ಗಿರೀಶ್ ಮಾದೇನಹಳ್ಳಿ

ಬೆಂಗಳೂರು : ಕರುನಾಡಿನಲ್ಲಿ ಗುಪ್ತವಾಗಿ ನಡೆಯುವ ಭಯೋತ್ಪಾದಕ ಚಟುವಟಿಕೆಗಳ ಮೇಲೆ ಕಣ್ಗಾವಲು ಬಿಗಿಗೊಳಿಸಲು ಮುಂದಾಗಿರುವ ರಾಜ್ಯ ಪೊಲೀಸ್ ಇಲಾಖೆ, ಪ್ರತಿ ಠಾಣೆಗಳಿಗೆ ಬೆರಳ ತುದಿಯಲ್ಲಿ ಶಂಕಿತ ಉಗ್ರರು ಹಾಗೂ ಭಯೋತ್ಪಾದಕ ಸಂಘಟನೆಗಳ ಮಾಹಿತಿ ನೀಡುವಂತಹ ಮಹತ್ವದ ಯೋಜನೆ ಜಾರಿಗೊಳಿಸುವ ನಿಟ್ಟಿನಲ್ಲಿ ಸಿದ್ಧತೆ ನಡೆಸಿದೆ.

ಭಯೋತ್ಪಾದಕ ದಾಳಿ ಹಾಗೂ ಸಂಘಟನೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ‘ಪ್ರಹಾರ್’ ನೀತಿ ಪ್ರಕಟಿಸಿದ ಬೆನ್ನಲ್ಲೇ ಆತಂಕವಾದಿಗಳ ವಿರುದ್ಧ ರಾಜ್ಯ ಪೊಲೀಸರು ಕಠಿಣ ನಿಲುವು ತಾಳಿದ್ದಾರೆ. ಮನೆಗಳ್ಳತನ, ದರೋಡೆ, ವಂಚನೆ ಹಾಗೂ ಕೊಲೆ ಸೇರಿದಂತೆ ಇತರೆ ಅಪರಾಧ ಪ್ರಕರಣಗಳ ಹಳೇ ಆರೋಪಿಗಳ ಮಾದರಿಯಲ್ಲೇ ಶಂಕಿತ ಭಯೋತ್ಪಾದಕರ ವಿವರಗಳನ್ನು ಪೊಲೀಸರಿಗೆ ಒದಗಿಸಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಈ ತಂತ್ರಗಾರಿಕೆ ಮೂಲಕ ರಹಸ್ಯವಾಗಿ ಬೇರೂರುವ ಉಗ್ರ ಸಂಘಟನೆಗಳ ನೇಮಕಾತಿ ಮೇಲೆ ನಿಗಾವಹಿಸುವುದು ಇಲಾಖೆ ಉದ್ದೇಶವಾಗಿದೆ.


ಇತ್ತೀಚೆಗೆ ನಡೆದ ರಾಜ್ಯ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಉನ್ನತ ಮಟ್ಟದ ಸಭೆಯಲ್ಲಿ ಮಾಹಿತಿ ಹಂಚಿಕೆ ಪ್ರಸ್ತಾಪವಾಗಿದ್ದು, ಕೆಲವೇ ದಿನಗಳಲ್ಲಿ ಈ ಬಗ್ಗೆ ಇಲಾಖೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.

ಸ್ಲೀಪರ್ ಸೆಲ್‌ಗಳ ಪತ್ತೆಗೆ ಸಹಕಾರಿ:

