ಬಂದ ದಾರಿ ಯಲ್ಲೇ ವಾಪಸ್ ತಾಲೂಕಿನ ಕೆ.ಆರ್. ಪೇಟೆ ಬಳಿ ನೀಲಗಿರಿ ತೋಪಿನಲ್ಲಿ ವಾಸ್ತವ್ಯ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುನಗರದ ಹೊರ ವಲಯಕ್ಕೆ ಬಂದು ಬೀಡು ಬಿಟ್ಟಿದ್ದ ಸುಮಾರು 25 ಕಾಡಾನೆಗಳು ಸೋಮವಾರ ರಾತ್ರಿ ತಾವು ಬಂದ ದಾರಿ ಯಲ್ಲೇ ವಾಪಸ್ ತೆರಳಿದ್ದು ಮಂಗಳವಾರ ತಾಲೂಕಿನ ಕೆ.ಆರ್. ಪೇಟೆ ಬಳಿ ಇರುವ ನೀಲಗಿರಿ ತೋಪಿನಲ್ಲಿ ವಾಸ್ತವ್ಯ ಹೂಡಿದ್ದವು.ಅವುಗಳ ಚಲನವಲನ ನೋಡಿದರೆ ಅವುಗಳು ಬಂದ ದಾರಿಯಲ್ಲೇ ಚಿಕ್ಕಮಗಳೂರಿನಿಂದ ಕೆ.ಆರ್.ಪೇಟೆಗೆ ತೆರಳಿದ್ದು, ಅಲ್ಲಿಂದ ಬೇಲೂರು ತಾಲೂಕಿಗೆ ಪ್ರಯಾಣ ಬೆಳೆಸುವ ಸಾಧ್ಯತೆ ಹೆಚ್ಚಿದೆ ಅಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ಜ. 27 ರಂದು ಕಾಡಾನೆಗಳ ಹಿಂಡು ಕೆ.ಆರ್.ಪೇಟೆ ಪ್ರವೇಶ ಮಾಡಿತ್ತು. ಅದು, ಭಾನುವಾರ ರಾತ್ರಿ ಅಂಬರ್ ವ್ಯಾಲಿ ಶಾಲೆಯ ಸಮೀಪದಲ್ಲಿರುವ ಕಾಡಿಗೆ ಬಂದು ವಾಸ್ತವ್ಯ ಹೂಡಿತ್ತು. ಹಾಗಾಗಿ ಸೋಮವಾರ ಸುತ್ತಮುತ್ತಲಿನ 12ಕ್ಕೂ ಹೆಚ್ಚು ಶಾಲೆ, ಕಾಲೇಜುಗಳಿಗೆ ರಜೆ ನೀಡುವ ಜತೆಗೆ ಕೆಲವು ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.ಆನೆಗಳು, ಸೋಮವಾರ ಸಂಜೆಯೇ ಅಂಬರ್ ವ್ಯಾಲಿ ಶಾಲೆಯ ಪ್ರದೇಶವನ್ನು ಬಿಟ್ಟು ಕೆ.ಆರ್.ಪೇಟೆಗೆ ತೆರಳಿದ್ದರಿಂದ ಮತ್ತಿಕೆರೆ, ಮಾವಿನಕೆರೆ, ನೆರಡಿ, ಬಿಗ್ಗದೇವನಹಳ್ಳಿ, ಬೀಗ್ಗನಹಳ್ಳಿ, ಹಲುವಳ್ಳಿ, ಕಂಬಿಹಳ್ಳಿ, ತಗದೂರು, ಕುಂದೂರು, ಕೆಸವಿನ ಮನೆ, ಮಳ್ಳೂರು, ಕೆಂಚನಹಳ್ಳಿ, ಹಾದಿಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಜನರು ಓಡಾಡದಂತೆ ಮಂಗಳವಾರ ನಿಷೇಧಾಜ್ಞೆ ಜಾರಿಗೊಳಿಸಿ ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ದಲ್ಜೀತ್‌ಕುಮಾರ್ ಅವರು ಆದೇಶ ಹೊರಡಿಸಿದ್ದರು.ಈ ಆದೇಶ ಬುಧವಾರ ಬೆಳಿಗ್ಗೆ 10 ಗಂಟೆಯವರೆಗೆ ಜಾರಿಯಲ್ಲಿ ಇರಲಿದ್ದು, ಸಾರ್ವಜನಿಕರು ಎಲ್ಲೂ ಕೂಡ ಬೇಕಾಬಿಟ್ಟಿ ಓಡಾಡುವಂತ್ತಿಲ್ಲ, ಗುಂಪು ಗುಂಪಾಗಿ ಸೇರುವುದನ್ನು ನಿಷೇಧಿಸಲಾಗಿದೆ. ಈ ಭಾಗದ ಶಾಲೆಗಳಿಗೆ ರಜೆ ನೀಡಲಾಗಿದೆ.ಭಾರಿ ಸಂಖ್ಯೆಯಲ್ಲಿ ಆನೆಗಳು ಇರುವುದರಿಂದ ದುಬಾರೆಯಿಂದ 4 ಹಾಗೂ ನಾಗರಹೊಳೆಯಿಂದ ಕರೆಸಿರುವ 4 ಸಾಕಾನೆಗಳ ನೆರವಿನಿಂದ ಹಿಮ್ಮೆಟ್ಟುವ ಕೆಲಸವನ್ನು ಅರಣ್ಯ ಇಲಾಖೆ ಅತ್ಯಂತ ಸೂಕ್ಷ್ಮವಾಗಿ ನಿರ್ವಹಿಸುತ್ತಿದೆ.