ಪೂರಿಗಾಲಿ ಹನಿ ನೀರಾವರಿ ಯೋಜನೆಯಲ್ಲಿ ಜೆಡಿಎಸ್‌ನರಿಗೆ ವಂಚನೆ ಆರೋಪ: ಸಾಬೀತಿಗೆ ಆಗ್ರಹ

KannadaprabhaNewsNetwork |  
Published : Jul 06, 2025, 11:48 PM IST
4ಕೆಎಂಎನ್ ಡಿ18 | Kannada Prabha

ಸಾರಾಂಶ

ಮಾಜಿ ಶಾಸಕರು ರೈತರನ್ನು ದಿಕ್ಕು ತಪ್ಪಿಸುವ ಹೇಳಿಕೆ ನೀಡುವುದು ಸರಿಯಲ್ಲ. ಫಲಾನುಭವಿ ಆಯ್ಕೆಯಲ್ಲಿ ತಾರತಮ್ಯ ಮಾಡುತ್ತಿರುವುದನ್ನು ಸಾಬೀತು ಪಡಿಸಿದರೆ ಬಹಿರಂಗ ಕ್ಷಮೆಯಾಚಿಸುತ್ತೇವೆ. ಇಲ್ಲದಿದ್ದರೆ ಅವರು ಕ್ಷಮೆಯಾಚಿಸಬೇಕು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಪೂರಿಗಾಲಿ ಹನಿ ನೀರಾವರಿ ಯೋಜನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಸೌಲಭ್ಯ ಕಲ್ಪಿಸಿ ಜೆಡಿಎಸ್‌ನವರಿಗೆ ವಂಚಿಸಿರುವ ಬಗ್ಗೆ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಸಾಬೀತುಪಡಿಸಲಿ ಅಥವಾ ಕ್ಷಮೆಯಾಚಿಸಬೇಕು ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಅಂಬರೀಶ್‌ ಆಗ್ರಹಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನೀರಾವರಿ ನಿಗಮದಿಂದ ಯೋಜನೆಯಡಿ ರೈತರು ಭೂ ಮಾಲೀಕರ ಸಹಕಾರ ಸಂಘ ಸ್ಥಾಪಿಸಿ, ಅದರ ಮೂಲಕ ಆಧುನಿಕ ಯಂತ್ರಗಳನ್ನು ಬಳಸಿ ಸಾಮೂಹಿಕ ಕೃಷಿ ಪದ್ಧತಿ ಮಾಡುವ ಉದ್ದೇಶ ಹೊಂದಲಾಗಿದೆ ಎಂದರು.

ಮಾಜಿ ಶಾಸಕರು ರೈತರನ್ನು ದಿಕ್ಕು ತಪ್ಪಿಸುವ ಹೇಳಿಕೆ ನೀಡುವುದು ಸರಿಯಲ್ಲ. ಫಲಾನುಭವಿ ಆಯ್ಕೆಯಲ್ಲಿ ತಾರತಮ್ಯ ಮಾಡುತ್ತಿರುವುದನ್ನು ಸಾಬೀತು ಪಡಿಸಿದರೆ ಬಹಿರಂಗ ಕ್ಷಮೆಯಾಚಿಸುತ್ತೇವೆ. ಇಲ್ಲದಿದ್ದರೆ ಅವರು ಕ್ಷಮೆಯಾಚಿಸಬೇಕೆಂದು ತಿಳಿಸಿದರು.

ಟಿಎಪಿಸಿಎಂಎಸ್‌ ನಿರ್ದೇಶಕ ದೇವರಾಜು, ಲಿಂಗರಾಜು ಮಾತನಾಡಿ, ವಿಪಕ್ಷಗಳು ವೈಯುಕ್ತಿಕ ಟೀಕೆ, ಸುಳ್ಳು ಹೇಳುವುದು, ಬಾಯಿಗೆ ಬಂದಂತೆ ಮಾತನಾಡುವುದು ಮಾಜಿ ಶಾಸಕರಿಗೆ ಶೋಭೆ ತರುವುದಿಲ್ಲ. ಡಾ.ಅನ್ನದಾನಿ ಅವರು ಗೌರವಯುತವಾಗಿ ಮಾತನಾಡುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದರು.

