ಹಾವೇರಿ:50 ವರ್ಷಗಳ ಹಿಂದೆ ಪಟ್ಟಾ ಕೊಟ್ಟವರಿಗೆ ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶದಲ್ಲಿ ಜಿಲ್ಲಾಡಳಿತ ಮತ್ತೆ ಪಟ್ಟಾ ನೀಡಿ ಅರ್ಹರಿಗೆ ಅನ್ಯಾಯ ಮಾಡಿದೆ. ಮಾ. 10ರೊಳಗೆ ಅಕ್ರಮವಾಗಿ ವಿತರಿಸಿರುವ ಎಲ್ಲಾ ಪಟ್ಟಾಗಳನ್ನು ರದ್ದುಗೊಳಿಸಿ ಅರ್ಹರಿಗೆ ಮಾತ್ರ ಪಟ್ಟಾ ವಿತರಿಸುವಂತೆ ಆಗ್ರಹಿಸಿ ಮಂಗಳವಾರ ಇಲ್ಲಿನ ಜಿಲ್ಲಾಡಳಿತ ಭವನದ ಎದುರು ರಟ್ಟೀಹಳ್ಳಿ ತಾಲೂಕು ಕಡೂರು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಮಾಜಿ ಸಚಿವ ಬಿ.ಸಿ. ಪಾಟೀಲ ಮಾತನಾಡಿ, ಕಳೆದ ಫೆ. 14ರಂದು ಸರ್ಕಾರ ಹಕ್ಕುಪತ್ರ ವಿತರಿಸುವ ನೆಪದಲ್ಲಿ ಹಾವೇರಿಯಲ್ಲಿ ₹20 ಕೋಟಿ ಖರ್ಚು ಮಾಡಿ ಸಮಾವೇಶ ನಡೆಸಿದೆ. 1.10 ಲಕ್ಷ ಜನರಿಗೆ ಪಟ್ಟಾ ಕೊಟ್ಟಿದ್ದೇವೆ ಎಂದು ಹೆಸರು ಪಡೆಯಲು ಕಾರ್ಯಕ್ರಮ ಮಾಡಿದೆ. ಆದರೆ, ರಟ್ಟೀಹಳ್ಳಿ ತಾಲೂಕು ಕಡೂರು ಗ್ರಾಮದಲ್ಲಿ 318 ನಕಲಿ ಪಟ್ಟಾಗಳನ್ನು ವಿತರಿಸಿದೆ. 1974-75ರ ಅವಧಿಯಲ್ಲಿ ಪಟ್ಟಾ ನೀಡಲಾಗಿತ್ತು. ಆ ಜಾಗದಲ್ಲಿ ಮನೆ ಕಟ್ಟಿಸಿಕೊಂಡಿದ್ದು, ಜೀವನ ನಡೆಸುತ್ತಿದ್ದಾರೆ. ಅಲ್ಲದೇ ಬ್ಯಾಂಕ್ ಸಾಲ ತೆಗೆದುಕೊಂಡಿದ್ದಾರೆ. ನಿರಂತರ ವಹಿವಾಟಿನಲ್ಲೂ ಇದ್ದಾರೆ. ಈಗಷ್ಟೇ ಇ-ಸ್ವತ್ತು ಮಾಡಿಸಿಕೊಳ್ಳುತ್ತಿದ್ದಾರೆ. ಅಂತಹವರಿಗೆ ಸರ್ಕಾರ ಮತ್ತೆ ಪಟ್ಟಾ ಕೊಡಲು ತಲಾ ₹2500 ರಿಂದ ₹10 ಸಾವಿರ ವರೆಗೂ ಹಣ ವಸೂಲಿ ಮಾಡಿದ್ದಾರೆ. ಅಂತಹವರನ್ನು ಬಸ್ಸಿನಲ್ಲಿ ಕರೆದುಕೊಂಡು ಬಂದು ಪುನಃ ಪಟ್ಟಾ ವಿತರಿಸಿದ್ದಾರೆ ಎಂದು ಆರೋಪಿಸಿದರು.1974ರಲ್ಲಿ ಪಟ್ಟಾ ಪಡೆದುಕೊಂಡಿದ್ದ ಜನರಿಗೆ ಪುನಃ ಪಟ್ಟಾ ವಿತರಿಸಿ 15 ವರ್ಷಗಳ ಕಾಲ ಪರಭಾರೆ ಮಾಡಬಾರದು ಎಂಬ ಷರತ್ತು ವಿಧಿಸಿ, ಬಡವರ ಹಕ್ಕನ್ನು ಕಿತ್ತುಕೊಂಡಿದ್ದಾರೆ. ಸರ್ಕಾರ ನಿರ್ಗತಿಕರು, ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿಸಿಕೊಂಡ ಬಡವರಿಗೆ, ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುವ ಜನರಿಗೆ ಪಟ್ಟಾ ಕೊಟ್ಟಿದ್ದರೆ ನಾವು ಸ್ವಾಗತಿಸುತ್ತಿದ್ದೆವು. ಆದರೆ ಇವರು ಆ ರೀತಿ ಕೆಲಸ ಮಾಡಲಿಲ್ಲ. ಬೇಟಕೆರೂರು ಗುಡ್ಡದಲ್ಲಿ 36ಕ್ಕೂ ಹೆಚ್ಚು ದಲಿತ ಕುಟುಂಬಗಳು ವಾಸವಿದ್ದಾರೆ. ಅವರು ಪಟ್ಟಾ ಕೇಳುತ್ತಿದ್ದು, ಅಂತಹವರಿಗೆ ಕೊಡುತ್ತಿಲ್ಲ ಎಂದು ಆರೋಪಿಸಿದರು. ಮಾ.10ರೊಳಗೆ ಅಕ್ರಮ ಪಟ್ಟಾ ರದ್ದುಪಡಿಸಬೇಕು, ಇಲ್ಲವಾದರೆ ಜಿಲ್ಲಾಡಳಿತದ ವಿರುದ್ಧ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಗವಿಸಿದ್ದಪ್ಪ ದ್ಯಾಮಣ್ಣನವರ, ಕಿರಣ ಕೊಳ್ಳಿ, ಬಸವರಾಜ ಅರಬಗೊಂಡ, ಎಂ.ಎಸ್. ಪಾಟೀಲ, ಕಿರಣಕುಮಾರ ಕೋಣನವರ, ನಾಗೇಂದ್ರ ಕಟಕೋಳ, ನಿರಂಜನ ಹೇರೂರ, ಗ್ರಾಮಸ್ಥರಾದ ಕರೇಗೌಡ ಮುದಿಗೌಡ್ರ, ಸುರೇಶ ಸಾವುಕಾರ, ಕರಬಸಪ್ಪ ಮುದಿಗೌಡ್ರ, ಮಂಜನಗೌಡ ಲಕ್ಕನಗೌಡ್ರ, ಗುಡ್ಡಪ್ಪ ಕಾಳೇರ, ವೀರಯ್ಯ ಆರಾಧ್ಯಮಠ, ಬಸನಗೌಡ ಸಾವುಕಾರ, ಜಗದೀಶ ಶಿರಗಂಬಿ, ಬಸನಗೌಡ ಮಕರಿ, ಗೌರಮ್ಮ ಮಡಿವಾಳ, ಸರೋಜಾ, ರೂಪಾ, ಶಮೀಮಬಾನು ಇತರರಿದ್ದರು.ಡಿಸಿ ಕಾಂಗ್ರೆಸ್ ಕೈಗೊಂಬೆ: ಅಕ್ರಮ ಪಟ್ಟಾ ವಿತರಿಸಿದ್ದ ಬಗ್ಗೆ ಜಿಲ್ಲಾಧಿಕಾರಿಗಳನ್ನು ಪ್ರಶ್ನಿಸಿದರೆ ನೋಡ್ತಿವಿ, ಪರಿಶೀಲಿಸುತ್ತೇವೆ ಎಂದು ಹಾರಿಕೆ ಉತ್ತರ ಕೊಡುತ್ತಾರೆಯೇ ಹೊರತು ಜವಾಬ್ದಾರಿ ಹೊತ್ತುಕೊಳ್ಳಲು ಸಿದ್ಧರಿಲ್ಲ. ಡಿಸಿಯವರು ಕಾಂಗ್ರೆಸ್ ಸರ್ಕಾರದ ಕೈಗೊಂಬೆಯಾಗಿ ಅವರು ಹೇಳಿದ ರೀತಿ ಕೆಲಸ ಮಾಡುತ್ತಿದ್ದಾರೆ. ಮಾಜಿ ಸಚಿವರು, ಶಾಸಕರು ಬಂದು ಮನವಿ ಮಾಡಿದರೂ ಕೂಡ ಸರಿಯಾಗಿ ಸ್ಪಂದಿಸುತ್ತಿಲ್ಲ, ಅಂದರೆ ಜನಸಾಮಾನ್ಯರ ಪಾಡೇನು? ಈ ಕೂಡಲೇ ಕಡೂರು ಗ್ರಾಮದ ಅಕ್ರಮ ಪಟ್ಟಾಗಳು ರದ್ದಾಗಬೇಕು. ಅರ್ಹರಿಗೆ ಈ ಸ್ವತ್ತು ಮಾಡಿಸಿಕೊಟ್ಟು, ನಕಾಶೆ ಗುರುತಿಸುವ ಕೆಲಸವಾಗಬೇಕು ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದರು.