ಚನ್ನಪಟ್ಟಣ: ಬರದ ನಡುವೆಯೂ ತಮಿಳುನಾಡಿಗೆ ಕೆಆರ್‌ಎಸ್‌ನಿಂದ ನೀರು ಹರಿಸುವಂತೆ ಆದೇಶ ನೀಡಿರುವ ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯೂಆರ್‌ಸಿ) ಆದೇಶವನ್ನು ಖಂಡಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯಿದ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ಕಾವೇರಿ ಸರ್ಕಲ್‌ನಲ್ಲಿ ಜಮಾಯಿಸಿದ ವೇದಿಕೆ ಪ್ರತಿಭಟನಾಕಾರನ್ನು ಉದ್ದೇಶಿಸಿ ಮಾತನಾಡಿದ ಕಕಜ ವೇದಿಕೆ ರಾಜ್ಯಾಧ್ಯಕ್ಷ ರಮೇಶ್ ಗೌಡ, ನೀರಿಲ್ಲದಿದ್ದರೂ ನೀರನ್ನು ಬಿಡುವ ಕಾನೂನು ಅಸ್ತ್ರದ ಮೂಲಕ ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯೂಆರ್‌ಸಿ) ರಾಜ್ಯದ ಜನತೆ ಮೇಲೆ ಗದಾಪ್ರಹಾರ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ೧೫೦ ವರ್ಷಗಳಲ್ಲಿ ಎಂದೂ ಕಾಣದಷ್ಟು ಬರ ಎದುರಿಸುತ್ತಿದ್ದೇವೆ. ಇಂತಹ ತೀವ್ರ ಬರಗಾಲದಂತಹ ಸಂಕಷ್ಟದ ನಡುವೆಯೂ ತಮಿಳುನಾಡಿಗೆ ಮುಂದಿನ ೧೫ ದಿನ ನಿತ್ಯವೂ ೩,೫೦೦ ಕ್ಯೂಸೆಕ್ ನೀರು ಹರಿಸಬೇಕೆಂದು ಆದೇಶಿಸಿರುವುದು ಖಂಡನೀಯ. ಈ ಆದೇಶದ ವಿರುದ್ಧ ರಾಜ್ಯ ಸರ್ಕಾರ ಕೂಡಲೇ ಮೇಲ್ಮನವಿ ಸಲ್ಲಿಸಲು ಕ್ರಮ ಕೈಗೊಳ್ಳಬೇಕು. ಬೆಂಗಳೂರು ನಗರ ಸೇರಿದಂತೆ ಮೂರು ಜಿಲ್ಲೆಗಳಿಗೆ ೪ ತಿಂಗಳ ಕಾಲ ೧೦ ಟಿಎಂಸಿ ನೀರು ಅಗತ್ಯವಿದೆ. ಇಂತಹ ಸಂದರ್ಭದಲ್ಲಿ ಇರುವ ನಾಲ್ಕೈದು ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಿದರೆ ಜನರ ಪಾಡೇನು ಎಂದು ಪ್ರಶಿಸಿದರು.

ವಕೀಲರಾದ ಶಿವರಾಜೇಗೌಡ ಮಾತನಾಡಿ, ಕಳೆದ ೧ ತಿಂಗಳಿಂದ ತಮಿಳುನಾಡಿಗೆ ನೀರು ಹರಿಸದಂತೆ ಆಗ್ರಹಿಸಿ ಮಂಡ್ಯ ಜಿಲ್ಲೆಯ ರೈತರು ವಿಭಿನ್ನ ಚಳವಳಿ ಮಾಡುತ್ತಿದ್ದಾರೆ. ಸರ್ಕಾರ ಈ ವೇಳೆ ಎಚ್ಚೆತ್ತು ಕಾವೇರಿ ನೀರು ನಿಯಂತ್ರಣ ಸಮಿತಿಗೆ ರಾಜ್ಯದ ಜಲಾಶಯದ ನೀರಿನ ವಾಸ್ತವಾಂಶ ತಿಳಿಸಬೇಕಿತ್ತು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಂದೆ ತಮಿಳುನಾಡು ಮುಖ್ಯಮಂತ್ರಿಗಳು ರಾಜ್ಯಕ್ಕೆ ಪ್ರವಾಸ ಬಂದ ವೇಳೆ ಅವರನ್ನು ಕೆಆರ್‌ಎಸ್ ಜಲಾಶಯಕ್ಕೆ ಕರೆದೊಯ್ದು ಅಲ್ಲಿನ ವಾಸ್ತವಾಂಶ ಮತ್ತು ಜಿಲ್ಲೆಯ ಕೃಷಿ ವಾಸ್ತವಾಂಶ ತಿಳಿಸಲು ಮುಂದಾಗಬೇಕು ಎಂದರು.

