ಕನ್ನಡಪ್ರಭ ವಾರ್ತೆ ಮೈಸೂರು
ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಲಹಾ ಸಮಿತಿ ಮುಖ್ಯಸ್ಥರನ್ನಾಗಿ ಸಿದ್ದರಾಮಯ್ಯ ಅವರನ್ನು ನಿಯೋಜಿಸಲು ವೇದಿಕೆ ಸಿದ್ಧವಾಗಿದೆ. ಇನ್ನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಷ್ಟೇ ಬಾಕಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭವಿಷ್ಯ ನುಡಿದರು.ನಗರ ಬಿಜೆಪಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹೈಕಮಾಂಡ್ ಶಾಸಕರಿಂದ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ಮುಖ್ಯಮಂತ್ರಿ ಸ್ಥಾನ ಬದಲಾವಣೆಗೆ ಎಲ್ಲಾ ರೀತಿಯ ಸಿದ್ಧತೆಯೂ ಆಗಿದೆ. ರಾಷ್ಟ್ರಮಟ್ಟದಲ್ಲಿ ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಲಹಾ ಸಮಿತಿ ಮುಖ್ಯಸ್ಥರನ್ನಾಗಿ ನಿಯೋಜಿಸಿ ಹೊಸದಿಲ್ಲಿಗೆ ಕಳುಹಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗ ಸಿದ್ದರಾಮಯ್ಯ ರಾಜೀನಾಮೆ ಕೊಡುವುದು ಮಾತ್ರವೇ ಬಾಕಿ ಎಂದರು.
ಸಿದ್ದರಾಮಯ್ಯ ಒಂದೆರಡು ತಿಂಗಳಲ್ಲಿಯೇ ರಾಜೀನಾಮೆ ನೀಡುವುದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಶಾಸಕ ಇಕ್ಬಾಲ್ ಹುಸೇನ್ ಹೇಳುವಂತೆ ಡಿ.ಕೆ. ಶಿವಕುಮಾರ್ ಅವರಿಗೆ ನೂರು ಶಾಸಕರ ಬೆಂಬಲವಿದೆ ಎನ್ನುತ್ತಾರೆ. ಸಿದ್ದರಾಮಯ್ಯ ಬಳಿಕ ಯಾರು ಸಿಎಂ ಆಗುತ್ತಾರೆ ಎಂಬುದಕ್ಕಿಂತ ಈ ಸರ್ಕಾರ ಇರಬೇಕ ಬೇಡವಾ ಎಂಬುದು ಮುಖ್ಯ. ಏಕೆಂದರೆ ಜನ ಈಗಲೇ ಹಿಡಿ ಶಾಪ ಹಾಕುತ್ತಿದ್ದಾರೆ ಎಂದು ಅವರು ಹೇಳಿದರು.ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರು ಆರ್ಥಿಕ ಪರಿಸ್ಥಿತಿ ಬಗ್ಗೆ ಹೇಳಿದ್ದಾರೆ. ರಸ್ತೆ ಆಗಬೇಕು ಎಂದರೆ ಅಕ್ಕಿ ಬೇಡ ಎನ್ನುವ ಪ್ರಶ್ನೆ ಮುಂದಿಟ್ಟಿದ್ದಾರೆ. ಇದು ದುರಹಾಂಕಾರದ ಮಾತು. ರಾಜ್ಯದಲ್ಲಿ ಹಣಕಾಸಿನ ಸ್ಥಿತಿ ಹದಗೆಟ್ಟಿರುವುದಕ್ಕೆ ಇದು ಸಾಕ್ಷಿದೆ ಎಂದು ಟೀಕಿಸಿದರು.
ಕೇಂದ್ರದಿಂದ ರಾಜ್ಯಕ್ಕೆ ಸಾವಿರಾರು ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. 1,860 ಕಿಮೀ. ರಸ್ತೆ ನಿರ್ಮಿಸಲಾಗಿದೆ. ರೈಲ್ವೆ ವಿದ್ಯುದೀಕರಣ, ರಾಜ್ಯಕ್ಕೆ ಹೆಚ್ಚುವರಿ ರೈಲುಗಳ ಓಡಾಟಕ್ಕೆ ಅನುಕೂಲವಾಗಿದೆ. ರೈತರಿಗೆ ಬೇಕಾದ ರಸಗೊಬ್ಬರ, ಪ್ರತಿ 50 ಕೆಜಿ ಯೂರಿಯಾಗೆ 2,189 ರೂ. ಸಬ್ಸಿಡಿ ಕೊಡಲಾಗುತ್ತಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಶಾಸಕ ಟಿ.ಎಸ್. ಶ್ರೀವತ್ಸ, ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ, ಜಿಲ್ಲಾಧ್ಯಕ್ಷ ಕುಂಬ್ರಳ್ಳಿ ಸುಬ್ಬಣ್ಣ, ಮಾಜಿ ಶಾಸಕರಾದ ಸಿ.ಎಸ್. ನಿರಂಜನಕುಮಾರ್, ಬಿ. ಹರ್ಷವರ್ಧನ್, ಮಾಜಿ ಸಂಸದ ಪ್ರತಾಪ್ ಸಿಂಹ, ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್, ಎಂ.ರಾಜೇಂದ್ರ, ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಆರ್. ರಘು ಕೌಟಿಲ್ಯ, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಡಾ. ಅನಿಲ್ ಥಾಮಸ್, ಮಾಜಿ ಮೇಯರ್ ಸಂದೇಶ್ ಸ್ವಾಮಿ, ಪ್ರಕೋಷ್ಠ ಸಂಚಾಲಕ ಎನ್.ವಿ. ಫಣೀಶ್, ರಾಜ್ಯ ಮುಖ್ಯ ವಕ್ತಾರ ಎಂ.ಜಿ. ಮಹೇಶ್ ಇದ್ದರು.
---ಕೋಟ್
ಹೈಕಮಾಂಡ್ ಕೈಗೊಳ್ಳುವ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಿದ್ದೇವೆ. ಕಳೆದ ಒಂದೂವರೆ ವರ್ಷಗಳಿಂದ ಪಕ್ಷ ಸಂಘಟನೆಗೆ ಕೆಲಸ ಮಾಡಿದ್ದೇನೆ. ನನ್ನ ನಗು ನೋಡಿದರೆ ಬದಲಾವಣೆಯಾಗುವಂತೆ ಕಾಣಿಸುತ್ತಿದೆಯೇ? ನನ್ನನ್ನೇ ಮುಂದುವರೆಸುವ ವಿಶ್ವಾಸವಿದೆ.- ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ.-- ಬಾಕ್ಸ್-- 1-- ಜನರಿಗೆ ಜೇಬಿಗೆ ಕತ್ತರಿ--ರಾಜ್ಯದ ಕಾಂಗ್ರೆಸ್ ಸರ್ಕಾರದಿಂದ ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಬಡವರು, ರೈತರು ಮತ್ತು ಜನ ಸಾಮಾನ್ಯರ ಜೇಬಿಗೆ ಕತ್ತರಿ ಹಾಕಲಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿರುವುದರಿಂದ ಬಡವರ ಬದುಕು ದುಸ್ತರವಾಗಿದೆ. ರೈತರು ಹೊಲದಲ್ಲಿ ಟಿಸಿ ಹಾಕಿಸಿಕೊಳ್ಳಲು 2.50 ಲಕ್ಷ ರು. ಪಾವತಿಸಬೇಕಿದೆ. ಪೆಟ್ರೋಲ್, ಡೀಸೆಲ್, ಹಾಲು ಮುಂತಾದ ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗಿದೆ ಎಂದರು.