ಉತ್ತರ ಕರ್ನಾಟಕ ಭಾಗದಲ್ಲಿ ಅಪೌಷ್ಟಿಕತೆಯಿಂದ ರಕ್ತಹೀನತೆ, ಕಬ್ಬಿಣಾಂಶ ಕೊರತೆ ವ್ಯಾಪಕವಾಗಿದೆ. ಇದರಿಂದ ಮಕ್ಕಳ ಎತ್ತರ ಕಡಿಮೆಯಾಗುತ್ತಿದ್ದು, ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ ಎಂದು ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ ಸಂಸ್ಥಾಪಕ ಸದ್ಗುರು ಮಧುಸೂದನ ಸಾಯಿ ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಉತ್ತರ ಕರ್ನಾಟಕ ಭಾಗದಲ್ಲಿ ಅಪೌಷ್ಟಿಕತೆಯಿಂದ ರಕ್ತಹೀನತೆ, ಕಬ್ಬಿಣಾಂಶ ಕೊರತೆ ವ್ಯಾಪಕವಾಗಿದೆ. ಇದರಿಂದ ಮಕ್ಕಳ ಎತ್ತರ ಕಡಿಮೆಯಾಗುತ್ತಿದ್ದು, ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ ಎಂದು ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ ಸಂಸ್ಥಾಪಕ ಸದ್ಗುರು ಮಧುಸೂದನ ಸಾಯಿ ಎಚ್ಚರಿಸಿದರು.

ನಗರದಲ್ಲಿ ಶುಕ್ರವಾರ ನಡೆದ ಸಂಜೆ ಸಂವಾದ ಕಾರ್ಯಕ್ರಮದಲ್ಲಿ ಬಸವ ಸಮಿತಿ ಅಧ್ಯಕ್ಷ ಡಾ.ಅರವಿಂದ ಜತ್ತಿ ಅವರು ಕೇಳಿದ ಪ್ರಶ್ನೆಗಳಿಗೆ ಸುತ್ತರಿಸಿದರು. ಸಾಯಿಶ್ಯೂರ್‌ ಬೆಳಗ್ಗೆ ಪೌಷ್ಟಿಕ ಆಹಾರ ಯೋಜನೆ ಆರಂಭಿಸಿದ ನಂತರ ಪರಿಸ್ಥಿತಿಯಲ್ಲಿ ಬದಲಾವಣೆ ಕಂಡುಬರುತ್ತಿದೆ. ಕರ್ನಾಟಕದಲ್ಲಿ ಪ್ರತಿದಿನ ಒಟ್ಟು 55 ಲಕ್ಷ ಮಕ್ಕಳಿಗೆ ಸಾಯಿಶ್ಯೂರ್‌ ಪೌಷ್ಟಿಕ ಉಪಾಹಾರ ಸಿಗುತ್ತಿದೆ. ವಿಜಯಪುರ ಜಿಲ್ಲೆಯ 3 ಲಕ್ಷ ಮಕ್ಕಳು ಇದರ ಫಲಾನುಭವಿಗಳಾಗಿದ್ದಾರೆ. ರಾಜ್ಯದಲ್ಲಿ ಈ ಯೋಜನೆ ಅನುಷ್ಠಾನಕ್ಕೆ ವರ್ಷಕ್ಕೆ ₹100 ಕೋಟಿ ಖರ್ಚು ಬರುತ್ತಿದೆ. ಅದರಲ್ಲಿ ಸರ್ಕಾರ ₹25 ಕೋಟಿ ಅನುದಾನ ನೀಡುತ್ತಿದೆ ಎಂದು ಸದ್ಗುರುಗಳು ವಿವರಿಸಿದರು.

ಉತ್ತರ ಕರ್ನಾಟಕದಲ್ಲಿ ಬಡತನವಿದೆ. ಹಲವು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಡತನದ ಕಾರಣಕ್ಕೆ ತಾಯಂದಿರು ಜೀವ ಕಳೆದುಕೊಂಡಿದ್ದಾರೆ, ಮಕ್ಕಳು ಅನಾಥವಾಗುತ್ತಿದ್ದಾರೆ. ಇಂತವರನ್ನು ನೋಡಿದಾಗ ಬೇಸರವಾಗುತ್ತೆ ಎಂದು ವಿಷಾದ ವ್ಯಕ್ತಪಡಿಸಿದರು. ಇಷ್ಟು ಮಾಡಿದ್ದೇವೆ ಎನ್ನುವ ತೃಪ್ತಿ ಖಂಡಿತ ನನಗಿಲ್ಲ. ಇಲ್ಲಿ ಮಾಡಬೇಕಾದ್ದು ಇನ್ನೂ ಸಾಕಷ್ಟಿದೆ. ನಮಗೆ ಸರ್ಕಾರ, ಸಮಾಜದ ಸ್ಪಂದನೆ ಚೆನ್ನಾಗಿದೆ. ಸ್ಥಳೀಯ ಜನಪ್ರತಿನಿಧಿಗಳೂ ಕೈಜೋಡಿಸುತ್ತಿದ್ದಾರೆ ಎಂದು ವಿವರಿಸಿದರು. ಇದು ಶರಣರ ನಾಡು. ಇಲ್ಲಿ ಅಧ್ಯಾತ್ಮ ಚಿಂತನೆಗಳು ವ್ಯಾಪಿಸಿದೆ. ಬಸವಣ್ಣನಂತಹ ಚಿಂತಕರು ಬೇರೆ ದೇಶಗಳಲ್ಲಿ ಹುಟ್ಟಲಿಲ್ಲ. ಹೀಗಾಗಿ ಬೇರೆ ದೇಶದವರಿಗೆ ತಮ್ಮ ಸಮುದಾಯ, ದೇಶದ ಚೌಕಟ್ಟು ಮೀರಿ ಯೋಚಿಸುವುದು ಕಷ್ಟ ಎಂದವರು ಅಭಿಪ್ರಾಯಪಟ್ಟರು.

ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕದ ಅಭಿವೃದ್ಧಿ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪ್ರಸ್ತುತ ವಿಜಯಪುರ, ಬಾಗಲಕೋಟೆ, ಕಲಬುರ್ಗಿ, ಗದಗ, ವಿಜಯನಗರ ಜಿಲ್ಲೆಗಳಲ್ಲಿ ನಮ್ಮ ವಿದ್ಯಾ ಸಂಸ್ಥೆಗಳಿವೆ. ವಿಜಯಪುರದ ಇಂಡಿ ತಾಲೂಕು ಅಂಜುಟಗಿ ಸಮೀಪ ಶೀಘ್ರ ಸಾಯಿಸ್ವಾಸ್ಥ್ಯ ಕೇಂದ್ರ ಆರಂಭಿಸಿ ಜನರಿಗೆ ಆರೋಗ್ಯ ಸೇವೆ ಒದಗಿಸಲಾಗುವುದು. 10 ವರ್ಷಗಳಲ್ಲಿ ನಮ್ಮ ಪ್ರಯತ್ನಗಳ ಪರಿಣಾಮ ಗೋಚರಿಸಲಿದೆ ಎಂದು ತಿಳಿಸಿದರು.

ನಮ್ಮ ಗುರುಕುಲ ಇರುವ ಇಂಡಿ ತಾಲೂಕಿನ ಅಂಜುಟಗಿಯಲ್ಲಿ ಗೋಲ್‌ಗುಂಬಜ್‌ಗಿಂತಲೂ ದೊಡ್ಡದಾದ ಒಂದು ದೊಡ್ಡ ಸಭಾಭವನ ಕಟ್ಟುತ್ತಿದ್ದೇವೆ ಎಂದು ತಿಳಿಸಿದರು.

ಜ್ಞಾನ ಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ, ಶಿರಶ್ಯಾಡ ಮಠದ ಅಭಿನವ ಮುರುಘೇಂದ್ರ ಶಿವಾಚಾರ್ಯ ಸ್ವಾಮೀಜಿ, ಮಾಜಿ ಶಾಸಕ ಸೋಮನಗೌಡ ಸಾಸನೂರ, ಚಾಣಕ್ಯ ಕರಿಯರ್ ಅಕಾಡೆಮಿ ಸಂಸ್ಥಾಪಕ ಎನ್.ಎಂ. ಬಿರಾದಾರ, ಎಕ್ಸಲೆಂಟ್ ಸಂಸ್ಥೆ ಅಧ್ಯಕ್ಷ ಬಸವರಾಜ ಕೌಲಗಿ, ಲಿಂಗಾಯತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ವಿ.ಸಿ. ನಾಗಠಾಣ, ಬಾಲ ವಿಕಾಸ ಅಕಾಡೆಮಿ ಮಾಜಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ವೈದ್ಯರು, ಉದ್ಯಮಿಗಳು, ವ್ಯಾಪಾರಸ್ಥರು, ಶಿಕ್ಷಣ ತಜ್ಞರು, ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಅಧ್ಯಕ್ಷ ಡಾ.ಎನ್.ನರಸಿಂಹಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜಯಪುರ ಜಿಲ್ಲೆ ಕನಮಡಿ ಗ್ರಾಮದ ವಿದ್ಯಾರ್ಥಿ ಬಸವರಾಜ ಮಾತನಾಡಿದರು.ಕಾರ್ಯಕ್ರಮದಲ್ಲಿ ತಮ್ಮ ಅನುಭವ ಹಂಚಿಕೊಂಡ ವಿಜಯಪುರ ಜಿಲ್ಲೆಯವರೇ ಆದ ಶ್ರೀ ಸತ್ಯ ಸಾಯಿ ಲೋಕ ಸೇವಾ ಗುರುಕುಲಂನ ಹಿರಿಯ ವಿದ್ಯಾರ್ಥಿ ಹಾಗೂ ಕೋಲಾರದ ಕೃಷಿ ವಿಜ್ಞಾನ ಕಾಲೇಜಿನ ಮುಖ್ಯಸ್ಥ ಸಿದ್ದರಾಮ, ಸಂಸ್ಥೆಯು ನನ್ನ ಬದುಕಿಗೆ ಧ್ಯೇಯ ಕೊಟ್ಟಿತು. ನಾನು ಚಿಕ್ಕ ಬಾಲಕನಿದ್ದಾಗ ಸೇರಿಕೊಂಡ ಸಂಸ್ಥೆಯಲ್ಲಿ ಇಂದು 100 ಮಕ್ಕಳನ್ನು ನೋಡಿಕೊಳ್ಳುವ ಸೌಭಾಗ್ಯ ಸಿಕ್ಕಿದೆ. ಲಕ್ಷಾಂತರ ಕುಟುಂಬಗಳಿಗೆ ಸದ್ಗುರುಗಳಿಂದ ಪರಿವರ್ತನೆಯಾಗಿವೆ ಎಂದು ಭಾವುಕರಾದರು.