೆ ಆಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಅಭ್ಯರ್ಥಿ ಘೋಷಣೆ ಆಗುವ ಮುನ್ನವೇ ಮಾಜಿ ಶಾಸಕ ದಿವಂಗತ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ, ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಅವರ ಪುತ್ರ ಎಂ.ಸರ್ಮಥ್‌ ಶಾಮನೂರು ಅವರು ನಾಮಪತ್ರ ಸಲ್ಲಿಸಿದ್ದಾರೆ. ಈ ನಡುವೆ ಕಾಂಗ್ರೆಸ್‌ನಿಂದ ಟಿಕೆಟ್‌ ಆಕಾಂಕ್ಷಿ ಆಗಿರುವ ಸಾದಿಕ್‌ ಪೈಲ್ವಾನ್‌ ಅವರೂ ಕೂಡ ನನಗೇ ಬಿಫಾರಂ ಸಿಗುತ್ತದೆ ಎಂದು ಶುಕ್ರವಾರವೇ ಉಮೇದುವಾರಿಕೆ ಸಲ್ಲಿಸಿದ್ದಾರೆ.

ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಏ.9ರಂದು ಚುನಾವಣೆ ನಡೆಯಲಿದೆ. ಬಿಜೆಪಿ ತನ್ನ ಅಭ್ಯರ್ಥಿಯನ್ನಾಗಿ ಶ್ರೀನಿವಾಸ ದಾಸಕರಿಯಪ್ಪ ಅವರ ಹೆಸರನ್ನು ಘೋಷಣೆ ಮಾಡಿದೆ. ಇದರ ಬೆನ್ನಲ್ಲೇ ಅವರೂ ಕೂಡ ಶುಕ್ರವಾರವೇ ನಾಮಪತ್ರ ಸಲ್ಲಿಸಿದ್ದರು.

ಸಮರ್ಥ್‌ 2 ಉಮೇದುವಾರಿಕೆ:

ಸಮರ್ಥ್‌ ಶಾಮನೂರು ತಮ್ಮ ತಾಯಿ, ಸಂಸದೆ ಡಾ। ಪ್ರಭಾ ಮಲ್ಲಿಕಾರ್ಜುನ ಅವರ ಜೊತೆ ತಮ್ಮ ತಾತ ಶಾಮನೂರು ಅವರು ಬಳಸುತ್ತಿದ್ದ ಕೆ.ಎ. 51, ಎಂಆರ್‌ 0555 ಸಂಖ್ಯೆಯ ಇನ್ನೋವಾ ಕಾರಿನಲ್ಲೇ ಆಗಮಿಸಿ ಕ್ಷೇತ್ರದ ಚುನಾವಣಾಧಿಕಾರಿ, ಉಪ ವಿಭಾಗಾಧಿಕಾರಿ ಸಂತೋಷಕುಮಾರ್‌ ಅವರಿಗೆ ನಾಮಪತ್ರ ಸಲ್ಲಿಸಿದರು.

ಅಮೃತ ಸಿದ್ಧಿಯೋಗದ ಹಿನ್ನೆಲೆಯಲ್ಲಿ ನಾಮಪತ್ರ

ಸಾಂಕೇತಿಕವಾಗಿ ಸಮರ್ಥ್‌ ಒಂದು ಕಾಂಗ್ರೆಸ್ ಪಕ್ಷದಿಂದ, ಮತ್ತೊಂದು ಪಕ್ಷೇತರನಾಗಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಶುಕ್ರವಾರ ಶುಭದಿನವಾಗಿದೆ. ಅಮೃತ ಸಿದ್ಧಿಯೋಗದ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ ಎಂಬುದಾಗಿ ಹೇಳಲಾಗಿದೆ. ಅಲ್ಲದೆ ಸಮರ್ಥ್‌ ಸೋಮವಾರ ಮತ್ತೆ 3 ಸೆಟ್ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ತಮಗೇ ಕಾಂಗ್ರೆಸ್‌ನಿಂದ ಬಿಫಾರಂ ಸಿಗಲಿದೆ ಎಂದು ಸರ್ಮಥ್‌ ಮತ್ತು ಪ್ರಭಾ ಮಲ್ಲಿಕಾರ್ಜುನ ವಿಶ್ವಾಸ ವ್ಯಕ್ತಪಡಿಸಿದರು.

ಈ ನಡುವೆ ಟಿಕೆಟ್ ಆಕಾಂಕ್ಷಿ, ಮುಸ್ಲಿಂ ಸಮುದಾಯದ ಹಿರಿಯ ಮುಖಂಡ ಸಾದಿಕ್ ಪೈಲ್ವಾನ್ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ. ಇದೇ ವೇಳೆ ಮಾತನಾಡಿದ ಸಾದಿಕ್ ಪೈಲ್ವಾನ್, ಶುಕ್ರವಾರ ಸಂಜೆ ಅಥವಾ ಶನಿವಾರ ನನಗೆ ಬಿ ಫಾರಂ ಸಿಗುತ್ತದೆಂಬ ವಿಶ್ವಾಸವಿದೆ. ಒಂದು ವೇಳೆ ನನಗೆ ಟಿಕೆಟ್ ಸಿಗದಿದ್ದರೆ, ಮುಸ್ಲಿಂ ಸಮಾಜವು ಫೆ.23ರಂದು ಸೋಮವಾರ ಸೂಕ್ತ ನಿರ್ಧಾರ ಮಾಡುತ್ತದೆ. ಅಲ್ಪಸಂಖ್ಯಾತ ಸಮುದಾಯದಿಂದ ಒಮ್ಮತದ ಅಭ್ಯರ್ಥಿಯ ಸ್ಪರ್ಧೆ ಖಚಿತ ಎಂದರು.