ಸಾರಾಂಶ
ಜಿಲ್ಲೆಯ ಜೀವನಾಡಿ ಕೆಆರ್‌ಎಸ್‌ನಲ್ಲಿ 150 ದಿನಗಳ ಕಾಲ ಗರಿಷ್ಠ ಮಟ್ಟದ ನೀರು ಸಂಗ್ರಹವಾಗಿ ಹೊಸ ದಾಖಲೆ ಬರೆದಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲೆಯ ಜೀವನಾಡಿ ಕೆಆರ್‌ಎಸ್‌ನಲ್ಲಿ 150 ದಿನಗಳ ಕಾಲ ಗರಿಷ್ಠ ಮಟ್ಟದ ನೀರು ಸಂಗ್ರಹವಾಗಿ ಹೊಸ ದಾಖಲೆ ಬರೆದಿದೆ. ಕಳೆದ ವರ್ಷ 108 ದಿನಗಳವರೆಗೆ ಗರಿಷ್ಠ ಮಟ್ಟದ ನೀರನ್ನು ಕಾಯ್ದಿರಿಸಿಕೊಂಡಿದ್ದ ಜಲಾಶಯ, ಈ ಬಾರಿ ಇನ್ನೂ ಹೆಚ್ಚು ಕಾಲ ಪೂರ್ಣ ಪ್ರಮಾಣದಲ್ಲಿ ನೀರನ್ನು ತನ್ನ ಒಡಲಲ್ಲಿ ಹಿಡಿದಿಟ್ಟುಕೊಳ್ಳುವ ಮೂಲಕ ಮತ್ತೊಂದು ದಾಖಲೆಯ ಗರಿಯನ್ನು ಮುಡಿಗೇರಿಸಿಕೊಂಡಿದೆ.ಕೇರಳದ ವಯನಾಡು, ಮಡಿಕೇರಿ ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆಯಾಗಿದ್ದರಿಂದ ಇತಿಹಾಸದಲ್ಲೇ ಮೊದಲ ಬಾರಿಗೆ ಜೂನ್ ತಿಂಗಳಲ್ಲೇ ಅಣೆಕಟ್ಟು ಭರ್ತಿಯಾಗಿತ್ತು. ಜೊತೆಗೆ, ಜು.30ರಂದು ಕಾವೇರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಗಿನ ಅರ್ಪಿಸಿದ್ದರು.
ಅಣೆಕಟ್ಟು ಭರ್ತಿಯಾದ ನಂತರದ ದಿನಗಳಲ್ಲಿ ಕೃಷಿ ಮತ್ತು ಕುಡಿಯುವ ನೀರಿಗೆ ಆದ್ಯತೆ ನೀಡುವ ಸಲುವಾಗಿ ನಾಲೆಗಳಲ್ಲಿ ನೀರು ಹರಿಸಲಾಯಿತು. ಮಳೆ ಪ್ರಮಾಣ ಕಡಿಮೆಯಾದ ಕಾರಣ ಜಲಾಶಯದಲ್ಲಿ ನೀರಿನ ಮಟ್ಟ ಕಡಿಮೆಯಾಗಿತ್ತು. ಜುಲೈನಿಂದ ಇಲ್ಲಿಯವರೆಗೆ ಕೇರಳ, ಕೊಡಗು, ಹೇಮಾವತಿ ಭಾಗದಲ್ಲೂ ನಿರಂತರ ಮಳೆ ಸುರಿದಿದ್ದರಿಂದ ಜಲಾಶಯಕ್ಕೆ ಒಳಹರಿವು ಹೆಚ್ಚಳಗೊಂಡು ಅಣೆಕಟ್ಟು ಭರ್ತಿಯಾಯಿತು. ಹೆಚ್ಚಿನ ಪ್ರಮಾಣದ ನೀರನ್ನು ನದಿಗೆ ಬಿಡುವ ಮೂಲಕ ಗರಿಷ್ಠ ಮಟ್ಟವನ್ನು ಕಾಯ್ದುಕೊಳ್ಳಲಾಗಿತ್ತು.ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆ ಬೀಳುತ್ತಿರುವುದರಿಂದ ತಮಿಳುನಾಡಿಗೆ ಈ ಬಾರಿ ಅಪಾರ ಪ್ರಮಾಣದ ನೀರು ಹರಿದು ಹೋಗಿದೆ. ಪ್ರಸ್ತುತ ಜಲಾಶಯದ ಗರಿಷ್ಠ ಮಟ್ಟ 124.80 ಅಡಿ ಆಗಿದ್ದು, 123.86 ಅಡಿಯವರೆಗೆ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ 3372 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಅಣೆಕಟ್ಟೆಯಿಂದ 5702 ಕ್ಯುಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ. ಅಣೆಕಟ್ಟೆಯಲ್ಲಿ 48.144 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.
;Resize=(128,128))
;Resize=(128,128))
;Resize=(128,128))