ಪ್ರಗತಿಪರ ರಾಜಕಾರಣಿ ರಾಂಪುರ ಲೋಕೇಶ್(ರಾಜಣ್ಣ) ಮಾತನಾಡಿ ಕಾವೇರಿ ನೀರು ನಿಯಂತ್ರಣ ಸಮಿತಿ ಮತ್ತು ಕೇಂದ್ರ ಸರ್ಕಾರಗಳು (ಸಿಡಬ್ಲ್ಯೂಆರ್‌ಸಿ) ಕಳೆದ ೫೦ ವರ್ಷಗಳಿಂದ ರಾಜ್ಯದ ಮೇಲೆ ಮಲತಾಯಿ ಧೋರಣೆ ಮಾಡುತ್ತಾ ಬಂದಿವೆ. ಮಳೆ ಇಲ್ಲದ ಸಂದರ್ಭದಲ್ಲೇ ನೀರನ್ನು ಬಿಡಿ ಎಂದು ಕುಡಿಯುವ ನೀರಿಗೂ ಸಮಸ್ಯೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಪ್ರತಿಭಟನೆಯಲ್ಲಿ ಮುದಗೆರೆ ಪಿಎಸಿಎಸ್ ನಿರ್ದೇಶಕ ಜಯಕುಮಾರ್, ಉಪನ್ಯಾಸಕ ಜಾಕೀರ್, ನಿವೃತ್ತ ಸಿಡಿಪಿಒ ಪುಟ್ಟಸ್ವಾಮಿ, ಸಿ.ಚನ್ನಪ್ಪ ಮಾತನಾಡಿದರು. ವೇದಿಕೆ ಜಿಲ್ಲಾಧ್ಯಕ್ಷ ಬೇವೂರು ಯೋಗೇಶ್‌ಗೌಡ, ನಿವೃತ್ತ ಉಪನ್ಯಾಸಕ ಚನ್ನವೀರೇಗೌಡ, ನಗರಸಭಾ ಸದಸ್ಯ ಮತಿನ್, ರಾಜೇಂದ್ರ, ಕೋಡಂಬಹಳ್ಳಿ ರಾಜು, ಜೆಡಿಎಸ್ ರಾಜೇಶ್, ಕೋಡಂಬಹಳ್ಳಿ ನಾಗರಾಜು ಇತರರಿದ್ದರು.

ಬಾಕ್ಸ್

ತಮಿಳು ಸಿನಿಮಾ ಪ್ರದರ್ಶಿಸದಂತೆ ಆಗ್ರಹ

ಚನ್ನಪಟ್ಟಣ: ರಾಜ್ಯದಲ್ಲಿ ಬರ ಇದ್ದರೂ ಕಾವೇರಿ ನೀರಿಗೆ ಖ್ಯಾತೆ ತೆಗೆದಿರುವ ತಮಿಳುನಾಡಿನ ತಮಿಳು ಸಿನಿಮಾಗಳನ್ನು ರಾಜ್ಯದಲ್ಲಿ ಪ್ರದರ್ಶನ ಮಾಡಲು ಅವಕಾಶ ನೀಡಬಾರದು ಎಂದು ಕಕಜ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡ ಆಗ್ರಹಿಸಿದರು.

ಪಟ್ಟಣದ ಶಿವಾನಂದ ಚಿತ್ರಮಂದಿರದ ಮುಂದೆ ತಮಿಳುನಾಡು ಮುಖ್ಯಮಂತ್ರಿ ವಿಜಯ್ ನಟನೆಯ ಜನನಾಯಗನ್ ಸಿನಿಮಾ ಬ್ಯಾನರ್‌ಗಳನ್ನು ತೆರವು ಮಾಡಲು ಆಗ್ರಹಿಸಿದ ಅವರು, ನಮ್ಮ ರಾಜ್ಯದಲ್ಲಿ ಎಲ್ಲಾ ಭಾಷೆಯ ಜನರು ಇದ್ದಾರೆ. ತಮಿಳುನಾಡಿನಿಂದ ಬಂದು ನೆಲೆಸಿರುವವರು ಇದ್ದಾರೆ. ಇಂತಹ ಸಂದರ್ಭದಲ್ಲಿ ಎಲ್ಲರ ಕುಡಿಯುವ ನೀರನ್ನು ಕಸಿದುಕೊಳ್ಳಲು ಮುಂದಾಗಿರುವ ತಮಿಳುನಾಡು ಸರ್ಕಾರದ ನಡೆ ಖಂಡನೀಯ. ಈ ನಿಟ್ಟಿನಲ್ಲಿ ಕೂಡಲೇ ಈ ಸಿನಿಮಾ ತೆರವು ಮಾಡಲು ಚಿತ್ರಮಂದಿರದ ಮಾಲೀಕರು ಕ್ರಮಕ್ಕೆ ಮುಂದಾಗಬೇಕು, ಜೊತೆಗೆ ಕೂಡಲೇ ಬ್ಯಾನರ್‌ಗಳನ್ನು ತೆರವು ಮಾಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆ ಹಿನ್ನೆಲೆಯಲ್ಲಿ ಚಿತ್ರಮಂದಿರದ ಮುಂದೆ ಹಾಕಿದ್ದ ಬ್ಯಾನರ್ ಅನ್ನು ತೆರವುಮಾಡಲಾಯಿತು.

ಪೊಟೋ೨೯ಸಿಪಿಟಿ೧:

ಚನ್ನಪಟ್ಟಣದ ಕಾವೇರಿ ಸರ್ಕಲ್‌ನಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶ ಖಂಡಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಪದಾಧಿಕಾರಿಗಳಿಂದ ಪ್ರತಿಭಟನೆ ನಡೆಸಲಾಯಿತು.