ನೀಟ್ ಪರೀಕ್ಷೆಯಲ್ಲಿ ಗೆದರೆ ಗ್ರಾಮದ ಕುಮಾರಸ್ವಾಮಿಗೆ 147ನೇ ರ‍್ಯಾಂಕ್
ಕನ್ನಡಪ್ರಭ ವಾರ್ತೆ ಗೌರಿಬಿದನೂರುತಾಲ್ಲೂಕಿನ ಗೆದರೆ ಗ್ರಾಮದ ಬೈರೇಗೌಡ ಮತ್ತು ಸುಮಿತ್ರಾ ದಂಪತಿಯ ಪುತ್ರ ಕುಮಾರಸ್ವಾಮಿ ಜಿ.ಬಿ. ಅವರು ನೀಟ್ 2026 ಪರೀಕ್ಷೆಯಲ್ಲಿ 687 ಅಂಕಗಳನ್ನು ಗಳಿಸಿ ಅಖಿಲ ಭಾರತ 147ನೇ ರ‍್ಯಾಂಕ್ ಪಡೆದಿದ್ದಾರೆ. ಇವರ ಸಾಧನೆಗೆ ಕುಟುಂಬಸ್ಥರು, ಶಿಕ್ಷಕರು ಹಾಗೂ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.ಬಡತನ ಸಾಧನೆಗೆ ಎಂದಿಗೂ ಅಡ್ಡಿಯಾಗುವುದಿಲ್ಲ. ಪ್ರತಿಭೆ, ಪರಿಶ್ರಮ ಮತ್ತು ಸರಿಯಾದ ಅವಕಾಶಗಳು ದೊರೆತರೆ ಗ್ರಾಮೀಣ ಭಾಗದ ವಿದ್ಯಾರ್ಥಿಯೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಬಹುದು ಎಂಬುದಕ್ಕೆ ಗೆದರೆ ಗ್ರಾಮದ ಕುಮಾರಸ್ವಾಮಿ ಜಿ.ಬಿ. ಅವರ ಯಶಸ್ಸೇ ಸಾಕ್ಷಿ.ಕುಮಾರಸ್ವಾಮಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ತಾಲೂಕಿನ ಅಲೀಪುರದ ನೊಬೆಲ್ ಶಾಲೆಯಲ್ಲಿ 1ರಿಂದ 5ನೇ ತರಗತಿವರೆಗೆ ಪೂರ್ಣಗೊಳಿಸಿದರು. ಬಳಿಕ ಚಿಂತಾಮಣಿಯ ಏನಿಗದಲೆ ನವೋದಯ ರೋಜ್‌ಗಾರ್ ಶಾಲೆಯಲ್ಲಿ 10ನೇ ತರಗತಿ ಶಿಕ್ಷಣ ಮುಗಿಸಿದರು. ನಂತರ ಪುಣೆಯ ನವೋದಯ ಶಾಲೆಯಲ್ಲಿ ಪ್ರಥಮ ಮತ್ತು ದ್ವಿತೀಯ ಪಿಯುಸಿ ಶಿಕ್ಷಣ ಪಡೆದಿದ್ದಾರೆ. ನವೋದಯ ಶಾಲೆಯಲ್ಲಿ ಎಲ್ಲವೂ ಉಚಿತವಾಗಿದ್ದರಿಂದ ಯಾವಾಗಲಾದರೂ ಮನೆಯಿಂದ ಒಂದು ಸಾವಿರದಿಂದ ಎರಡು ಸಾವಿರ ಖರ್ಚಿಗೆ ನೀಡುತ್ತಿದ್ದರು.ಪ್ರಥಮ ವರ್ಷದ ಪಿಯುಸಿಯಿಂದಲೇ ನೀಟ್‌ಗಾಗಿ ತರಬೇತಿ ನೀಡಲಾಗುತ್ತಿತ್ತು. ಪ್ರತಿದಿನ ಬೆಳಿಗ್ಗೆ 5 ಗಂಟೆಯಿಂದಲೇ ಓದು ಪ್ರಾರಂಭವಾಗುತ್ತಿತ್ತು. ಸ್ನಾನ ತಿಂಡಿಯ ನಂತರ ಮತ್ತೆ ತರಗತಿಗಳು ಪ್ರಾರಂಭವಾಗಿ ಸಂಜೆ 6ಕ್ಕೆ ಮುಗಿಯುತ್ತಿತ್ತು. ಬಳಿಕ ರಾತ್ರಿ ಊಟದ ನಂತರ ರಾತ್ರಿ 11 ರವರೆಗೆ ಓದುತ್ತಿದ್ದರು. ಈ ಸಂದರ್ಭದಲ್ಲಿ ಬಡವರಿಗೆ ಉಚಿತ ನೀಟ್ ಮತ್ತು ಜೆಇಇಗೆ ತರಬೇತಿ ನೀಡುವ ದಕ್ಷಣ ಫೌಂಡೇಶನ್‌ನ ಸಂಪರ್ಕ ಪಡೆದರು. ಅಲ್ಲಿ ನಿರಂತರವಾಗಿ ತರಬೇತಿ ಪಡೆದರು. ನಗರದ ಪ್ರತಿಷ್ಠಿತ ತರಬೇತಿ ಸಂಸ್ಥೆಗಳಲ್ಲಿ ಮಾತ್ರ ತರಬೇತಿ ಪಡೆದರೆ ಮಾತ್ರ ಉತ್ತಮ ರ್ಯಾಂಕ್ ಗಳಿಸಬಹುದು ಎಂಬುದಕ್ಕೆ ಕುಮಾರಸ್ವಾಮಿ ಅವರ ಸಾಧನೆ ಅಪವಾದಂತಿದ್ದಾರೆ.ಕೋಟ್...ನನ್ನ ಸಾಧನೆಗೆ ಪೋಷಕರು, ಶಿಕ್ಷಕರು ಹಾಗೂ ನನಗೆ ತರಬೇತಿ ಮತ್ತು ಮಾರ್ಗದರ್ಶನ ನೀಡಿದ ಸಂಸ್ಥೆಗಳ ಸಹಕಾರವೇ ಪ್ರಮುಖ ಕಾರಣ. ಮುಂದೆ AIIMSನಲ್ಲಿ ವೈದ್ಯಕೀಯ ಶಿಕ್ಷಣ ಪಡೆದು ಉತ್ತಮ ವೈದ್ಯನಾಗುವುದು ನನ್ನ ಗುರಿಯಾಗಿದೆ.
ಕುಮಾರಸ್ವಾಮಿ ಜಿ.ಬಿ., ನೀಟ್ ಸಾಧಕ