ಪೊಲೀಸ್ ಇಲಾಖೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಎಂದು ತಾರತಾಮ್ಯ ಮಾಡಲಾಗುತ್ತಿದೆ ಎನ್ನುವುದು ನಿಮಗೆ ಗೌರವ ತರುವುದಿಲ್ಲ. ಕಾನೂನು ಎಲ್ಲರಿಗೂ ಒಂದೇ ಎಂಬುದು ನಿಮಗೆ ಅರಿವು ಇಲ್ಲವೇ. ನಿಮ್ಮ ಅಧಿಕಾರದ ಅವಧಿಯಲ್ಲಿ ಪೊಲೀಸರು ಪ್ರವಾಸಿ ಮಂದಿರವನ್ನು ಕಾಯುತ್ತಿರುವುದನ್ನು ಮರೆತು ಬಿಟ್ಟಿದ್ದೀರಾ ಎಂದು ಪ್ರಶ್ನಿಸಿದರು.

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಚಿಕ್ಕಲಿಂಗಯ್ಯ, ಕೆಡಿಪಿ ಸದಸ್ಯ ಶಶಿ ಮಾತನಾಡಿ, ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಕನಕಭವನ ನಿರ್ಮಾಣಕ್ಕೆ ಅನುದಾನ ನೀಡಿದ್ದರು. ನಿವೇಶನ ಗೊಂದಲದಿಂದ ಪಿ.ಎಂ.ನರೇಂದ್ರಸ್ವಾಮಿ ಅವರು ಕಾಮಗಾರಿ ಆರಂಭಿಸಲು ಸಾಧ್ಯವಾಗಿರಲಿಲ್ಲ. ನಂತರ ಬಂದ ಅನ್ನದಾನಿ ವಿಧಾನಸಭೆ ಚುನಾವಣೆ ಸಮೀಪಿಸುವಾಗ ಕಾಮಗಾರಿಗೆ ಚಾಲನೆ ನೀಡಿದ ಪರಿಣಾಮ ಅರ್ಧಕ್ಕೆ ನಿಂತಿದೆ. ಭವನ ನಿರ್ಮಾಣಕ್ಕೆ ಹಲವು ನಾಯಕರಿಂದ ದೇಣಿಗೆ ಸಂಗ್ರಹಿಸಲಾಗಿದೆ. ಇದರ ಲೆಕ್ಕ ನೀಡಬೇಕೆಂದು ಆಗ್ರಹಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಯ್ಯ, ಪುರಸಭೆ ಮಾಜಿ ಸದಸ್ಯ ಕಿರಣ್‌ಶಂಕರ್ ಮಾತನಾಡಿ, ಅವೈಜ್ಞಾನಿಕವಾಗಿ ಹಂಚಿಕೆ ಮಾಡಿದ್ದ ಆಶ್ರಯ ಬಡಾವಣೆಯನ್ನು ಈಗ ವೈಜ್ಞಾನಿಕವಾಗಿ ನಿರ್ಮಿಸಿ ಸೈಟ್ ಹಂಚಿಕೆ ಮಾಡಲಾಗುತ್ತಿದೆ. ಇನ್ನೂ ಮೂರು ವರ್ಷ ತೆಪ್ಪಗಿರುವಂತೆ ಮಾಜಿ ಶಾಸಕರಿಗೆ ತಾಕೀತು ಮಾಡಿದರು.

ಸುದ್ಧಿಗೋಷ್ಠಿಯಲ್ಲಿ ಮನ್ಮುಲ್ ನಿರ್ದೇಶಕ ಕೃಷ್ಣೇಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಚೌಡಯ್ಯ, ಕೆಪಿಸಿಸಿ ಸದಸ್ಯ ಪುಟ್ಟಸ್ವಾಮಿ, ಶಿವಮಾದೇಗೌಡ, ಅಯ್ಯೂಬ್ ಪಾಷಾ, ಕೃಷ್ಣಮೂರ್ತಿ, ಚಂದ್ರಕುಮಾರ್, ದಿಲೀಪ್‌ಕುಮಾರ್, ಶ್ರೀಕಾಂತ್, ರಾಜೇಶ್, ಅಜೀಜ್‌ಪಾಷ, ಕರಿಯಪ್ಪ, ವೆಂಕಟರಾಜು, ಗುರುಸ್ವಾಮಿ ಸೇರಿದಂತೆ ಇತರರು ಇದ್ದರು.

PREV