ಕನ್ನಡಪ್ರಭ ವಾರ್ತೆ ಬೇಲೂರು ತಾಲೂಕಿನ ಮಲೆನಾಡು ಭಾಗದಲ್ಲಿ 40ಕ್ಕೂ ಹೆಚ್ಚು ಕಾಡಾನೆಗಳು ಬೀಡುಬಿಟ್ಟಿದ್ದು, ದನಕರುಗಳಂತೆ ರಾಜಾರೋಷವಾಗಿ ರಸ್ತೆಯಲ್ಲಿ ಓಡಾಡುತ್ತಿದ್ದು ವಾಹನ ಸವಾರರು, ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಪ್ರಾಣಭಯದಲ್ಲಿ ನಡೆದಾಡುವಂಥಾಗಿದೆ.
ತಾಲೂಕಿನ ಜಾಕನಹಳ್ಳಿ, ನೇರಲಕಟ್ಟೆ ಹಾಗೂ ಚೀಕನಹಳ್ಳಿ ಬಿಕ್ಕೋಡು ಹೋಬಳಿ ಗ್ರಾಮಗಳಲ್ಲಿ ಸುಮಾರು 40ಕ್ಕೂ ಹೆಚ್ಚು ಕಾಡಾನೆಗಳು, ಕಾಫಿ ತೋಟಗಳ ಮೇಲೆ ದಾಳಿ ಮಾಡಿ ತಂತಿ ಬೇಲಿ ಕಂಬಗಳನ್ನು ನೆಲಕ್ಕೆ ಬೀಳಿಸಿ ಬೆಳೆಗಳನ್ನು ಹಾಳು ಮಾಡುತ್ತಿರುವ ಬಗ್ಗೆ ರೈತರು ಗ್ರಾಮಸ್ಥರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಕಾಫಿ ತೋಟ, ಮೆಣಸು, ಅಡಿಕೆ , ಭತ್ತ ಇನ್ನಿತರೆ ಬೆಳೆಗಳನ್ನು ತುಳಿದು ಹಾಳು ಮಾಡುತ್ತಿವೆ. ಆನೆಗಳು ಗುಂಪುಗುಂಪಾಗಿ ರಾಜ ರೋಷವಾಗಿ ಓಡಾಡುತ್ತಿದ್ದು, ಗ್ರಾಮಸ್ಥರು ಹಾಗೂ ರೈತಾಪಿ ವರ್ಗದವರು ಮನೆಯಿಂದ ಹೊರಬರಲು ಹೆದರುತ್ತಿದ್ದು ಪ್ರಾಣ ಕೈಯಲ್ಲಿ ಹಿಡಿದು ಜೀವನ ನಡೆಸುವಂತಾಗಿದೆ. ನೇರಲಕಟ್ಟೆ, ಜಾಕನಹಳ್ಳಿ ಭಾಗಗಳಲ್ಲಿ ಸುಮಾರು 40ಕ್ಕೂ ಹೆಚ್ಚು ಆನೆಗಳು ಕಾಫಿ ತೋಟಗಳಲ್ಲಿ ಬೀಡುಬಿಟ್ಟಿವೆ. ಅರಣ್ಯ ಇಲಾಖೆ ಹಾಗೂ ಸರ್ಕಾರದ ವತಿಯಿಂದ ಆನೆಗಳ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗದೆ ರೈತರು ಕಂಗಾಲಾಗಿದ್ದಾರೆ. ಬೆಳೆಗಾರರು ಮಾಡಿದ ಸಾಲ ಆನೆಗಳ ದಾಳಿಯಿಂದ ಬೆಳೆ ನಾಶವಾಗಿ ಫಸಲು ಸಿಗದೆ ಸಾಲ ತೀರಿಸಲಾಗದೆ ಪರದಾಡುವಂತಾಗಿದೆ. ಕೆಲವು ಗ್ರಾಮಗಳ ಕಾಫಿ ತೋಟದಲ್ಲಿ ಒಂದು ಕಾಫಿ ತೋಟದಿಂದ ಇನ್ನೊಂದು ತೋಟಕ್ಕೆ ಹೋಗುವ ರಸ್ತೆ ಮಾರ್ಗದಲ್ಲಿ ಸುಮಾರು 40ಕ್ಕೂ ಹೆಚ್ಚು ಕಾಡಾನೆಗಳು ದನಕರುಗಳಂತೆ ಒಂದರ ಜೊತೆ ಇನ್ನೊಂದು ಹಿಂಡಾಗಿ ಹೋಗುವ ದೃಶ್ಯ ಸಾಮಾನ್ಯವಾಗಿದೆ. ವಾಹನ ಸವಾರರು ಕೂಡ ಇದರಿಂದ ಭಯಭೀತರಾಗಿ ತಮಗೆಲ್ಲಿ ಕಾಡಾನೆಗಳ ಹಿಂಡು ಎದುರಾಗುತ್ತದೆ ಎಂಬ ಭೀತಿಯಲ್ಲಿ ಓಡಾಡುವಂತಾಗಿದೆ. ಕಾಫಿ ಬೆಳೆಗಾರ ಸಂಘದ ಅಧ್ಯಕ್ಷ ಅದ್ಧೂರಿ ಚೇತನ್ ಕುಮಾರ್ ಮಾತನಾಡಿ, ಮಲೆನಾಡು ಭಾಗದಲ್ಲಿ ಕಾಡಾನೆಗಳ ದಾಳಿಯಿಂದ ಸಾಕಷ್ಟು ಅವಾಂತರವಾಗುತ್ತಿದ್ದರೂ ಅರಣ್ಯ ಇಲಾಖೆ ಮಾತ್ರ ಕಣ್ಣಮುಚ್ಚಿ ಕುಳಿತಿದೆ. ಅಧಿಕಾರಿಗಳು ಶ್ರೀಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಸರ್ಕಾರ ಕೂಡ ಇದರ ಕಡೆ ಗಮನ ಹರಿಸದೇ ಉಚಿತ ಗ್ಯಾರಂಟಿ ಯೋಜನೆಗೆ ಪ್ರಾಮುಖ್ಯತೆ ನೀಡಿ ಕಾಡಾನೆ ದಾಳಿಯಿಂದ ಬೇಸತ್ತಿರುವ ಬೆಳೆಗಾರರ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ.ಮಳೆಯ ಆರ್ಭಟಕ್ಕೆ ಕಾಫಿ ಗಿಡಗಳಿಗೆ ಮಳೆ, ರೋಗ, ಕೀಟಗಳಿಂದ ಬೆಳೆ ಹಾನಿಯಾಗಿ ಸಾಕಷ್ಟು ನಷ್ಟ ಆಗಲಿದೆ. ಔಷಧಿ ಸಿಂಪಡಿಸಲು ಇದು ಸರಿಯಾದ ಸಮಯವಾಗಿದೆ. ಆದರೆ ಕಾಡಾನೆಗಳ ಹಾವಳಿಗೆ ಹೆದರಿ ಕೂಲಿ ಕಾರ್ಮಿಕರು ಕೆಲಸಕ್ಕೆ ಬರುತ್ತಿಲ್ಲ. ಕೂಲಿ ಕಾರ್ಮಿಕರು ತೋಟದ ಕೆಲಸವನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಕಾಡಾನೆಗೆ ಹೆದರಿ ಮನೆಯಲ್ಲಿ ಕುಳಿತರೆ ಅವರು ಜೀವನ ನಿರ್ವಹಣೆ ಮಾಡಲು ಹೇಗೆ ಸಾಧ್ಯ. ಅರಣ್ಯ ಇಲಾಖೆ ಅಧಿಕಾರಿಗಳು ಕೆಲಸ ಮಾಡಲಿ ಬಿಡಲಿ, ಪ್ರತಿ ತಿಂಗಳು ಸಂಬಳ ಬರುತ್ತದೆ. ಆದರೆ ಕೂಲಿ ಕಾರ್ಮಿಕರು ಕೆಲಸ ಮಾಡಿದರೆ ಮಾತ್ರ ಸಂಬಳ ಇಲ್ಲದೆ ಇದ್ದರೆ ಅವರ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಕಳೆದ ತಿಂಗಳು ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆಯವರು ಬಂದಾಗ ಆನೆಧಾಮ ನಿರ್ಮಿಸಿ ಸಮಸ್ಯೆ ಪರಿಹಾರ ಮಾಡುವುದಾಗಿ ಹೇಳಿದ್ದರು. ಅವರು ರೈತರ ಕಣ್ಣೊರೆಸಲು ಹೇಳಿಕೆ ನೀಡುತ್ತಿದ್ದಾರೆ. ಕೂಡಲೇ ಸರ್ಕಾರ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಆನೆಗಳ ಹಾವಳಿಗೆ ಶಾಶ್ವತ ಪರಿಹಾರ ನೀಡಬೇಕು. ಇಲ್ಲವಾದರೆ ತಾಲೂಕು ಬಂದ್ ಮಾಡಿ ಉಗ್ರ ರೀತಿಯಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.