- ₹120 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಉದ್ಘಾಟಿಸಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ಸ್ಮಾರ್ಟ್ ಸಿಟಿ ಯೋಜನೆ ಹಾಗೂ ಕೆಎಸ್‌ಆರ್‌ಟಿಸಿ ನಿಗಮ ಅನುದಾನದಲ್ಲಿ ಸುಮಾರು ₹120 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಹೈಟೆಕ್ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ವಾಹನಗಳ ಕಾರ್ಯಾಚರಣೆ ಹಾಗೂ ನೂತನ ಮಾರ್ಗಗಳಿಗೆ ಗಣಿ ಮತ್ತು ಭೂ ವಿಜ್ಞಾನ ತೋಟಗಾರಿಕೆ ಹಾಗೂ ಜಿಲ್ಲಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಭಾನುವಾರ ಚಾಲನೆ ನೀಡಿದರು.ನಗರದ ಕೆಎಸ್‌ಆರ್‌ಟಿಸಿ ನೂತನ ಹೈಟೆಕ್ ಬಸ್ ನಿಲ್ದಾಣದಲ್ಲಿ ನೂತನ ಬಸ್ ಮಾರ್ಗಗಳು ಹಾಗೂ ನಿಲ್ದಾಣದಿಂದ ಬಸ್‌ಗಳ ಕಾರ್ಯಾಚರಣೆಗೆ ಹಸಿರು ನಿಶಾನೆ ತೋರುವ ಮೂಲಕ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಚಾಲನೆ ನೀಡಿದರು. ಬಳಿಕ ನಿಗಮದ ನೌಕರರ ಬಳಗ, ಅಭಿಮಾನಿಗಳು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸುವ ಮೂಲಕ ಜನ್ಮದಿನ ಆಚರಿಸಿಕೊಂಡರು.
ಸಚಿವರು ಮಾತನಾಡಿ, ಸ್ಮಾರ್ಟ್ ಸಿಟಿ ಯೋಜನೆಯಿಂದ ಶೇ.70 ಅನುದಾನ ಹಾಗೂ ಕೆಎಸ್‌ಆರ್‌ಟಿಸಿ ವತಿಯಿಂದ ಶೇ.25 ಅನುದಾನ ಸೇರಿದಂತೆ ಒಟ್ಟು ₹120 ಕೋಟಿ ವೆಚ್ಚದಲ್ಲಿ ದಾವಣಗೆರೆಯಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣವಾಗಿದೆ. ಅಭಿವೃದ್ಧಿ ಹೊಂದುತ್ತಿರುವ ಮಹಾನಗರಕ್ಕೆ ಇಂತಹದ್ದೊಂದು ಹೈಟೆಕ್ ಬಸ್ ನಿಲ್ದಾಣದ ಅಗತ್ಯತೆ ಇದ್ದುದನ್ನು ಈಗ ಪೂರೈಸಲಾಗಿದೆ. ನೂತನ ಹೈಟೆಕ್ ಬಸ್ ನಿಲ್ದಾಣದಲ್ಲಿ 3 ಮಲ್ಟಿಪ್ಲೆಕ್ಸ್, ಹಲವಾರು ಅಂಗಡಿಗಳು, ಬಟ್ಟೆ ಅಂಗಡಿಗಳು, ಹೋಟೆಲ್‌ಗಳು, ಬೇಕರಿಗಳು ಹೀಗೆ ಪ್ರಯಾಣಿಕರಿಗೆ ಅನುಕೂಲಕರವಾಗಿದೆ ಎಂದರು.ಪುಣ್ಯಾತ್ಮರು ಹೈಟೆಕ್ ಬಸ್ ನಿಲ್ದಾಣದ ಟೆಂಡರ್ ಅಲ್ಲಿಂದಲೇ ಕರೆದಿದ್ದರಿಂದ ಇಲ್ಲಿ ಗುಣಮಟ್ಟದ ನಿಲ್ದಾಣದ ಕೆಲಸವಾಗಿದೆ. ಒಳ್ಳೆಯ ಕೆಲಸ ಇಲ್ಲಿ ಆಗಿದೆ. ಕೆಎಸ್‌ಆರ್‌ಟಿಸಿ ಅಧಿಕಾರಿ-ನೌಕರರು ಸಹ ಪ್ರಯಾಣಿಕರಿಗೆ ಗುಣಮಟ್ಟದ ಸೇವೆ ಒದಗಿಸಬೇಕು. ನಿಲ್ದಾಣದಲ್ಲಿ ಸ್ವಚ್ಛತೆ ಕಾಪಾಡಲು ಒತ್ತು ನೀಡಬೇಕು. ದಾವಣಗೆರೆ ಸುಂದರ ನಗರನ್ನಾಗಿಸಲು ಜನರ ಸಹಕಾರವೂ ಬೇಕು. ನಗರ, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ, ಮೂಲ ಸೌಕರ್ಯ, ನೀರಾವರಿ, ಸಾರಿಗೆ, ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಒತ್ತು ನೀಡಲಾಗುವುದು. ನಗರ, ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಉಚಿತ ಬಸ್ಸು ಪ್ರಯಾಣ ಕಲ್ಪಿಸಿರುವುದು ಸಾಕಷ್ಟು ಅನುಕೂಲವಾಗಿದೆ. ಹೊಟ್ಟೆಗೆ ಹಿಟ್ಟು, ತಲೆಗೊಂದು ಸೂರು, ತೊಡಲು ಬಟ್ಟೆ ಪ್ರತಿಯೊಬ್ಬರಿಗೂ ಅತ್ಯವಶ್ಯಕ. ಶಿಕ್ಷಣ, ಆರೋಗ್ಯಕ್ಕೂ ಆದ್ಯತೆ ನೀಡುತ್ತೇವೆ ಎಂದು ಸಚಿವರು ಭರವಸೆ ನೀಡಿದರು.
ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ, ಮೇಯರ್ ಬಿ.ಎಚ್. ವಿನಾಯಕ ಪೈಲ್ವಾನ್, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ ಎನ್. ಹೆಬ್ಬಾಳ್, ವಿಭಾಗೀಯ ತಾಂತ್ರಿಕ ಶಿಲ್ಪಿ ಕೆ.ವೆಂಕಟೇಶ, ವಿಭಾಯ ಸಂಚಾರ ಅಧಿಕಾರ ಡಿ.ಫಕೃದ್ದೀನ್, ಸೂಪರ್ ವೈಸರ್ ಹೊನ್ನಪ್ಪ, ಚಂದ್ರು ಡೋಲಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ ಸೇರಿದಂತೆ ನಿಗಮದ ಅಧಿಕಾರಿ, ಸಿಬ್ಬಂದಿ, ಚಾಲಕರು, ನಿರ್ವಾಹಕರು, ಮೆಕ್ಯಾನಿಕ್‌ಗಳು, ಕುಟುಂಬ ವರ್ಗ, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಸದಸ್ಯರು ಇದ್ದರು.ಇದೇ ವೇಳೆ ಬಡವರಿಗೆ ಹೆಚ್ಚಿನ ಅನುಕೂಲ ಮಾಡಿಕೊಡುವ ಉದ್ದೇಶದಿಂದ 2 ರಾಜಹಂಸ, 2 ವೇಗದೂತ ಬಸ್‌ಗಳ ಸೇವೆಗೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಚಾಲನೆ ನೀಡಿದರು.
- - -ಬಾಕ್ಸ್-1 * ಪಂಪಾಪತಿ ಕೊಡುಗೆ ಸ್ಮರಣೆ ದಾವಣಗೆರೆಯ ಹಳೇ ಬಸ್ ನಿಲ್ದಾಣದಲ್ಲೇ ಕೆಎಸ್‌ಆರ್‌ಟಿಸಿ ಬಸ್‌ಗಳು ನಿಲುಗಡೆ ಮಾಡಬೇಕಾದ ಸ್ಥಿತಿ 1985ಕ್ಕೂ ಮುಂಚೆ ಇತ್ತು. ಆಗಿನ ಶಾಸಕ, ಕಾರ್ಮಿಕ ಮುಖಂಡ ಪಂಪಾಪತಿ ಹೋರಾಟ ನಡೆಸಿದ ಪರಿಣಾಮ ಇದೇ ಜಾಗದಲ್ಲಿ ಸರ್ಕಾರಿ ಬಸ್‌ಗಳಿಗಾಗಿ ಹೊಸ ಬಸ್ ನಿಲ್ದಾಣ ನಿರ್ಮಿಸಲಾಗಿತ್ತು. ಈಗ ಅದೇ ಜಾಗದಲ್ಲಿ ಹೈಟೆಕ್ ಬಸ್ ನಿಲ್ದಾಣ ₹120 ಕೋಟಿಗೂ ಅಧಿಕ ವೆಚ್ಚದಲ್ಲಿ ತಲೆಯೆತ್ತಿದೆ. ಹೀಗೆ ಕೆಲಸ ಮಾಡಿದವರನ್ನು ನೆನಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌ಎಸ್‌ಎಂ ಹೇಳಿದರು.