ಪಟ್ಟಾ ವಿತರಿಸುವ ಸಂಬಂಧ ದುಡ್ಡು ತೆಗೆದುಕೊಂಡಿದ್ದರ ಬಗ್ಗೆ ಬೇರೆ ಎಲ್ಲಾದರೂ ಬಾಯಿಬಿಟ್ಟರೆ ನಿಮಗೆ ಪಟ್ಟಾಗಳನ್ನು ಕೊಡುವುದಿಲ್ಲ. ಪಟ್ಟಾಗಳನ್ನು ರದ್ದು ಮಾಡುತ್ತೇವೆ ಎಂದು ಜನಸಾಮಾನ್ಯರಿಗೆ ಅಧಿಕಾರಿಗಳು, ಕೆಲ ಕಾಂಗ್ರೆಸ್ ಮುಖಂಡರು ಬೆದರಿಕೆ ಹಾಕಿದ್ದಾರೆ. ಹಾಗಾಗಿ ಜನರು ಸತ್ಯ ಹೇಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ಮಾಜಿ ಶಾಸಕ ಅರುಣಕುಮಾರ ಪೂಜಾರ ಹೇಳಿದರು.ಕಡೂರ ಗ್ರಾಮದಲ್ಲಿ ಕೇವಲ 30 ಕುಟುಂಬಗಳು ಮಾತ್ರ ಪಟ್ಟಾ ಪಡೆಯಲಿಕ್ಕೆ ಅರ್ಹರಿದ್ದಾರೆ. ಈಗಾಗಲೇ ಪಟ್ಟಾ ಪಡೆದವರಿಗೆ ಕೆಜೆಪಿ ಆಗಿದೆ. ಸ್ಕೆಚ್ ಮಾತ್ರ ಬಾಕಿ ಇದ್ದು, ಅಧಿಕಾರಿಗಳು ಈ ಸ್ವತ್ತು ಮಾಡಿಸಿಕೊಡುವುದಾಗಿ 2500 ರು. ಹಣ ತೆಗೆದುಕೊಂಡಿದ್ದು, ಫೋನ್ ಪೇ ಸಹ ಮಾಡಿಸಿಕೊಂಡಿದ್ದಾರೆ ಎಂದು ಕಡೂರ ಗ್ರಾಮಸ್ಥ ಜಗದೀಶ ಲಕ್ಕನಗೌಡ್ರ ಹೇಳಿದರು.ಅಕ್ರಮವಾಗಿ ನೀಡಿದ ಪಟ್ಟಾ ರದ್ದುಪಡಿಸದಿದ್ದರೆ ಉಗ್ರ ಪ್ರತಿಭಟನೆ
50 ವರ್ಷಗಳ ಹಿಂದೆ ಪಟ್ಟಾ ಕೊಟ್ಟವರಿಗೆ ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶದಲ್ಲಿ ಜಿಲ್ಲಾಡಳಿತ ಮತ್ತೆ ಪಟ್ಟಾ ನೀಡಿ ಅರ್ಹರಿಗೆ ಅನ್ಯಾಯ ಮಾಡಿದೆ. ಮಾ. 10ರೊಳಗೆ ಅಕ್ರಮವಾಗಿ ವಿತರಿಸಿರುವ ಎಲ್ಲಾ ಪಟ್ಟಾಗಳನ್ನು ರದ್ದುಗೊಳಿಸಿ ಅರ್ಹರಿಗೆ ಮಾತ್ರ ಪಟ್ಟಾ ವಿತರಿಸುವಂತೆ ಆಗ್ರಹಿಸಿ ಮಂಗಳವಾರ ಇಲ್ಲಿನ ಜಿಲ್ಲಾಡಳಿತ ಭವನದ ಎದುರು ರಟ್ಟೀಹಳ್ಳಿ ತಾಲೂಕು ಕಡೂರು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.