ಉಳ್ಳಾಲ ಠಾಣೆಯೊಳಗೇ ಹಿಂದೂ ಮುಖಂಡಗೆ ಹಲ್ಲೆ

KannadaprabhaNewsNetwork | Published : Oct 18, 2024 12:05 AM

ಸಾರಾಂಶ

ಏಕಾಏಕಿ ಠಾಣೆಯೊಳಗೆ ನುಗ್ಗಿದ ಆರೋಪಿ ಆಸಿಫ್, ಅರ್ಜುನ್ ಮಾಡೂರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೈಗಳಿಂದ ಹಲ್ಲೆ ನಡೆಸಿದ್ದಾನೆ. ಅರ್ಜುನ್ ಸ್ನೇಹಿತರು ಆಸಿಫ್‌ನನ್ನು ತಡೆದಿದ್ದು ಪೊಲೀಸರು ಕೂಡಲೇ ಆತನನ್ನ ವಶಕ್ಕೆ ತೆಗೆದುಕೊಂಡಿದ್ದಾರೆ. ಘಟನೆಯ ದೃಶ್ಯಗಳು ಠಾಣಾ ಇನ್ಸ್‌ಪೆಕ್ಟರ್‌ ಅವರ ಕೊಠಡಿಯ ಸಿಸಿಟಿವಿಯಲ್ಲಿ ದಾಖಲಾಗಿದೆ.

ಕನ್ನಡಪ್ರಭ ವಾರ್ತೆ ಉಳ್ಳಾಲ

ಎರಡು ಕಾರುಗಳ ನಡುವೆ ನಡೆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್‌ ಠಾಣೆಯಲ್ಲಿ ಮಾತುಕತೆ ನಡೆಯುತ್ತಿದ್ದಾಗ ಇನ್ಸ್‌ಪೆಕ್ಟರ್‌ ಕೊಠಡಿಯೊಳಗೆಯೇ ಹಿಂದೂ ಸಂಘಟನೆಯ ಮುಖಂಡನೊಬ್ಬನಿಗೆ ಕೇರಳ ಮೂಲದ ಮುಸ್ಲಿಂ ಯುವಕ ಹಲ್ಲೆ ನಡೆದಿದೆ. ಘಟನೆಯನ್ನು ವಿರೋಧಿಸಿ ಹಿಂದೂ ಸಂಘಟನೆಯ ಕಾರ್ಯಕರ್ತರು ಬುಧವಾರ ನಡುರಾತ್ರಿಯೇ ಠಾಣೆಗೆ ಮುತ್ತಿಗೆ ಹಾಕಿದ್ದಾರೆ. ಹಲ್ಲೆಗೈದ ಆರೋಪಿಯನ್ನು ಪೊಲೀಸರು ವಶಕ್ಕೆತೆಗೆದುಕೊಂಡಿದ್ದಾರೆ.

ಬಜರಂಗ ದಳದ ಉಳ್ಳಾಲ ನಗರ, ಪ್ರಖಂಡ ಸಂಯೋಜಕ ಅರ್ಜುನ್ ಮಾಡೂರು ಹಲ್ಲೆಗೊಳಗಾದ ಹಿಂದೂ ಸಂಘಟನೆಯ ಮುಖಂಡ. ಕಾಸರಗೋಡು ಜಿಲ್ಲೆಯ ಹೊಸಂಗಡಿ ನಿವಾಸಿ ಮಹಮ್ಮದ್ ಆಸಿಫ್ (33) ಬಂಧಿತ ಆರೋಪಿ.

ಘಟನೆಯ ವಿವರ: ತೊಕ್ಕೊಟ್ಟುವಿನ ಮೇಲ್ಸೇತುವೆಯಲ್ಲಿ ಬುಧವಾರ ರಾತ್ರಿ ಕುಂಪಲದ ಶರತ್ ಮತ್ತು ಕೇರಳದ ಇಬ್ರಾಹಿಂ ಖಲೀಲ್ ಅವರ ಕಾರುಗಳ ಮಧ್ಯೆ ಸಣ್ಣ ಅಪಘಾತ ನಡೆದಿದೆ. ಈ ವಿಚಾರದಲ್ಲಿ ಖಲೀಲ್ ಮತ್ತು ಆತನ ಸಹೋದರ ಆಸಿಫ್‌ ಸೇರಿ ಶರತ್ ಅವರಿಗೆ ಹಲ್ಲೆ ನಡೆಸಿದ್ದು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹಲ್ಲೆ ವಿಚಾರದಲ್ಲಿ ಶರತ್ ಅವರ ಸ್ನೇಹಿತ ಅರ್ಜುನ್ ಮಾಡೂರು ಪೊಲೀಸ್ ಠಾಣೆಗೆ ಆಗಮಿಸಿದರು.

