ರಾಮನಗರ ಜಿಲ್ಲೆಯ ಬಿಡದಿ ಮತ್ತು ಹಾರೋಹಳ್ಳಿ ಹೋಬಳಿಯಲ್ಲಿ ಬಲವಂತವಾಗಿ ನಡೆಯುತ್ತಿರುವ ಫಲವತ್ತಾದ ಕೃಷಿ ಭೂಸ್ವಾಧೀನ ಖಂಡಿಸಿ ಶುಕ್ರವಾರ ಉತ್ತರ ಕನ್ನಡ ಜಿಲ್ಲಾ ಜೆಡಿಎಸ್ ಘಟಕದಿಂದ ಅಪರ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲಾಯಿತು.
ಕಾರವಾರ: ರಾಮನಗರ ಜಿಲ್ಲೆಯ ಬಿಡದಿ ಮತ್ತು ಹಾರೋಹಳ್ಳಿ ಹೋಬಳಿಯಲ್ಲಿ ಬಲವಂತವಾಗಿ ನಡೆಯುತ್ತಿರುವ ಫಲವತ್ತಾದ ಕೃಷಿ ಭೂಸ್ವಾಧೀನ ಖಂಡಿಸಿ ಶುಕ್ರವಾರ ಉತ್ತರ ಕನ್ನಡ ಜಿಲ್ಲಾ ಜೆಡಿಎಸ್ ಘಟಕದಿಂದ ಅಪರ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಕೆಯ ಬಳಿಕ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಸೂರಜ್ ನಾಯ್ಕ ಸೋನಿ, ಸಾರ್ವಜನಿಕ ಹಿತಾಸಕ್ತಿಯ ಹೆಸರಿನಲ್ಲಿ ನಡೆಯುತ್ತಿರುವ ಈ ಯೋಜನೆಯು ವಾಸ್ತವದಲ್ಲಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಸರ್ಕಾರದ ಬೃಹತ್ ರಿಯಲ್ ಎಸ್ಟೇಟ್ ಮಾಫಿಯಾವಾಗಿದೆ. ಇದು ಬಡ ರೈತರ ಜಮೀನು ಕಸಿದು ಮಾಡುವ ₹33,562 ಕೋಟಿ ಮೊತ್ತದ ದಂಧೆಯಾಗಿದೆ. ಆರ್ಥಿಕ ಇಲಾಖೆಯ ವಿರೋಧದ ನಡುವೆಯೂ ಈ ಯೋಜನೆಗೆ ₹9,011 ಕೋಟಿಗಳ ಸರ್ಕಾರಿ ಗ್ಯಾರಂಟಿ ನೀಡಲಾಗಿದೆ. ಅಷ್ಟೇ ಅಲ್ಲದೆ, ₹3,650 ಕೋಟಿ ಮೌಲ್ಯದ ಬಿಡಿಎ ಮತ್ತು ಬಿಎಂಆರ್‌ಡಿಎ ಸಾರ್ವಜನಿಕ ಆಸ್ತಿಗಳನ್ನು ಹುಡ್ಕೋ ಬ್ಯಾಂಕಿನಲ್ಲಿ ಅಡಮಾನ ಇಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.ಮುಂದಿನ ದಿನಗಳಲ್ಲಿ ಇಡೀ ಬಿಡದಿ ಭಾಗದ 7,481ರಿಂದ 9,600 ಎಕರೆಗಳಷ್ಟು ಫಲವತ್ತಾದ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳುವ ಹುನ್ನಾರವನ್ನು ಸರ್ಕಾರ ನಡೆಸುತ್ತಿದೆ ಎಂದು ಅವರು ಆರೋಪಿಸಿದರು.
ಈ ಭಾಗದ ರೈತರು ಹೈನುಗಾರಿಕೆ, ರೇಷ್ಮೆ ಕೃಷಿ, ಹಾಗೂ ಹೂವು ಮತ್ತು ತುಳಸಿ ಮಾಲೆ ಕಟ್ಟುವಂತಹ ಸಣ್ಣ ಕಸುಬುಗಳ ಮೂಲಕ ಸ್ವಾವಲಂಬಿ ಜೀವನ ರೂಪಿಸಿಕೊಂಡಿದ್ದಾರೆ. ಸ್ಮಾರ್ಟ್ ಸಿಟಿ ಹೆಸರಿನಲ್ಲಿ 10 ಲಕ್ಷಕ್ಕೂ ಹೆಚ್ಚು ಮರಗಳನ್ನು ಕಡಿಯುವ ಮೂಲಕ ಪರಿಸರ ಮಾರಣಹೋಮ ಮಾಡಲು ಸರ್ಕಾರ ಮುಂದಾಗಿದೆ. ಜೆಡಿಎಸ್ ಅಭಿವೃದ್ಧಿ ವಿರೋಧಿಯಲ್ಲ, ಆದರೆ ರೈತರಿಗೆ ಅನ್ಯಾಯವಾಗುವುದನ್ನು ಯಾವ ಕಾರಣಕ್ಕೂ ಸಹಿಸುವುದಿಲ್ಲ. ಸರ್ಕಾರಕ್ಕೆ ಟೌನ್‌ಶಿಪ್ ನಿರ್ಮಿಸುವ ಉದ್ದೇಶವಿದ್ದರೆ, ಸಾಕಷ್ಟು ಭೂಮಿ ಲಭ್ಯವಿರುವ ನೆಲಮಂಗಲದ ಬಳಿ ಯೋಜನೆ ರೂಪಿಸಲಿ. ಆದರೆ ಫಲವತ್ತಾದ ''ಗ್ರೀನ್ ಜೋನ್''ನಲ್ಲಿ ಯಾವುದೇ ಕಾರಣಕ್ಕೂ ಟೌನ್‌ಶಿಪ್ ಬೇಡ. ತಕ್ಷಣವೇ ಈ ಭೂಸ್ವಾಧೀನದ ಅಂತಿಮ ಅಧಿಸೂಚನೆಯನ್ನು ರದ್ದುಗೊಳಿಸಿ, ರೈತರ ಬದುಕನ್ನು ರಕ್ಷಿಸಬೇಕು ಎಂದು ಸೂರಜ್ ನಾಯ್ಕ ಸೋನಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.ಜಿಲ್ಲಾ ಘಟಕದ ಕಾರ್ಯದರ್ಶಿ ಉದಯ ತಿಮ್ಮಪ್ಪ ನಾಯ್ಕ, ಮುಖಂಡರಾದ ಉಪೇಂದ್ರ ಪೈ, ಮೋಹಿನಿ ನಾಯ್ಕ, ಸಂದೀಪ ಬಂಟ್, ಸಿ.ಜಿ. ಹೆಗಡೆ ಮತ್ತಿತರರು ಇದ್ದರು.
