ಕನ್ನಡಪ್ರಭ ವಾರ್ತೆ ದಾವಣಗೆರೆ

ಕಾಂಗ್ರೆಸ್‌ನ ಅಭೇದ್ಯ ಕೋಟೆಯಾದ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಗೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಮನೆಯೊಂದು ಮೂರು ಬಾಗಿಲು ಎಂಬಂತಾಗಿದ್ದ ಬಿಜೆಪಿ ದಿಢೀರ್‌ ಒಗ್ಗಟ್ಟಿನ ಮಂತ್ರ ಶುರು ಮಾಡಿದೆ. ಇತ್ತ ಕಾಂಗ್ರೆಸ್‌ ಪಕ್ಷದಲ್ಲಿ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದ್ದು, ಶಾಮನೂರು ಕುಟುಂಬ ಹಾಗೂ ಮುಸ್ಲಿಂ ಸಮುದಾಯದ ನಡುವೆ ಟಿಕೆಟ್‌ಗಾಗಿ ಪೈಪೋಟಿ ಶುರುವಾಗಿದೆ.

ಮುಸ್ಲಿಮರಿಗೆ ಟಿಕೆಟ್ ಎಂದಿದ್ರಾ ಶಾಮನೂರು?:

ಶಾಮನೂರು ಶಿವಶಂಕರಪ್ಪ ಅವರು ತಮ್ಮ ಕೊನೆಯ ಚುನಾವಣೆ ವೇಳೆ ನನ್ನ ಬಳಿಕ ಮುಸ್ಲಿಮರಿಗೆ ಟಿಕೆಟ್‌ ನೀಡಬೇಕು ಎಂದು ಹೇಳಿದ್ದರು ಎನ್ನಲಾಗಿದೆ. ಇದನ್ನೇ ಮುಂದಿಟ್ಟುಕೊಂಡು ಕ್ಷೇತ್ರದಲ್ಲಿ ನಿರ್ಣಾಯಕ ಸಂಖ್ಯೆಯಲ್ಲಿರುವ ಮುಸ್ಲಿಮರು ತಮಗೆ ಅವಕಾಶ ಕೇಳುತ್ತಿದ್ದಾರೆ.

ಜತೆಗೆ, ಹೈಕಮಾಂಡ್‌ ಸಹ ಶಾಮನೂರು ಅವರ ಕುಟುಂಬವನ್ನು ಒಪ್ಪಿಸಿ ಅಲ್ಪಸಂಖ್ಯಾತರಿಗೆ ಅವಕಾಶ ನೀಡುವ ಯೋಚನೆಯಲ್ಲಿದೆ. ಕಾಂಗ್ರೆಸ್ ಪ್ರಕಾರ ದಾವಣೆಗೆರೆಯಲ್ಲಿ ಯಾವುದೇ ಒಂದು ಜಾತಿ ಅಥವಾ ವರ್ಗವನ್ನು ನೆಚ್ಚಿಕೊಂಡು ಚುನಾವಣೆ ಗೆಲ್ಲುವುದು ಅಸಾಧ್ಯ.


ಹೀಗಾಗಿ ಮುಸ್ಲಿಮರಿಗೆ ಟಿಕೆಟ್‌ ನೀಡಿದರೆ ಶಾಮನೂರು ಕುಟುಂಬದ ವಿಶ್ವಾಸ ಪಡೆಯಬೇಕು. ಶಾಮನೂರು ಕುಟುಂಬಕ್ಕೆ ಟಿಕೆಟ್‌ ನೀಡಿದರೆ ಮುಸ್ಲಿಮರನ್ನು ಒಪ್ಪಿಸಿಯೇ ನೀಡಬೇಕು ಎಂಬ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.

