ಕಾವೇರಿ 5ನೇ ಹಂತದ ನಂತರ ಇದೀಗ ಕಾವೇರಿ 6ನೇ ಹಂತದ ಯೋಜನೆಗೆ ಅನುಷ್ಠಾನಕ್ಕೆ ಜಲಮಂಡಳಿ ಸಿದ್ಧತೆ ನಡೆಸಿದ್ದು, ಈ ಯೋಜನೆಗೆ ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆಯುವ ಸಾಧ್ಯತೆಗಳಿವೆ.

ಗಿರೀಶ್‌ ಗರಗ

 ಬೆಂಗಳೂರು : ಕಾವೇರಿ 5ನೇ ಹಂತದ ನಂತರ ಇದೀಗ ಕಾವೇರಿ 6ನೇ ಹಂತದ ಯೋಜನೆಗೆ ಅನುಷ್ಠಾನಕ್ಕೆ ಜಲಮಂಡಳಿ ಸಿದ್ಧತೆ ನಡೆಸಿದ್ದು, ಈ ಯೋಜನೆಗೆ ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆಯುವ ಸಾಧ್ಯತೆಗಳಿವೆ.

ಪಾಲಿಕೆಗೆ ಸೇರ್ಪಡೆಯಾದ ಹೊಸ ಪ್ರದೇಶಗಳಿಗೆ ನೀರು ಪೂರೈಕೆಗಾಗಿ ಅನುಷ್ಠಾನಗೊಳಿಸಲಾದ ಕಾವೇರಿ 5ನೇ ಹಂತದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಆ ಮೂಲಕ ಸದ್ಯ 1.50 ಕೋಟಿ ಜನಸಂಖ್ಯೆಗೆ 1 ರಿಂದ 5 ಹಂತದ ಮೂಲಕ 2225 ಎಂಎಲ್‌ಡಿ ನೀರನ್ನು ಪೂರೈಸಲಾಗುತ್ತಿದೆ. ಅದರ ಜತೆಗೆ ಇದೀಗ ಕಾವೇರಿ 6ನೇ ಹಂತದ ಯೋಜನೆ ಅನುಷ್ಠಾನಕ್ಕೆ ಜಲಮಂಡಳಿ ಸಿದ್ಧತೆ ನಡೆಸಿದೆ. ಅದಕ್ಕೆ ಸಂಬಂಧಿಸಿದಂತೆ ಕಳೆದ 10 ತಿಂಗಳ ಹಿಂದೆಯೇ ವಿವರ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ಡಿಪಿಆರ್‌ ಪರಿಶೀಲನೆ ನಡೆಸಲಾಗಿದ್ದು, ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಅದನ್ನು ಮಂಡಿಸಲಾಗುತ್ತಿದ್ದು, ಯೋಜನೆಗೆ ಅನುಮೋದನೆ ಸಿಗುವ ಸಾಧ್ಯತೆಗಳಿವೆ.

6ನೇ ಹಂತದಲ್ಲಿ 6 ಟಿಎಂಸಿ ನೀರು:

ಜಲಮಂಡಳಿ ಯೋಜಿಸಿದಂತೆ 6ನೇ ಹಂತದಲ್ಲಿ 6 ಟಿಎಂಸಿ (500 ಎಂಎಲ್‌ಡಿ) ನೀರನ್ನು ಕೆಆರ್‌ಎಸ್‌ನಿಂದ ನಗರಕ್ಕೆ ತರಲು ಉದ್ದೇಶಿಸಲಾಗಿದೆ. ಇದಕ್ಕಾಗಿ 6,939 ಕೋಟಿ ರು. ವೆಚ್ಚವಾಗುವ ಅಂದಾಜಿಸಲಾಗಿದ್ದು, ಅದರಲ್ಲಿ ಯೋಜನಾ ವೆಚ್ಚ 5,177 ಕೋಟಿ ರು. ಹಾಗೂ ಯೋಜನೆಗ ಅಗತ್ಯವಿರುವ 130 ಎಕರೆ ಭೂಮಿಯ ಸ್ವಾಧೀನಕ್ಕೆ 1,822 ಕೋಟಿ ರು. ನಿಗದಿಪಡಿಸಲಾಗಿದೆ. ಯೋಜನೆಗೆ ಅಗತ್ಯವಿರುವ ಹಣವನ್ನು ಜಲಮಂಡಳಿ ವಿಶ್ವ ಬ್ಯಾಂಕ್‌, ಜೈಕಾ, ಹುಡ್ಕೋ ಸೇರಿದಂತೆ ಇನ್ನಿತರ ಹಣಕಾಸು ಸಂಸ್ಥೆಗಳಿದ ಪಡೆಯಲೂ ಈಗಾಗಲೇ ನಿರ್ಧರಿಸಲಾಗಿದೆ. ಸಚಿವ ಸಂಪುಟದಲ್ಲಿ ಯೋಜನೆಗೆ ಅನುಮೋದನೆ ದೊರೆತ ಕೂಡಲೇ ಆರ್ಥಿಕ ನೆರವು ಪಡೆಯಲು ಮುಂದಿನ ಕ್ರಮಕ್ಕೆ ಜಲಮಂಡಳಿ ಮುಂದಾಗಲಿದೆ.

