ರಾಮನಗರ: ರಾಜ್ಯ ಸರ್ಕಾರ ಬಿಡದಿ ಟೌನ್ ಶಿಪ್ ಯೋಜನೆ ಹೆಸರಿನಲ್ಲಿ ರಿಯಲ್ ಎಸ್ಟೇಟ್ ದಂಧೆ ಮಾಡಲು ಫಲವತ್ತಾದ ಕೃಷಿ ಭೂಮಿಯನ್ನು ವಶ ಪಡಿಸಿಕೊಳ್ಳುತ್ತಿದೆ. ಈ ಯೋಜನೆ ಮೂಲಕ 33 ಸಾವಿರ ಕೋಟಿ ಲಾಭ ಮಾಡಲು ಸರ್ಕಾರ ಹೊರಟಿದೆ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.

ಅರಳಾಳುಸಂದ್ರ ಗ್ರಾಮದಲ್ಲಿ ಸುದ್ದಿಗೋಷ್ಠಿಯಲ್ಲಿ ಸಾಕ್ಷ್ಯಾಧಾರ ಸಮೇತ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸರ್ಕಾರದ ವರದಿಯಲ್ಲಿಯೇ ರಿಯಲ್ ಎಸ್ಟೇಟ್ ದಂಧೆ ಮಾಡುವುದನ್ನು ವರದಿಯಲ್ಲಿದೆ. ರೈತರಿಗೆ ಒಂದು ಎಕರೆಗೆ 2.5 ಕೋಟಿ ಕೊಡುತ್ತೀರಿ. ಆದರೆ, ಇದನ್ನು ಬಿಡಿಬಿಡಿಯಾಗಿ ಮಾರಾಟ ಮಾಡಿ ಎಕರೆಗೆ 25 ಕೋಟಿಯಷ್ಟು ಲಾಭ ಪಡೆಯುತ್ತೀರಿ. ಈ ಯೋಜನೆಯಿಂದ 33,562 ಕೋಟಿ ಲಾಭ ಮಾಡಲು ಸರ್ಕಾರ ಹೊರಟಿದೆ ಎಂದು ಆರೋಪಿಸಿದರು.

ಆರ್ಥಿಕ ಇಲಾಖೆ ಇದಕ್ಕೆ ಒಪ್ಪಿಗೆ ನೀಡದಿದ್ದರೂ ಯೋಜನೆ ಮುಂದುವರೆಸುತ್ತಿದ್ದೀರಿ. ಈ ಯೋಜನೆ ಸರ್ಕಾರಕ್ಕೆ ಹೊರೆ ಅಂತ ಅಧಿಕಾರಿಗಳೇ ಹೇಳುತ್ತಿದ್ದಾರೆ. ಹುಡ್ಕೊದಿಂದ ಸಾಲ ಪಡೆಯಲು ನಿಮ್ಮ ಜಮೀನುಗಳನ್ನೇ ಅಡ ಇಡಬೇಕು. ಸರ್ಕಾರ 33 ಕೋಟಿ ಲಾಭ ಮಾಡಲು ರೈತರ ಭೂಮಿ ಬೇಕಾ ಎಂದು ವಾಗ್ದಾಳಿ ನಡೆಸಿದರು.

ರೈತರ ಹೆಸರಲ್ಲಿ 1 ಸಾವಿರ ಕೋಟಿ ಲಾಭ ಮಾಡಿದರೂ ಅಚ್ಚರಿ ಇಲ್ಲ. ಯಾರ ಉದ್ದಾರಕ್ಕಾಗಿ ಈ ಯೋಜನೆ ಮಾಡುತ್ತಿದ್ದೀರಿ. ದುಡ್ಡೇ ಇಲ್ಲದೇ ಯೋಜನೆ ಮಾಡುವ ಅವಶ್ಯಕತೆ ಇದೆಯಾ ಎಂದು ನಿಖಿಲ್ ಕುಮಾರಸ್ವಾಮಿ ಪ್ರಶ್ನೆ ಮಾಡಿದರು.