ರಾಜ್ಯದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದ್ದು, ನಗರ ಪ್ರದೇಶದಲ್ಲಿ ಆಸ್ತಿ ತೆರಿಗೆ ದುಪ್ಪಟ್ಟು ಹೆಚ್ಚಿಸುವ ಹುನ್ನಾರ ನಡೆಯುತ್ತಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ 185 ಕೋಟಿ ರು. ಹಗರಣ ನಡೆಸಿ ತೆಲಂಗಾಣ ಚುನಾವಣೆ ನಡೆಸಲಾಗಿದೆ. ಇದರ ವಿರುದ್ಧ ಬಿಜೆಪಿ ಸಂಘಟನಾತ್ಮಕ ಹೋರಾಟ ನಡೆಸಿದ್ದರಿಂದ ಸಚಿವ ಬಿ. ನಾಗೇಂದ್ರ ರಾಜೀನಾಮೆ ನೀಡುವಂತಾಯಿತು. ಎಂಡಿಎ ಹಗರಣ ಸಂಬಂಧ ನಾವು ಪಾದಯಾತ್ರೆ ನಡೆಸಿದ್ದರಿಂದಲೇ ತಮ್ಮ ನಿವೇಶನಕ್ಕೆ ಪರಿಹಾರ ಕೊಡಿ ಎನ್ನುತ್ತಿದ್ದ ಸಿಎಂ ಸಿದ್ದರಾಮಯ್ಯ ಅವರು ಒಂದು ರೂಪಾಯಿಯನ್ನೂ ಪಡೆಯದೆ ಹಿಂದಿರುಗಿಸಿದ್ದಾಗಿ ಅವರು ಕಟುವಾಗಿ ಟೀಕಿಸಿದರು.--ಬಾಕ್ಸ್ 2--ವರ್ಷದ ಹಿಂದೆಯೇ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕಿತ್ತಾದರೂ ಸಿದ್ದರಾಮಯ್ಯ ಭಂಡತನದಲ್ಲಿ ಅಧಿಕಾರದಿಂದ ಮುಂದುವರಿಯುತ್ತಿದ್ದಾರೆ. ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಎಚ್.ಎಂ. ಕಾಂತರಾಜು ಸಲ್ಲಿಸಿರುವ ವರದಿಯನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಂಡರು. 165 ಕೋಟಿ ರು. ವೆಚ್ಚದಲ್ಲಿ ಮಾಡಿದ್ದ ಆಯೋಗದ ವರದಿಯನ್ನು ಕಸದ ಬುಟ್ಟಿಗೆ ಎಸೆದಿದ್ದಾರೆ ಎಂದು ಅವರು ಟೀಕಿಸಿದರು.ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದು ಹನ್ನೊಂದು ವರ್ಷಗಳಾಗಿವೆ. ಅಭಿವೃದ್ಧಿಯ ಆಡಳಿತದ ಜತೆಗೆ ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದಾರೆ. ಕೋವಿಡ್ ಸಂದರ್ಭ ನಿರ್ವಹಣೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ನೆಲೆಸುವಂತೆ ಮಾಡಿದ್ದು ಸೇರಿದಂತೆ ಅನೇಕ ಸುಧಾರಣೆ ತಂದಿದ್ದಾರೆ. 2048ಕ್ಕೆ ಭಾರತ ಜಗತ್ತಿನಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವಂತೆ ಮಾಡಿದ್ದಾರೆ. ಡಾ. ಮನಮೋಹನ್ ಸಿಂಗ್ ಅವರ ಹತ್ತು ವರ್ಷಗಳ ಆಡಳಿತ ದುರ್ಬಲ ಮತ್ತು ಭ್ರಷ್ಟಾಚಾರದಿಂದ ಕೂಡಿತ್ತು. ಯುಪಿಎ ಸರ್ಕಾರ ಇದ್ದಾಗ ದೇಶದ ಆರ್ಥಿಕ ಶಕ್ತಿ 11ನೇ ಸ್ಥಾನದಲ್ಲಿದ್ದರೆ, ಮೋದಿ ಸರ್ಕಾರ ಕೈಗೊಂಡ ನೀತಿ, ಕಾರ್ಯಕ್ರಮದಿಂದ ನಾಲ್ಕನೇ ಸ್ಥಾನದಲ್ಲಿ ಇದೆ ಎಂದರು.