ಮುಸ್ಲಿಮರಲ್ಲೂ ಪೈಪೋಟಿ:

ಮುಸ್ಲಿಂ ಸಮುದಾಯದಿಂದ ಎಂಎಲ್ಸಿ ಅಬ್ದುಲ್ ಜಬ್ಬಾರ್‌, ಹಿರಿಯ ಮುಖಂಡ ಸಾದಿಕ್ ಪೈಲ್ವಾನ್, ಯುವ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ ಸೈಯದ್ ಖಾಲಿದ್ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿವೆ. ಸಚಿವ ಜಮೀರ್ ಮೂಲಕವೂ ಟಿಕೆಟ್‌ಗಾಗಿ ಮುಸ್ಲಿಂ ಮುಖಂಡರು, ಸಮುದಾಯದವರು ಹೈಕಮಾಂಡ್ ಮೇಲೆ ಒತ್ತಡ ಹೇರಲು ಪ್ರಯತ್ನಿಸಿದ್ದು, ಸಭೆಯನ್ನೂ ನಡೆಸಿದ್ದರು.

ಇದರ ಬಗ್ಗೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಡಿ.ಕೆ.ಶಿವಕುಮಾರ್‌ ಅವರು ಅಸಮಾಧಾನ ವ್ಯಕ್ತಪಡಿಸಿದ್ದು, ಧರ್ಮ ಅಥವಾ ಜಾತಿ ಆಧಾರದ ಮೇಲೆ ಸಭೆ ನಡೆಸಬಾರದು ಎಂದು ತಾಕೀತು ಮಾಡಿದ್ದರು ಎಂದು ತಿಳಿದುಬಂದಿದೆ.

ಶಾಮನೂರು ಕುಟುಂಬದಿಂದ ಒತ್ತಡ:

ಇನ್ನು ಶಾಮನೂರು ಶಿವಶಂಕರಪ್ಪ ಅವರಿಂದ ತೆರವಾದ ಕ್ಷೇತ್ರವನ್ನು ತಮಗೆ ನೀಡಬೇಕೆಂದು ಶಾಮನೂರು ಕುಟುಂಬ ಪಟ್ಟು ಹಿಡಿದಿದೆ. ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಹಾಗೂ ಸಂಸದೆ ಪ್ರಭಾ ಅವರು ಪುತ್ರ ಸಮರ್ಥ್‌ಗೆ ಟಿಕೆಟ್‌ ಕೊಡಿಸಲು ತೀವ್ರ ಕಸರತ್ತು ನಡೆಸುತ್ತಿದ್ದಾರೆ. ಮತ್ತೊಂದೆಡೆ ಮಲ್ಲಿಕಾರ್ಜುನ್‌ ಅವರ ಸಹೋದರ ಎಸ್.ಎಸ್.ಗಣೇಶ್ ಕೂಡ ಆಕಾಂಕ್ಷಿ ಎನ್ನಲಾಗಿದೆ.

ಕ್ಷೇತ್ರ ಪುನರ್‌ ವಿಂಗಡಣೆ ವೇಳೆ 2008ರಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರ ಅಸ್ತಿತ್ವಕ್ಕೆ ಬಂದಿದ್ದು, ಅಂದಿನಿಂದ 2023ರವರೆಗೆ ಕಾಂಗ್ರೆಸ್ಸಿನ ಹಿರಿಯ ನಾಯಕ ದಿವಂಗತ ಡಾ.ಶಾಮನೂರು ಶಿವಶಂಕರಪ್ಪ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಾ ಬಂದಿದ್ದಾರೆ. ದಕ್ಷಿಣದ ಸೋಲಿಲ್ಲದ ಸರದಾರರಾಗಿದ್ದ ಶಾಮನೂರು ಅವರ ನಿಧನದಿಂದಾಗಿ ತೆರವಾದ ಸ್ಥಾನಕ್ಕೆ ಅಭ್ಯರ್ಥಿ ಆಯ್ಕೆ ಈಗ ಕಾಂಗ್ರೆಸ್‌ನಲ್ಲಿ ಕಗ್ಗಂಟಾಗಿದೆ.ಒಂದಾಗುವ ದಾರಿಯಲ್ಲಿ ಬಿಜೆಪಿ ಬಣ:

