ವೈದ್ಯರ ಸಲಹೆ, ಶಿಫಾರಸು ಇಲ್ಲದೇ ಸಾರ್ವಜನಿಕರಿಗೆ ಆ್ಯಂಟಿಬಯೋಟಿಕ್ ಔಷಧಿ ಮಾರುವ ಔಷಧಿ ಅಂಗಡಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಜಿಬಿಎ ಮುಖ್ಯ ಆರೋಗ್ಯಾಧಿಕಾರಿ ಡಾ.ಸೈಯದ್ ಸಿರಾಜುದ್ದೀನ್ ಮದನಿ ಎಚ್ಚರಿಸಿದ್ದಾರೆ.

-ಆ್ಯಂಟಿಮೈಕ್ರೋಬಿಯಲ್ ಪ್ರತಿರೋಧ ಜಾಗೃತಿ ಸಪ್ತಾಹದಲ್ಲಿ ಎಚ್ಚರಿಕೆಕನ್ನಡಪ್ರಭ ವಾರ್ತೆ ಬೆಂಗಳೂರು ವೈದ್ಯರ ಸಲಹೆ, ಶಿಫಾರಸು ಇಲ್ಲದೇ ಸಾರ್ವಜನಿಕರಿಗೆ ಆ್ಯಂಟಿಬಯೋಟಿಕ್ ಔಷಧಿ ಮಾರುವ ಔಷಧಿ ಅಂಗಡಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಜಿಬಿಎ ಮುಖ್ಯ ಆರೋಗ್ಯಾಧಿಕಾರಿ ಡಾ.ಸೈಯದ್ ಸಿರಾಜುದ್ದೀನ್ ಮದನಿ ಎಚ್ಚರಿಸಿದ್ದಾರೆ.

‘ವಿಶ್ವ ಆ್ಯಂಟಿಮೈಕ್ರೋಬಿಯಲ್ ಪ್ರತಿರೋಧ ಜಾಗೃತಿ ಸಪ್ತಾಹ-2026’ ಅಂಗವಾಗಿ ಜಿಬಿಎ ವ್ಯಾಪ್ತಿಯ ಆರೋಗ್ಯ ವೈದ್ಯಾಧಿಕಾರಿಗಳು ಹಾಗೂ ಯುಪಿಎಚ್‌ಸಿ ವೈದ್ಯಾಧಿಕಾರಿಗಳಿಗಾಗಿ ಆರೋಗ್ಯ ಇಲಾಖೆ ಮಹಾನಗರ ಕಣ್ಗಾವಲು ಘಟಕ ಹಾಗೂ ಎ.ಎಂ.ಆರ್‌-ಸೆನ್ಸ್ ಒಕ್ಕೂಟದ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರಾಥಮಿಕ ಆರೋಗ್ಯ ಕೇಂದ್ರಗಳು, ನಮ್ಮ ಕ್ಲಿನಿಕ್‌ಗಳು ಹಾಗೂ ಆಸ್ಪತ್ರೆಗಳಲ್ಲಿ ವೈದ್ಯರು ಸೂಕ್ತ ವೈದ್ಯಕೀಯ ತಪಾಸಣೆ ನಡೆಸಿದ ನಂತರವೇ ಆ್ಯಂಟಿಬಯೋಟಿಕ್‌ಗಳನ್ನು ಶಿಫಾರಸು ಮಾಡಬೇಕು. ಆಸ್ಪತ್ರೆಗೆ ಬರುವವರಲ್ಲಿ ಶೇ.60ರಿಂದ 70ರಷ್ಟು ಪ್ರಕರಣಗಳು ವೈರಲ್ ಸೋಂಕುಗಳಾಗಿವೆ. ಇವುಗಳಿಗೆ ಆ್ಯಂಟಿಬಯೋಟಿಕ್ ಅಗತ್ಯವಿರುವುದಿಲ್ಲ. ಸಾಮಾನ್ಯ ಜ್ವರಕ್ಕೂ ಲಿವೋಫ್ಲೋಕ್ಸಾಸಿನ್, ಸೆಫಿಕ್ಸಿಮ್‌ನಂತಹ ಪ್ರಬಲ ಆ್ಯಂಟಿಬಯೋಟಿಕ್ ಬಳಸುವ ಪ್ರವೃತ್ತಿಗೆ ಡಾ.ಮದನಿ ಆತಂಕ ವ್ಯಕ್ತಪಡಿಸಿದರು.

ಆ್ಯಂಟಿಬಯೋಟಿಕ್ ಔಷಧಿಗಳ ಅನಗತ್ಯ ಮತ್ತು ಅತಿಯಾದ ಬಳಕೆಯಿಂದ ಆಂಟಿಮೈಕ್ರೋಬಿಯಲ್ ಪ್ರತಿರೋಧ ಹೆಚ್ಚಾಗುತ್ತಿದೆ. ಹೀಗಾಗಿ, ವೈದ್ಯರು ಅಗತ್ಯವಿದ್ದಲ್ಲಿ ಬ್ಲಡ್ ಕಲ್ಚರ್ ಸೇರಿದಂತೆ ಸೂಕ್ತ ಪ್ರಯೋಗಾಲಯ ಪರೀಕ್ಷೆಗಳನ್ನು ನಡೆಸಿ, ಬ್ಯಾಕ್ಟೀರಿಯಾ ಸೋಂಕು ದೃಢಪಟ್ಟ ನಂತರವೇ ಚಿಕಿತ್ಸಾ ಮಾರ್ಗಸೂಚಿಗಳಂತೆ ಔಷಧಿಗಳನ್ನು ನೀಡಬೇಕು ಎಂದು ಡಾ.ಮದನಿ ಸಲಹೆ ನೀಡಿದರು.

ಆರೋಗ್ಯ ಇಲಾಖೆಯ ನೋಡಲ್ ಅಧಿಕಾರಿ ಡಾ.ಚಂದ್ರಮೋಹನ್ ಮಾತನಾಡಿದರು. ಜಿಲ್ಲಾ ನೋಡಲ್ ಅಧಿಕಾರಿ ಡಾ.ವೆಂಕಟೇಶ್ ಮಾತನಾಡಿ, ಜಿಬಿಎ ವ್ಯಾಪ್ತಿಯಲ್ಲಿ ಸಾರ್ವಜನಿಕ ಆರೋಗ್ಯ ಕಣ್ಗಾವಲು ವ್ಯವಸ್ಥೆ ಬಲಪಡಿಸಲು ಮಹಾನಗರ ಕಣ್ಗಾವಲು ಘಟಕ ಮತ್ತು ಸೆಂಟ್ರಲ್ ಲ್ಯಾಬ್ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಐಸಿಎಂಆರ್, ಟಾಟಾ 1ಎಂ.ಜಿ ಹಾಗೂ ಇತರ ಸಂಶೋಧನಾ ಸಂಸ್ಥೆಗಳ ಸಹಯೋಗದೊಂದಿಗೆ ಕೈಗೊಂಡಿರುವ ಪ್ರಾಯೋಗಿಕ ಯೋಜನೆಗಳ ಯಶಸ್ಸಿಗೆ ವೈದ್ಯಾಧಿಕಾರಿಗಳ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.