ಸರ್ಕಾರಕ್ಕೆ ಕಣ್ಣು ಕಾಣ್ತಿಲ್ಲ, ಕಿವಿ ಕೇಳ್ತಿಲ್ಲ:


ರೈತರ ಬದುಕಾಧಾರಿತ ಜಮೀನುಗಳನ್ನು ಬಲವಂತವಾಗಿ ಕಿತ್ತುಕೊಳ್ಳುವುದು ಸರಿಯಲ್ಲ. ಇದು ಕೇವಲ ರಿಯಲ್ ಎಸ್ಟೇಟ್ ಲಾಭಿಗೆ ಅನುಕೂಲ ಮಾಡಿಕೊಡುವ ಪ್ರಯತ್ನ. ಸ್ಥಳೀಯ ಕೃಷಿಕರನ್ನು ಬೀದಿಗೆ ತಳ್ಳುವಂತಿದೆ. ಈ ಸರ್ಕಾರಕ್ಕೆ ಕಣ್ಣು ಕಾಣ್ತಿಲ್ಲ, ಕಿವಿಯೂ ಕೇಳ್ತಿಲ್ಲ. ಭೈರಮಂಗಲ, ಕಂಚುಗಾರನಹಳ್ಳಿ ಭಾಗದಲ್ಲಿ 450ಕ್ಕೂ ಹೆಚ್ಚು ದಿನಗಳ ಕಾಲ ಹೋರಾಟ ನಡೆದಿದೆ. ರೈತರು ತಮ್ಮ ಸ್ವಂತ ಜಮೀನಿಗಾಗಿ ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದಿದೆ ಎಂದು ಸರ್ಕಾರದ ವಿರುದ್ಧ ಗುಡುಗಿದರು.

ಬಿಡದಿಯ ವಡೇರಹಳ್ಳಿ, ಮಂಡಲಹಳ್ಳಿ, ಕೆಂಪಯ್ಯನಪಾಳ್ಯ ಗ್ರಾಮಗಳನ್ನ ಆಯ್ಕೆ ಮಾಡಿ ಅಧಿಸೂಚನೆ ಹೊರಡಿಸಿರೋ ಬಗ್ಗೆ ಸತ್ಯಾಸತ್ಯತೆ ತಿಳಿಯಬೇಕು. ಈ ಭಾಗದಲ್ಲಿ 1 ಎಕರೆ ಭೂಮಿ ಹೊಂದಿರುವ ರೈತರೇ ಹೆಚ್ಚಾಗಿದ್ದಾರೆ. ಶೇ 80ರಷ್ಟು ಜನ ಗರಿಷ್ಠ 1 ಎಕರೆ ಭೂಮಿ ಹೊಂದಿದ್ದಾರೆ. ಕೆಂಪಯ್ಯನಪಾಳ್ಯದಲ್ಲಿ 354 ಎಕರೆ ನೋಟಿಫಿಕೇಷನ್ ಆಗಿದೆ. ಈ ಭಾಗದ 600 ರೈತರಲ್ಲಿ 500 ಜನ ರೈತರು 1 ಎಕರೆಗಿಂತ ಕಮ್ಮಿ ಜಮೀನು ಹೊಂದಿದ್ದಾರೆ ಎಂದು ತಿಳಿಸಿದರು.

ಭೈರಮಂಗಲ, ಕಂಚುಗಾರನಹಳ್ಳಿ ಭಾಗದಲ್ಲಿ 450ಕ್ಕೂ ಹೆಚ್ಚು ದಿನಗಳ ಕಾಲ ಹೋರಾಟ ನಡೆದಿದೆ. ವೈಯಕ್ತಿಕ ಹಿತಾಶಕ್ತಿಗಾಗಿ ಡಿ.ಕೆ.ಶಿವಕುಮಾರ್ ಅವರು ಬುದ್ದಿವಂತರ ರೀತಿ ಅಧಿಸೂಚನೆ ಮಾಡುತ್ತಿದ್ದಾರೆ‌ ಎಂದು ನಿಖಿಲ್ ಆರೋಪಿಸಿದರು.