ಭಯೋತ್ಪಾದಕ ದಾಳಿಗೆ ಸಂಬಂಧಿಸಿದ ಪ್ರಕರಣಗಳ ತನಿಖೆ ಹಾಗೂ ಉಗ್ರ ಸಂಘಟನೆಗಳ ಚಟುವಟಿಕೆಗಳ ಮೇಲಿನ ಕಣ್ಗಾವಲನ್ನು ಸಾಮಾನ್ಯ ಅಪರಾಧ ಕೃತ್ಯಗಳಂತೆ ಪರಿಗಣಿಸುವಂತಿಲ್ಲ. ಇಲ್ಲಿ ನಿರಂತರವಾಗಿ ನಿಗಾ ಇರಬೇಕಾಗುತ್ತದೆ. ಆದರೆ ಪ್ರಸ್ತುತ ಇಲಾಖೆಯಲ್ಲಿ ಆಂತರಿಕ ಭದ್ರತಾ ವಿಭಾಗ (ಐಎಸ್‌ಡಿ) ಹಾಗೂ ಗುಪ್ತದಳದ ಭಯೋತ್ಪಾದಕ ನಿಗ್ರಹ ವಿಭಾಗದಲ್ಲಿ ಮಾತ್ರ ರಾಜ್ಯದಲ್ಲಿ ನಡೆದಿರುವ ಹಳೇ ಭಯೋತ್ಪಾದಕ ಪ್ರಕರಣಗಳು ಹಾಗೂ ಆ ಸಂಘಟನೆಗಳ ಶಂಕಿತ ಉಗ್ರರ ಮಾಹಿತಿ ಸಿಗುತ್ತದೆ. ಹೀಗಾಗಿ ಅಹಿತಕರ ಘಟನೆಗಳು ಸಂಭವಿಸಿದಾಗ ಮಾತ್ರವಷ್ಟೇ ಸ್ಥಳೀಯ ಪೊಲೀಸರು ಆ ಭಯೋತ್ಪಾದಕ ಸಂಘಟನೆಗಳ ವಿವರಕ್ಕೆ ಹುಡುಕಾಟ ನಡೆಸುತ್ತಾರೆ ಎಂದು ಹಿರಿಯ ಅಧಿಕಾರಿಯೊಬ್ಬರ ಬೇಸರ ವ್ಯಕ್ತಪಡಿಸಿದರು.

ಭಯೋತ್ಪಾದಕ ಸಂಘಟನೆಗಳ ಬಗ್ಗೆ ಮುಕ್ತವಾಗಿ ಮಾಹಿತಿ ಹಂಚಿಕೊಳ್ಳುವಂತೆ ಕೇಂದ್ರ ಹಾಗೂ ರಾಜ್ಯಗಳ ತನಿಖಾ ಸಂಸ್ಥೆಗಳಿಗೆ ಕೇಂದ್ರ ಸರ್ಕಾರವು ಸ್ಪಷ್ಟವಾಗಿ ಸೂಚಿಸಿದೆ. ಅಲ್ಲದೆ ಇದೇ ವಿಚಾರವಾಗಿ ರಾಜ್ಯ ಮತ್ತು ಕೇಂದ್ರದ ಪೊಲೀಸ್ ವ್ಯವಸ್ಥೆಯನ್ನು ಸಂಯೋಜನೆಗೊಳಿಸುವ ಕೆಲಸ ಸಹ ಪ್ರಗತಿಯಲ್ಲಿದೆ. ಹೀಗಾಗಿ ರಾಜ್ಯದಲ್ಲಿ ಠಾಣಾ ಮಟ್ಟದಲ್ಲೇ ಭಯೋತ್ಪಾದಕತೆ ಸಂಬಂಧಿಸಿದ ಪ್ರಕರಣಗಳು ಹಾಗೂ ಆರೋಪಿಗಳ ಮಾಹಿತಿ ನೀಡಲು ಯೋಜಿಸಲಾಗಿದೆ. ಈ ಬಗ್ಗೆ ಅಧಿಕಾರಿಗಳ ಸಭೆಯಲ್ಲಿ ಚರ್ಚೆ ಸಹ ಮಾಡಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಭಯೋತ್ಪಾದಕ ಸಂಘಟನೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾದರೆ ಮೂಲಭೂತವಾದಿಗಳು ಹಾಗೂ ಮೂಲಭೂತವಾದದ ಬಗ್ಗೆ ಅನುಕಂಪ ಹೊಂದಿರುವ ಸ್ಲೀಪರ್ ಸೆಲ್‌ಗಳ ಜಾಡು ಸಿಗಬಹುದು. ರಾಜ್ಯದಲ್ಲಿ ಗುಪ್ತವಾಗಿರುವ ಭಯೋತ್ಪಾದಕ ಸಂಘಟನೆಗಳಿಗೆ ಹೊಸ ನೇಮಕಾತಿ ನಿಯಂತ್ರಣಕ್ಕೆ ಕೂಡ ನೆರವಾಗಲಿದೆ ಎಂದು ಹೇಳಿದರು.

