ಬೆಂಗಳೂರು : ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಬಿಡದಿಯಲ್ಲಿ ಸ್ಥಾಪನೆ ಮಾಡಲು ಉದ್ದೇಶಿಸಿರುವ ‘ದೇಶದ ಮೊದಲ ಎಐ ಟೌನ್‌ಶಿಪ್’ ಸಂಬಂಧ ಸರ್ಕಾರ ಹಾಗೂ ಜೆಡಿಎಸ್‌ ನಡುವಣ ಜಟಾಪಟಿ ಈಗ ಮತ್ತೊಂದು ಮಜಲು ತಲುಪಿದೆ. ಈ ಬಗ್ಗೆ ಚರ್ಚೆಗೆ ಸಿದ್ಧವಿದ್ದು, ಜೂ.26ರಂದು ಬೆಳಗ್ಗೆ 11ಕ್ಕೆ ವಿಧಾನಸೌಧದ ತಮ್ಮ ಕಚೇರಿಗೆ ಆಗಮಿಸುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಜೆಡಿಎಸ್‌ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಸೋಮವಾರ ಪಂಥಾಹ್ವಾನ ನೀಡಿದ್ದಾರೆ.

ಸೋಮವಾರ ಬೆಳಗ್ಗೆ ಪತ್ರಿಕಾಗೋಷ್ಠಿ ನಡೆಸಿದ್ದ ಕುಮಾರಸ್ವಾಮಿ, ಬಿಡದಿ ಟೌನ್‌ಶಿಪ್‌ ವಿಚಾರವಾಗಿ ಬಿಡದಿ ಬಳಿಯ ಬೈರಮಂಗಲದಲ್ಲಿ ರೈತರ ಸಮ್ಮುಖ ಬಹಿರಂಗ ಚರ್ಚೆಗೆ ಬರುವಂತೆ ಸವಾಲು ಹಾಕಿದ್ದರು.

ಸಂಜೆ ಈ ಕುರಿತು ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿರುವ ಡಿ.ಕೆ.ಶಿವಕುಮಾರ್‌, ತಾವೇ ಪ್ರಾರಂಭಿಸಿದ ಬಿಡದಿ ಟೌನ್‌ಶಿಪ್‌ ಯೋಜನೆಗೆ ಸಂಬಂಧಿಸಿದಂತೆ ತಮ್ಮ ಜತೆ ನಾನು ಚರ್ಚಿಸಲು ಉತ್ಸುಕನಾಗಿದ್ದೇನೆ. ಜೂ.26ರಂದು ಬೆಳಗ್ಗೆ 11 ಗಂಟೆಗೆ ವಿಧಾನಸೌಧಕ್ಕೆ ತಾವು ಹಾಗೂ ತಮ್ಮ ತಂಡದ ಐದು ಪ್ರತಿನಿಧಿಗಳೊಂದಿಗೆ ನನ್ನ ಕಚೇರಿಗೆ ಆಗಮಿಸಬೇಕು ಎಂದು ಕೋರುತ್ತೇನೆ ಎಂದು ಹೇಳಿದ್ದಾರೆ.


ಬೆಂಗಳೂರು ನಗರದ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಬಿಡದಿಯಲ್ಲಿ ಅತ್ಯಾಧುನಿಕ ಟೌನ್‌ಶಿಪ್‌ ಮಾಡಲು ಸರ್ಕಾರ ಯೋಜನೆ ಹಾಕಿಕೊಂಡು, ಭೂಸ್ವಾಧೀನ ಆರಂಭಿಸಿದೆ. ಆದರೆ ಈ ಯೋಜನೆಗೆ ಜೆಡಿಎಸ್ ವಿರೋಧ ಮಾಡುತ್ತಿದೆ. ರೈತರ ಫಲವತ್ತಾದ ಭೂಮಿಯನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿ ಹೋರಾಟ ನಡೆಸುತ್ತಿದೆ. ಆದರೆ ಈ ಟೌನ್‌ಶಿಪ್‌ ಯೋಜನೆಯ ಪಿತಾಮಹ ಕುಮಾರಸ್ವಾಮಿ ಎಂದು ಡಿಕೆಶಿ ಆದಿಯಾಗಿ ಕಾಂಗ್ರೆಸ್ಸಿಗರು ಹೇಳುತ್ತಲೇ ಬಂದಿದ್ದಾರೆ. ಭಾನುವಾರವಷ್ಟೇ ಯುವ ಜೆಡಿಎಸ್‌ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಅವರು ಬಿಡದಿ ಟೌನ್‌ಶಿಪ್‌ ವಿರೋಧಿಸಿ ಬಿಡದಿಯ ಗ್ರಾಮಗಳಲ್ಲಿ ಪಾದಯಾತ್ರೆ ನಡೆಸಿದ್ದರು.

ಡಿಕೆಶಿ ಪತ್ರದಲ್ಲೇನಿದೆ?

- ಬಿಡದಿ ಟೌನ್‌ಶಿಪ್‌ ಯೋಜನೆಯನ್ನು ಆರಂಭಿಸಿದ್ದೇ ನೀವು (ಎಚ್ಡಿಕೆ)

- ಈ ಯೋಜನೆಗೆ ಸಂಬಂಧಿಸಿದಂತೆ ಚರ್ಚೆಗೆ ನಾನು ಕೂಡ ಉತ್ಸುಕ

- ಜೂನ್‌ 26ರ ಶುಕ್ರವಾರ ಬೆಳಗ್ಗೆ 11 ಗಂಟೆಗೆ ವಿಧಾನಸೌಧಕ್ಕೆ ಬನ್ನಿ

- ನೀವು (ಎಚ್‌ಡಿಕೆ) ಹಾಗೂ ನಿಮ್ಮ ತಂಡದ ಐವರು ಚರ್ಚೆಗೆ ಬರಬೇಕು

- ಅಲ್ಲಿ ಯೋಜನೆಯ ಬಗ್ಗೆ ಸವಿಸ್ತಾರವಾಗಿ ಎಲ್ಲರೂ ಚರ್ಚೆ ಮಾಡೋಣ