- ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಸಾಮಾಜಿಕ ಬದಲಾವಣೆ ಮತ್ತು ನೆಮ್ಮದಿಯ ಜೀವನಕ್ಕೆ ವಚನ ಸಾಹಿತ್ಯ ಹಾಗೂ ಬಸವಣ್ಣನವರ ತತ್ವಗಳನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ತಿಳಿಸಿದರು.ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಸವಣ್ಣನವರ "ನಿಮ್ಮ ನಿಮ್ಮ ಮನವನ್ನು ಸಂತೈಸಿಕೊಳ್ಳಿ " ಎಂದರು. ಆದರೆ, ನಾವು ಸದಾ ಇತರರ ತಪ್ಪುಗಳನ್ನು ಹುಡುಕುವುದರಲ್ಲೇ ಕಾಲ ಕಳೆಯುತ್ತಿದ್ದೇವೆ. ಬದಲಾಗಿ ನಿಸ್ಸಾರ್ಥವಾಗಿ ಬದುಕುವುದನ್ನು ಕಲಿಯಬೇಕು. ಜೀವನದಲ್ಲಿ ಕನಿಷ್ಠ ಐದು ವಚನಗಳನ್ನು ಅಕ್ಷರಶಃ ಅಳವಡಿಸಿಕೊಂಡರೂ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದಂತಾಗುತ್ತದೆ. ಶಿವಪೂಜೆ ಕೇವಲ ಆರಾಧನೆಯಲ್ಲ, ಅದೊಂದು ಯೋಗ. ಮಾನಸಿಕ ನೆಮ್ಮದಿಯನ್ನು ನೀಡುವುದು. ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆಯಂತಹ ಸಮಸ್ಯೆಗಳಿಂದ ದೂರವಿರಲು ನೆರವಾಗುತ್ತದೆ ಎಂದರು.
ಎಂ.ಜೆ.ಶಿವಕುಮಾರ ಮಾತನಾಡಿ, ಹಡಪದ ಅಪ್ಪಣ್ಣನವರ ಜೀವನ ಹಾಗೂ ಸಾಧನೆ ಇಂದಿನ ಪೀಳಿಗೆಗೆ ಪ್ರೇರಣೆಯಾಗಿದೆ, ಜಗಜ್ಯೋತಿ ಬಸವೇಶ್ವರರ ನಿಕಟವರ್ತಿ ಹಾಗೂ ಅವರ ತತ್ವ-ಆದರ್ಶಗಳನ್ನು ಸ್ವಯಂ ಜೀವನದಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಮಾದರಿಯಾಗಿದ್ದ ಹಡಪದ ಅಪ್ಪಣ್ಣನವರು ಬಸವಣ್ಣನವರ ಮಾನಸ ಪುತ್ರ ಹಾಗೂ ಅನುಭವ ಮಂಟಪದ ಪ್ರಮುಖ ಆಧಾರ ಸ್ತಂಭವಾಗಿದ್ದರು ಎಂದು ಹೇಳಿದರು.
ರೈತ ಮುಖಂಡ ಬಲ್ಲೂರು ರವಿಕುಮಾರ, ಸಮುದಾಯದ ಮುಖಂಡರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.- - -
-29ಕೆಡಿವಿಜಿ44: ದಾವಣಗೆರೆಯಲ್ಲಿ ಜಿಲ್ಲಾಡಳಿತದಿಂದ ಹಡಪದ ಅಪ್ಪಣ್ಣ ಜಯಂತಿ ಆಚರಿಸಲಾಯಿತು.