ಕಳೆದ ವಿಧಾನಸಭೆ, ಲೋಕಸಭೆ ಚುನಾವಣೆಗಳ ನಂತರ ಮನೆಯೊಂದು ಹಲವಾರು ಬಾಗಿಲು ಎಂಬಂತಾಗಿದ್ದ ಬಿಜೆಪಿ, ಉಪ ಚುನಾವಣೆ ಘೋಷಣೆಯ ಹೊಸ್ತಿಲಲ್ಲಿ ಒಂದಾಗಿದೆ. ಶಾಮನೂರು ಶಿವಶಂಕರಪ್ಪ ಮತ್ತು ಕುಟುಂಬದ ವಿರುದ್ಧ ನಾಲ್ಕು ಸಲ ಸ್ಪರ್ಧಿಸಿ ತೀವ್ರ ಪೈಪೋಟಿ ನೀಡಿದ್ದ ಬಿಜೆಪಿಯ ಯಶವಂತರಾವ್ ಜಾಧವ್‌, ಕಳೆದ ಚುನಾವಣೆಯಲ್ಲಿ ಶಾಮನೂರು ವಿರುದ್ಧ ಸ್ಪರ್ಧಿಸಿದ್ದ ಬಿ.ಜಿ.ಅಜಯಕುಮಾರ್, ಆಕಾಂಕ್ಷಿಗಳಾದ ಟಿ.ಶ್ರೀನಿವಾಸ ದಾಸಕರಿಯಪ್ಪ, ರಾಜನಹಳ್ಳಿ ಶಿವಕುಮಾರ್‌, ದೇವರಮನಿ ಶಿವಕುಮಾರ್‌ ಇತರರು ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ.

ಬಿಜೆಪಿ ಪಾಲಿಗೆ ಸದಾ ಕಬ್ಬಿಣದ ಕಡಲೆಯಾಗಿರುವ ಈ ಕ್ಷೇತ್ರದಲ್ಲೀಗ, ಶಿವಶಂಕರಪ್ಪ ಇಲ್ಲದಿರುವುದು ಅನುಕೂಲಕರ ಎಂಬ ಮಾತು ಕೇಳಿ ಬರುತ್ತಿದ್ದು, ಕ್ಷೇತ್ರ ಗೆಲ್ಲಲು ಶತಾಯ-ಗತಾಯ ಹೋರಾಟ ಆರಂಭಿಸಿದೆ.

ಎಸ್ಡಿಪಿಐ, ಆಪ್‌, ಓವೈಸಿ ಪಕ್ಷದಿಂದಲೂ ಸ್ಪರ್ಧೆ?:

ಸಾಂಪ್ರಾದಾಯಿಕ ಎದುರಾಳಿಗಳಾದ ಕಾಂಗ್ರೆಸ್-ಬಿಜೆಪಿ ಜೊತೆಗೆ ಇದೀಗ ಎಸ್‌ಡಿಪಿಐ ಹಾಗೂ ಹೈದರಾಬಾದ್‌ನ ಅಸಾದುದ್ದೀನ್ ಓವೈಸಿ ಪಕ್ಷವೂ ಕಣಕ್ಕಿಳಿಯುವ ಸಾಧ್ಯತೆಯಿದೆ. ಬಿಜೆಪಿಗೆ ಜೆಡಿಎಸ್‌-ಜೆಡಿಯು ಸಾಥ್ ನೀಡುವ ನಿರೀಕ್ಷೆ ಇದೆ.

ಜೆಡಿಯು ರಾಜ್ಯಾಧ್ಯಕ್ಷ, ಚನ್ನಗಿರಿ ಮಾಜಿ ಶಾಸಕ ಮಹಿಮಾ ಪಟೇಲ್ ಪಾಟ್ನಾದಲ್ಲಿ ಬೀಡು ಬಿಟ್ಟಿದ್ದು, ಬಿಜೆಪಿ-ಜೆಡಿಯು ಮೈತ್ರಿ ಅಭ್ಯರ್ಥಿಯನ್ನು ದಾವಣಗೆರೆ ದಕ್ಷಿಣಕ್ಕೆ ಕಣಕ್ಕಿಳಿಸುವ ವಿಚಾರದಲ್ಲಿ ರಾಷ್ಟ್ರೀಯ ನಾಯಕರ ಮಟ್ಟದಲ್ಲಿ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.