ಬಿಜೆಪಿಯವರಿಗೆ ನಾವು ಹೀಗೇ ನೆನೆಸಬೇಕೆಂದು ಹೇಳುವುದಿಲ್ಲ. ಇಲ್ಲಿ ಕೆಎಸ್‌ಆರ್‌ಟಿಸಿ ಡಿಪೋ, ನಿಲ್ದಾಣ ನಿರ್ಮಾಣವಾಗಲು ಪಂಪಾಪತಿ ಕಾರಣ. ಪಂಪಾಪತಿಯವರ ಹೆಸರನ್ನು ನಿಲ್ದಾಣಕ್ಕೆ ಇಡುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆ ಪಾಲಿಕೆ ಮೇಯರ್, ಸದಸ್ಯರಿಗೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಲು ಸೂಚಿಸುತ್ತೇನೆ ಎಂದರು.- - -
ಬಾಕ್ಸ್-2 ಬಿಜೆಪಿ ಕಾರ್ಯಕ್ಕೆ ಟೀಕೆ ಆರೇಳು ವರ್ಷಗಳ ಹಿಂದೆಯೇ ನಿಲ್ದಾಣ ತೆರವು ಮಾಡಿ, ಹೊಸದಾಗಿ ನಿರ್ಮಿಸಲು ತೀರ್ಮಾನಿಸಿದ್ದೆವು. ಆಗಿನ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಶೇ.50-50 ಅನುದಾನ ನೀಡುವ ಭರವಸೆ ನೀಡಿದ್ದರು. ಆಗ ಸ್ಮಾರ್ಟ್ ಸಿಟಿಯಡಿ ಉಳಿದ ಅನುದಾನ ಕೊಡಲು ಅನುಮತಿ ನೀಡಿದ್ದೆವು. ನಂತರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತು. ಸ್ಮಾರ್ಟ್ ಸಿಟಿ ಯೋಜನೆಯಡಿ ಶೇ.75 ಅನುದಾನ ಕೊಟ್ಟು, ಕೆಎಸ್‌ಆರ್‌ಟಿಸಿ ವತಿಯಿಂದ ಶೇ.25 ಅನುದಾನದಲ್ಲಿ ನಿರ್ಮಿಸಿದರು. ಅನುದಾನ ತರುವುದು ಗೊತ್ತಿಲ್ಲದ ಮೂರ್ಖರು ಇಲ್ಲಿಗೆ ಸ್ಮಾರ್ಟ್ ಸಿಟಿ ಅನುದಾನ ಖರ್ಚು ಮಾಡಿದರು. ಕೆಎಸ್‌ಆರ್‌ಟಿಸಿ ವತಿಯಿಂದಲೇ ಪೂರ್ತಿ ಹಣ ತಂದು ನಿಲ್ದಾಣ ಮಾಡಿ, ಸ್ಮಾರ್ಟ್ ಸಿಟಿ ಹಣವನ್ನು ಮಹಾನಗರದ ಅಭಿವೃದ್ಧಿ ಬಳಸುವ ಬಗ್ಗೆ ಆಲೋಚಿಸಲಿಲ್ಲ ಎಂದು ಬಿಜೆಪಿ ಸರ್ಕಾರವನ್ನು ಸಚಿವ ಎಸ್‌ಎಸ್‌ಎಂ ಟೀಕಿಸಿದರು.- - - -(ಫೋಟೋ ಬರಲಿವೆ):