ಕನಕಪುರದಲ್ಲಿ ತಮ್ಮ ಕ್ಷೇತ್ರದ ರೈತರಿಗೆ ಜಮೀನು ಮಾರಬೇಡಿ, ಮುಂದೆ ಒಳ್ಳೆಯ ಬೆಲೆ ಸಿಗುತ್ತದೆ ಎನ್ನುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಬಿಡದಿಯ ಬಡ ರೈತರ ಭೂಮಿಯನ್ನು ಬಲವಂತವಾಗಿ ಕಸಿಯಲು ಹೊರಟಿದ್ದಾರೆ. ವೈಯಕ್ತಿಕ ಹಿತಾಸಕ್ತಿಗಾಗಿ ಬುದ್ದಿವಂತರ ರೀತಿ ಅಧಿಸೂಚನೆ ಮಾಡ್ತಿದ್ದಾರೆ ಎಂದು ಆರೋಪಿಸಿದರು.

ರೈತ ಕುಟುಂಬದ ಜೊತೆ ನಿಲ್ಲುವ ಜವಾಬ್ದಾರಿ ನಮ್ಮದು. ಹಾಗಾಗಿ ಈ ಭಾಗದ ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೇವೆ. ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್ ಶಿಪ್ ಸಮಗ್ರವಾಗಿ ಅಭಿವೃದ್ಧಿ ಮಾಡುತ್ತೇವೆ ಅಂದಿದ್ರು. ಈಗ 3 ಗ್ರಾಮಗಳಿಗೆ ಅಧಿಸೂಚನೆ ಹೊರಡಿಸಿದ್ದಾರೆ ಎಂದು ನಿಖಿಲ್ ಟೀಕಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಎ.ಮಂಜುನಾಥ್, ಜಿಲ್ಲಾಧ್ಯಕ್ಷ ಜಯಮುತ್ತು, ತಾಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಪ್ಪ ಹಾಗೂ ರೈತ ಮುಖಂಡರು ಉಪಸ್ಥಿತರಿದ್ದರು.

ಕೋಟ್‌........

ಡಿ.ಕೆ.ಶಿವಕುಮಾರ್ ಇತ್ತೀಚೆಗೆ ಡಿಸಿಎಂನಿಂದ ಸಿಎಂ ಆಗಿದ್ದಾರೆ. ನಮ್ಮ ಜಿಲ್ಲೆಯವರು ಅನ್ನೋ ಕಾರಣಕ್ಕೆ ನಾವೂ ಅಭಿನಂದನೆ ಸಲ್ಲಿಸಿದ್ದೇವೆ. ಆದರೆ ಈ ಯೋಜನೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ರೈತರಿಗೆ ಅನ್ಯಾಯ ಮಾಡೋದು ಯಾಕೆ? ಇದಕ್ಕೆ ನಾವು ಬಿಡಲ್ಲ. ಜೂನ್ 21ರಂದು ಬೃಹತ್ ಪಾದಾಯಾತ್ರೆ ಮೂಲಕ ಹೋರಾಟ ಮಾಡಿ, ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ.

- ನಿಖಿಲ್ ಕುಮಾರಸ್ವಾಮಿ, ರಾಜ್ಯಾಧ್ಯಕ್ಷರು, ಜೆಡಿಎಸ್ ಯುವ ಘಟಕ

14ಕೆಆರ್ ಎಂಎನ್ 1.ಜೆಪಿಜಿ

ಅರಳಾಳುಸಂದ್ರದಲ್ಲಿ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮಾಜಿ ಶಾಸಕ ಎ.ಮಂಜುನಾಥ್, ಜಿಲ್ಲಾಧ್ಯಕ್ಷ ಜಯಮುತ್ತು ಇತರರಿದ್ದರು.