ಘಟನೆಗೆ ಸಂಬಂಧಿಸಿದಂತೆ ಮಾತುಕತೆ ನಡೆಸುತ್ತಿದ್ದ ವೇಳೆ ಏಕಾಏಕಿ ಠಾಣೆಯೊಳಗೆ ನುಗ್ಗಿದ ಆರೋಪಿ ಆಸಿಫ್, ಅರ್ಜುನ್ ಮಾಡೂರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೈಗಳಿಂದ ಹಲ್ಲೆ ನಡೆಸಿದ್ದಾನೆ. ಅರ್ಜುನ್ ಸ್ನೇಹಿತರು ಆಸಿಫ್‌ನನ್ನು ತಡೆದಿದ್ದು ಪೊಲೀಸರು ಕೂಡಲೇ ಆತನನ್ನ ವಶಕ್ಕೆ ತೆಗೆದುಕೊಂಡಿದ್ದಾರೆ. ಘಟನೆಯ ದೃಶ್ಯಗಳು ಠಾಣಾ ಇನ್ಸ್‌ಪೆಕ್ಟರ್‌ ಅವರ ಕೊಠಡಿಯ ಸಿಸಿಟಿವಿಯಲ್ಲಿ ದಾಖಲಾಗಿದೆ.

ಹಲ್ಲೆಗೊಳಗಾದ ಅರ್ಜುನ್ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಆರೋಪಿ ಆಸಿಫ್ ವಿರುದ್ಧ ಉಳ್ಳಾಲ ಠಾಣೆಯಲ್ಲಿ ದೂರು ದಾಖಲಾಗಿದೆ.

ತಡರಾತ್ರಿ ಜಮಾಯಿಸಿದ ಕಾರ್ಯಕರ್ತರು: ವಿಚಾರ ತಿಳಿಯುತ್ತಿದ್ದಂತೆ ಮಧ್ಯರಾತ್ರಿ ಠಾಣೆಯ ಮುಂದೆ ಹಿಂದೂ ಕಾರ್ಯಕರ್ತರು ಜಮಾಯಿಸಿದ್ದಾರೆ. ಅರ್ಜುನ್ ಮಾಡೂರಿಗೆ ಹಲ್ಲೆ ನಡೆಸಿದ ಆರೋಪಿ ಆಸಿಫ್‌ನನ್ನು ತಮ್ಮ ವಶಕ್ಕೆ ನೀಡುವಂತೆ ಆಗ್ರಹಿಸಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಡಿಸಿಪಿ ಸಿದ್ಧಾರ್ಥ್ ಗೋಯಲ್, ಎಸಿಪಿ ಧನ್ಯ ನಾಯಕ್ ಅವರು ಠಾಣೆಯ ಸುತ್ತಲೂ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ಠಾಣೆಗೆ ಭೇಟಿ ನೀಡಿದ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ವಿಶ್ವ ಹಿಂದೂ ಪರಿಷತ್ ಮುಖಂಡರಾದ ಗೋಪಾಲ ಕುತ್ತಾರು ಅವರು ಆರೋಪಿ ಆಸಿಫ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.ಕಠಿಣ ಕ್ರಮಕ್ಕೆ ಪುತ್ತಿಲ ಆಗ್ರಹ: ಹಲ್ಲೆ ಸುದ್ಧಿ ತಿಳಿಯುತ್ತಿದ್ದಂತೆ ಅರುಣ್ ಪುತ್ತಿಲ ಪೊಲೀಸ್‌ ಠಾಣೆಗೆ ಭೇಟಿ ನೀಡಿದರು. ಅರುಣ್ ಪುತ್ತಿಲ ಆಗಮಿಸುತ್ತಿದ್ದಂತೆ ಠಾಣೆಯ ಮುಂದೆ ಜಮಾಯಿಸಿದ್ದ ಹಿಂದೂ ಕಾರ್ಯಕರ್ತರು ಜೈಕಾರ ಕೂಗಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಯ ವಿರುದ್ಧ ಕಠಿಣ ಕ್ರಮ ಜರಗಿಸುವಂತೆ ಡಿಸಿಪಿ ಸಿದ್ಧಾರ್ಥ್ ಗೋಯಲ್ ಅವರನ್ನ ಪುತ್ತಿಲ ಆಗ್ರಹಿಸಿದುರು.

ಠಾಣೆಯಲ್ಲೂ ರಕ್ಷಣೆಯಿಲ್ಲ: ಇನ್ಸ್‌ಪೆಕ್ಟರ್ ಅವರ ಕೊಠಡಿಯೊಳಗಡೆ ಕಾರು ಚಾಲಕರ ನಡುವಿನ ಗಲಾಟೆಯ ವಿಚಾರದಲ್ಲಿ ಮಾತುಕತೆ ನಡೆಯುತ್ತಿತ್ತು. ಈ ಸಂದರ್ಭ ಇನ್ಸ್‌ಪೆಕ್ಟರ್‌ ಮೊಬೈಲ್‌ನಲ್ಲಿ ಮಾತನಾಡುತ್ತಾ ಕೋಣೆಯಿಂದ ಹೊರಹೋಗಿದ್ದಾರೆ. ಈ ವೇಳೆ ಆರೋಪಿ ಆಸಿಫ್ ಒಳನುಗ್ಗಿ ಅರ್ಜುನ್‍ಗೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದ್ದು, ಪೊಲೀಸ್ ಠಾಣೆಯಲ್ಲಿದ್ದರೂ ರಕ್ಷಣೆ ಸಿಗುತ್ತಿಲ್ಲ ಎಂದು ಹಿಂದೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

Share this article