ಯಾವೆಲ್ಲ ಪ್ರದೇಶಗಳಿಗೆ ನೀರು ಪೂರೈಕೆ:

ಕಾವೇರಿ 6ನೇ ಹಂತದ ಯೋಜನೆ ಅಡಿಯಲ್ಲಿ ಹಂಚಿಕೆಯಾಗುವ 6 ಟಿಎಂಸಿ ನೀರಿನಲ್ಲಿ 4 ಟಿಎಂಸಿಯನ್ನು ನಾಡಪ್ರಭು ಕೆಂಪೇಗೌಡ ಬಡಾವಣೆ, ಶಿವರಾಮ ಕಾರಂತ ಬಡಾವಣೆ ಸೇರಿದಂತೆ ಮತ್ತಿತರ ಪ್ರಮುಖ ಬಡಾವಣೆಗಳಿಗೆ ಹಾಗೂ 2 ಟಿಎಂಸಿಯನ್ನು ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಬೇಡಿಕೆಗನುಗುಣವಾಗಿ ದೇವನಹಳ್ಳಿ, ಹೊಸಕೋಟೆ, ಹುಣಸಮಾರನಹಳ್ಳಿ, ಮಾದನಾಯಕನಹಳ್ಳಿ, ನೆಲಮಂಗಲ, ಚಿಕ್ಕಬಾಣಾವಾರ ಸೇರಿದಂತೆ ಮತ್ತಿತರ ಪ್ರದೇಶಗಳಿಗೆ ಪೂರೈಸಲು ನಿರ್ಧರಿಸಲಾಗಿದೆ.

ಎಲ್ಲಿಂದ ನೀರು ಪೂರೈಕೆ

ಕಾವೇರಿ 6ನೇ ಹಂತಕ್ಕಾಗಿ ಕೆಆರ್‌ಎಸ್‌ ಜಲಾಶಯದಿಂದ 2 ಕಿಮೀ ದೂರದಲ್ಲಿರುವ ಕಟ್ಟೇರಿ ಗ್ರಾಮದಲ್ಲಿನ ನೀರು ಸಂಸ್ಕರಣಾ ಘಟಕದಲ್ಲಿ ಶೇಖರಣಾ ಜಲಾಶಯ ನಿರ್ಮಿಸಿ ಅಲ್ಲಿಂದ ನೀರನ್ನು ಪಂಪ್‌ ಮಾಡಲಾಗುತ್ತದೆ. ಬಳಿಕ ಗುರುತ್ವಾಕರ್ಷಣಾ ಬಲದಿಂದ 82 ಕಿಮೀ ದೂರದಲ್ಲಿರುವ ರಾಮನಗರ ಬಳಿಯ ದೇವರ ಹೊಸಹಳ್ಳಿಯಲ್ಲಿ ನಿರ್ಮಿಸುವ ಶೇಖರಣಾ ಜಲಾಶಯಕ್ಕೆ ನೀರನ್ನು ಹರಿಸಲಾಗುತ್ತದೆ. ಅಲ್ಲಿಂದ ಪಂಪಿಂಗ್‌ ಮೂಲಕ 43 ಕಿಮೀ ದೂರದ ಕೆಂಗೇರಿ ಬಳಿಯ ನೈಸ್‌ ರಸ್ತೆ ಜಂಕ್ಷನ್‌ನಲ್ಲಿ ನಿರ್ಮಿಸುವ 3ನೇ ಶೇಖರಣಾ ಜಲಾಶಯಕ್ಕೆ ತುಂಬಿಸಿ, ನಂತರ 32 ಕೀಮೀ ಉದ್ದದ ಕೊಳವೆ ಅಳವಡಿಸಿ ಜಿಕೆವಿಕೆಯಲ್ಲಿ ನಿರ್ಮಿಸುವ ಶೇಖರಣಾ ಜಲಾಶಯಕ್ಕೆ ನೀರು ಪೂರೈಕೆ ಮಾಡಲಾಗುತ್ತದೆ. ಆನಂತರ ನೀರು ನಿಗದಿತ ಪ್ರದೇಶಗಳಿಗೆ ಹರಿಸುವ ಕುರಿತು ಡಿಪಿಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಬೆಂಗಳೂರು ನಗರ ಹೊರಭಾಗದಲ್ಲಿನ ನೀರಿನ ಸಮಸ್ಯೆ ನೀಗಿಸಲು ಕಾವೇರಿ 6ನೇ ಹಂತದ ಯೋಜನೆ ರೂಪಿಸಲಾಗಿದೆ. ಒಟ್ಟು 6 ಟಿಎಂಸಿ (500 ಎಂಎಲ್‌ಡಿ) ಕುಡಿಯುವ ಉದ್ದೇಶಕ್ಕಾಗಿ ನೀರು ಪೂರೈಸುವ ಯೋಜನೆ ಇದಾಗಿದ್ದು, ಗುರುವಾರ ಸಚಿವ ಸಂಪುಟ ಸಭೆಯಲ್ಲಿ ವಿಷಯ ಮಂಡಿಸಲಾಗುತ್ತಿದೆ.

- ರಾಮ್‌ಪ್ರಸಾತ್‌ ಮನೋಹರ್‌, ಜಲಮಂಡಳಿ ಅಧ್ಯಕ್ಷ