ಕೇರಳ: ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಅಕ್ರಮ ಸ್ಫೋಟಕಗಳ ಬೃಹತ್ ಸಂಗ್ರಹ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶುಕ್ರವಾರ ಕರ್ನಾಟಕದ ವಿಜಯಪುರ ಜಿಲ್ಲೆ ತಾಳಿಕೋಟೆಯ ಮೂವರನ್ನು ಬಂಧಿಸಿದೆ.

ಪಿಟಿಐ ಮಲಪ್ಪುರಂ (ಕೇರಳ)

ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಅಕ್ರಮ ಸ್ಫೋಟಕಗಳ ಬೃಹತ್ ಸಂಗ್ರಹ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶುಕ್ರವಾರ ಕರ್ನಾಟಕದ ವಿಜಯಪುರ ಜಿಲ್ಲೆ ತಾಳಿಕೋಟೆಯ ಮೂವರನ್ನು ಬಂಧಿಸಿದೆ.

ಮೂವರನ್ನು ಮಾಂತಗೌಡ ಬಿರಾದಾರ್, ಬಾಪಾಗೌಡ ಭೀಮಯ್ಯ ಚೌಧರಿ ಮತ್ತು ಪ್ರಕಾಶಗೌಡ ಬಿರಾದಾರ್ ಎಂದು ಗುರುತಿಸಲಾಗಿದೆ. ಇವರನ್ನು ಕರ್ನಾಟಕದ ಅವರ ತವರು ಜಿಲ್ಲೆ ವಿಜಯಪುರದಿಂದ ಬಂಧಿಸಲಾಗಿದೆ ಎಂದು ಎನ್‌ಐಎ ಹೇಳಿಕೆಯಲ್ಲಿ ತಿಳಿಸಿದೆ.

ಇತ್ತೀಚಿನ ಬಂಧನಗಳೊಂದಿಗೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ 11 ಜನರನ್ನು ಬಂಧಿಸಿದೆ.

ಈ ವರ್ಷ ಫೆಬ್ರವರಿಯಲ್ಲಿ ಕೇರಳ ಪೊಲೀಸರು 89,600 ಜಿಲೆಟಿನ್‌ ಸ್ಫೋಟಕ ಕಡ್ಡಿಗಳು ಮತ್ತು 10,500 ನಾನೆಲ್‌ ಶಾಕ್ ಟ್ಯೂಬ್‌ಗಳನ್ನು ವಶಪಡಿಸಿಕೊಂಡಿದ್ದರು. ಆಗ ಇವು ಕರ್ನಾಟಕದ ತಾಳಿಕೋಟೆಯಿಂದ ಪೂರೈಕೆ ಆಗುತ್ತಿವೆ ಎಂದು ಗೊತ್ತಾಗಿತ್ತು. ನಂತರ ಪ್ರಕರಣವನ್ನು ಎನ್‌ಐಎ ಕೈಗೆತ್ತಿಕೊಂಡಿತ್ತು.

ಆರೋಪಿಗಳು ಪರವಾನಗಿ ಪಡೆದ ವ್ಯಾಪಾರಿಗಳು ಮತ್ತು ಸ್ಫೋಟಕ ಬಳಕೆದಾರರಾಗಿದ್ದರೂ, ಪ್ರಕರಣದಲ್ಲಿ ವಶಪಡಿಸಿಕೊಂಡ ಸ್ಫೋಟಕಗಳನ್ನು ಕಾನೂನನ್ನು ಉಲ್ಲಂಘಿಸಿ ಮಾರಾಟ ಮಾಡಿದ್ದಾರೆ. ಇದರ ಹಿಂದೆ ದೊಡ್ಡ ಹುನ್ನಾರ ಇದೆ ಎಂದು ಎನ್‌ಐಎ ಶಂಕಿಸಿತ್ತು. ಕಳೆದ ತಿಂಗಳು ಈ ಬಂಧಿತ ಮೂವರ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆಗಿತ್ತು.