ಎಷ್ಟು ಪ್ರಕರಣಗಳು?

ಬೆಂಗಳೂರಿನ ಸರಣಿ ಬಾಂಬ್ ಸ್ಫೋಟ, ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಸ್ಫೋಟ, ಮಲ್ಲೇಶ್ವರ ರಾಜ್ಯ ಬಿಜೆಪಿ ಕಚೇರಿ ಬಳಿ ಬಾಂಬ್ ಸ್ಫೋಟ, ಮೈಸೂರು ನ್ಯಾಯಾಲಯದ ಬಳಿ ವಿಧ್ವಂಸಕ ಕೃತ್ಯ, ರಾಮೇಶ್ವರ ಕೆಫೆ ಸ್ಫೋಟ ಹಾಗೂ ಮಂಗಳೂರಿನ ಕುಕ್ಕರ್ ಸ್ಫೋಟ ಸೇರಿದಂತೆ ಇತರೆ ವಿಧ್ವಂಸಕ ಕೃತ್ಯಗಳ ಭೀಕರತೆಗೆ ಸಿಲುಕಿ ನಾಡು ನಲುಗಿದೆ. ಅಲ್ಲದೆ ಜಾಗತಿಕ ಮಟ್ಟದ ಅತ್ಯುಗ್ರ ಸಂಘನೆಯ ಇಸ್ಲಾಮಿಕ್ ಸ್ಟೇಟ್ಸ್ ಸಂಘಟನೆ ನೇಮಕಾತಿ ಜಾಲವು ರಾಜ್ಯದಲ್ಲಿ ಬಯಲಾಗಿದೆ. ಈ ಪ್ರಕರಣಗಳು ಹಾಗೂ ಬಂಧಿತ ಶಂಕಿತ ಉಗ್ರರ ಮಾಹಿತಿಯನ್ನು ಠಾಣೆಗಳಲ್ಲಿ ಸಿಗುವಂತೆ ಅಧಿಕಾರಿಗಳು ಯೋಜಿಸಿದ್ದಾರೆ.

ರಾಜ್ಯದಲ್ಲಿ ಉಗ್ರ ಸಂಘಟನೆಗಳ ಸಂಸ್ಥಾಪಕರು

ದೇಶದಲ್ಲಿ ಹಲವು ವಿಧ್ವಂಸಕ ಕೃತ್ಯ ಎಸಗಿ ನೂರಾರು ಜನರನ್ನು ಬಲಿ ಪಡೆದ ‘ಇಂಡಿಯನ್ ಮುಜಾಹಿದ್ದೀನ್ ಸಂಘಟನೆ’ಯ ಸಹ ಸಂಸ್ಥಾಪಕರು ರಾಜ್ಯದ ಭಟ್ಕಳ ಮೂಲದ ರಿಯಾಜ್ ಹಾಗೂ ಯಾಸಿನ್‌ ಸೋದರರು ಎಂಬ ಕಳಂಕ ನಾಡಿಗೆ ಅಂಟಿದೆ. ಹೀಗಾಗಿ ಬೇರು ಮಟ್ಟದಲ್ಲೇ ಉಗ್ರ ಸಂಘಟನೆಗಳನ್ನು ಚಿವುಟಿ ಹಾಕಲು ಪೊಲೀಸರು ಮುಂದಾಗಿದ್ದಾರೆ.