ಕನ್ನಡಪ್ರಭ ವಾರ್ತೆ ಬಾಗಲಕೋಟೆ

ರಾಜ್ಯ ಸರಕಾರದ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿ ಉಪಚುನಾವಣೆಯಲ್ಲಿ ಬಾಗಲಕೋಟೆ ಜನತೆ ಕಾಂಗ್ರೆಸ್ ಅಭ್ಯರ್ಥಿಗೆ ಸಂಪೂರ್ಣ ಬೆಂಬಲ ನೀಡಲಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಶನಿವಾರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನೆ ಕೇಂದ್ರ ಶಂಕುಸ್ಥಾಪನೆಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಪಶ್ಚಿಮ ಬಂಗಾಳ, ಕೇರಳ ಹಾಗೂ ಅಸ್ಸಾಂ ರಾಜ್ಯಗಳ ವಿಧಾನಸಭೆ ಚುನಾವಣೆ ಸಂದರ್ಭದಲ್ಲೇ ರಾಜ್ಯದ ಎರಡು ವಿಧಾನಸಭೆ ಮತಕ್ಷೇತ್ರಗಳಿಗೆ ಉಪಚುನಾವಣೆ ನಡೆಯುವ ಸಾಧ್ಯತೆಗಳಿವೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದ್ದು, ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿದರೆ ಅಭಿವೃದ್ಧಿ ಕಾರ್ಯಗಳಿಗೆ ವೇಗ ದೊರೆಯಲಿದೆ ಎಂಬ ದೂರದೃಷ್ಟಿ ಬಾಗಲಕೋಟೆ ಜನತೆಯದ್ದಾಗಿದೆ. ಕೆಪಿಸಿಸಿ ಪ್ರಚಾರ ಸಮಿತಿ ವತಿಯಿಂದ ಉಪಚುನಾವಣೆಗೆ ಸಕಲ ಸಿದ್ಧತೆ ನಡೆಸಲಾಗುತ್ತಿದೆ. ಜಿಲ್ಲಾಮಟ್ಟದ ಪದಾಧಿಕಾರಿಗಳ ಸಹಯೋಗದಲ್ಲಿ ರಾಜ್ಯಮಟ್ಟದ ನಾಯಕರು ಬೇರು ಮಟ್ಟದಿಂದ ತಯಾರಿ ಆರಂಭಿಸಿದ್ದಾರೆ ಎಂದು ತಿಳಿಸಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದೆ. ಬಾಗಲಕೋಟೆಗೆ ನೀಡಿರುವ ವೈದ್ಯಕೀಯ ಮಹಾವಿದ್ಯಾಲಯ ದೊಡ್ಡ ಕೊಡುಗೆಯಾಗಿದೆ. ಸಂತ್ರಸ್ತರ ನೋವಿಗೆ ಸ್ಪಂದಿಸಿರುವ ಸಿಎಂ, ಯುಕೆಪಿ ಮೂರನೇ ಹಂತದ ಯೋಜನೆಗೆ ₹8000 ಕೋಟಿ ನೀಡಿದ್ದು, ಇದರಲ್ಲಿ ಈಗಾಗಲೇ ₹3000 ಕೋಟಿ ಬಿಡುಗಡೆಯಾಗಿದೆ ಎಂದರು.ಮಹಾತ್ಮ ಗಾಂಧಿ ನರೇಗಾ ಯೋಜನೆ ದೇಶದ ಬಡ ಜನತೆಗೆ ಉದ್ಯೋಗ ಒದಗಿಸಿತ್ತು. ಪಂಚಾಯಿತಿ ವ್ಯವಸ್ಥೆಯ ದೊಡ್ಡ ಶಕ್ತಿಯಾಗಿತ್ತು. ಅಂದಾಜು 6000 ಕೋಟಿ ಈ ಯೋಜನೆಗೆ ನಮ್ಮ ಸರಕಾರ ಮೀಸಲಿಟ್ಟಿತ್ತು. ಕೆಲಸವಿಲ್ಲದೆ ಗೋವಾ ಹಾಗೂ ಇತರ ಪ್ರದೇಶಗಳಿಗೆ ಗುಳೆ ಹೋಗುತ್ತಿದ್ದ ಈ ಭಾಗದ ಜನತೆಗೆ ನರೇಗಾ ಯೋಜನೆ ವರದಾನವಾಗಿತ್ತು. ಈ ಯೋಜನೆಗೆ ಕಲ್ಲು ಹಾಕುವ ಮೂಲಕ ಕೇಂದ್ರ ಸರಕಾರ ಗ್ರಾಮೀಣ ಭಾಗದ ಜನರ ಉದ್ಯೋಗದ ಹಕ್ಕನ್ನು ಕಸಿದುಕೊಂಡಿದೆ ಎಂದು ಆರೋಪಿಸಿದ್ದಾರೆ.ಬಾಗಲಕೋಟೆ ವಿಧಾಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ದಿ.ಎಚ್.ವೈ. ಮೇಟಿ ಉತ್ತಮ ಕಾರ್ಯ ಕೈಗೊಂಡಿದ್ದಾರೆ. ವೈದ್ಯಕೀಯ ಕಾಲೇಜ್ ಅವರ ಕನಸಾಗಿತ್ತು. ಈ ಕನಸು ಸಾಕಾರಗೊಂಡಿರುವುದು ಈ ಭಾಗದ ಜನತೆಯಲ್ಲಿ ಸಂತಸ ಮೂಡಿಸಿದೆ. ಯುಕೆಪಿ ಸಂತ್ರಸ್ತರ ಮೊರೆಗೂ ರಾಜ್ಯ ಸರಕಾರ ಸ್ಪಂದಿಸಿದೆ. ಇದರಿಂದ ಜನ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಲಿದ್ದಾರೆ.

- ವಿನಯಕುಮಾರ್ ಸೊರಕೆ. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರು.