ಮೈಸೂರು ಜಿಲ್ಲೆ ಟಿ.ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆ ವೇಳೆ ಮಸೀದಿ ಮುಂದೆ ಮೆರವಣಿಗೆ ನಡೆಸಿ, ಪಟಾಕಿ ಸಿಡಿಸಿದರೆ ‘ಗ್ರಹಚಾರ ಬಿಡಿಸುತ್ತೇನೆ’ ಎಂಬ ಸಿಪಿಐ ಧನಂಜಯ್ ಅವರ ಹೇಳಿಕೆ ಖಂಡಿಸಿ ಹಾಗೂ ಅವರ ಅಮಾನತಿಗೆ ಆಗ್ರಹಿಸಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಮುಂದಾದರು.
ಟಿ. ನರಸೀಪುರ : ಮೈಸೂರು ಜಿಲ್ಲೆ ಟಿ.ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆ ವೇಳೆ ಮಸೀದಿ ಮುಂದೆ ಮೆರವಣಿಗೆ ನಡೆಸಿ, ಪಟಾಕಿ ಸಿಡಿಸಿದರೆ ‘ಗ್ರಹಚಾರ ಬಿಡಿಸುತ್ತೇನೆ’ ಎಂಬ ಸಿಪಿಐ ಧನಂಜಯ್ ಅವರ ಹೇಳಿಕೆ ಖಂಡಿಸಿ ಹಾಗೂ ಅವರ ಅಮಾನತಿಗೆ ಆಗ್ರಹಿಸಿ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಭಾನುವಾರ ಪಟ್ಟಣದ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಮುಂದಾದಾಗ ಹೈಡ್ರಾಮಾವೇ ನಡೆಯಿತು. ಅಮಾನತಿಗೆ ಹಿರಿಯ ಪೊಲೀಸ್ ಅಧಿಕಾರಿಗಳು ಒಪ್ಪದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ನಾಯಕರು, ಅಹೋರಾತ್ರಿ ಧರಣಿ ನಡೆಸಲು ಮುಂದಾದಾಗ ಪೊಲೀಸರು ಅವರನ್ನು ವಶಕ್ಕೆ ಪಡೆದು ಬಿಡುಗಡೆ ಮಾಡಿದರು.
ಬಿಜೆಪಿ ಮುಖಂಡರ ಪ್ರತಿಭಟನೆ
ಬೆಳಗ್ಗೆ 11 ಗಂಟೆ ಸುಮಾರಿಗೆ ಟಿ.ನರಸೀಪುರಕ್ಕೆ ಆಗಮಿಸಿದ ಆರ್.ಅಶೋಕ್, ಮಾಜಿ ಸಂಸದ ಪ್ರತಾಪ್ ಸಿಂಹ, ಸಂಸದ ಯದುವೀರ್ ಒಡೆಯರ್ ಸೇರಿದಂತೆ ಹಲವು ಬಿಜೆಪಿ ಮುಖಂಡರು ಪ್ರತಿಭಟನೆ ಆರಂಭಿಸಿದರು. ಪಟ್ಟಣದ ಕಾಲೇಜು ವೃತ್ತದಿಂದ ಆರಂಭವಾದ ಮೆರವಣಿಗೆ ಕಬಿನಿ ಅತಿಥಿ ಗೃಹದವರೆಗೆ ಸಾಗಿತು. ಈ ವೇಳೆ, ಸಿಪಿಐ ಧನಂಜಯ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡು ಕೆಲ ದಲಿತ ಸಂಘಟನೆಗಳ ಮುಖಂಡರು ಸಿಪಿಐ ಪರ ಹಾಗೂ ಪ್ರತಾಪ್ ಸಿಂಹ ವಿರುದ್ಧ ಘೋಷಣೆ ಕೂಗಿದರು. ಪ್ರತಿಯಾಗಿ ಬಿಜೆಪಿ ಮುಖಂಡರು ಪ್ರತಾಪ್ ಸಿಂಹ ಪರ ಘೋಷಣೆ ಕೂಗಿದರು. ಸ್ಥಿತಿ ಬಿಗಡಾಯಿಸುವ ಸಾಧ್ಯತೆ ಕಂಡು ಬಂದ ಕಾರಣ ಪೊಲೀಸರು ಸಿಪಿಐ ಪರ ಘೋಷಣೆ ಕೂಗುತ್ತಿದ್ದವರನ್ನು ಸ್ಥಳದಿಂದ ಕಳುಹಿಸಿದರು.
ಈ ವೇಳೆ, ಬಿಜೆಪಿ ಮುಖಂಡರು ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ನಡುವೆ ಸಿಪಿಐ ಅಮಾನತು ಬೇಡಿಕೆ ವಿಚಾರವಾಗಿ ಸಂಧಾನ ಸಭೆ ನಡೆಯಿತು. ಆದರೆ, ಸಿಪಿಐ ವಿರುದ್ಧ ಅಮಾನತು ಕ್ರಮಕ್ಕೆ ಹಿರಿಯ ಅಧಿಕಾರಿಗಳು ಒಪ್ಪಲಿಲ್ಲ.
ಇದರಿಂದ ಆಕ್ರೋಶಗೊಂಡ ಬಿಜೆಪಿ ನಾಯಕರು, ‘ಪೊಲೀಸ್ ಇಲಾಖೆ ಸಿಪಿಐ ಪರವಾಗಿ ನಿಂತಿದೆ. ಅಮಾನತಿಗೆ ಒಪ್ಪುತ್ತಿಲ್ಲ. ಇದು ತಾಲಿಬಾನ್ ಸರ್ಕಾರ’ ಎಂದು ಆಕ್ರೋಶ ವ್ಯಕ್ತಪಡಿಸಿ, ಗಣೇಶ ಮೂರ್ತಿ ಹೊತ್ತು ಡಾ.ಬಿ.ಆರ್.ಅಂಬೇಡ್ಕರ್ ಭವನದಿಂದ ಮೆರವಣಿಗೆ ಹೊರಡಲು ಮುಂದಾದರು. ಅಹೋರಾತ್ರಿ ಧರಣಿ ನಡೆಸುವುದಾಗಿ ಘೋಷಿಸಿದರು. ಈ ವೇಳೆ, ಪೊಲೀಸರು ಮಧ್ಯಪ್ರವೇಶಿಸಿ ಮುಖಂಡರನ್ನು ವಶಕ್ಕೆ ಪಡೆದು ಪೊಲೀಸ್ ವಾಹನದಲ್ಲಿ ನಂಜನಗೂಡು ರಸ್ತೆಯ ಕಡೆಗೆ ಕರೆದೊಯ್ದು, ಬಳಿಕ, ಬಿಡುಗಡೆ ಮಾಡಿದರು.
ಏನಿದು ವಿವಾದ?
- ಟಿ.ನರಸೀಪುರದಲ್ಲಿ ಮಸೀದಿ ಮುಂದೆ ಗಣೇಶನ ಮೆರವಣಿಗೆಗೆ ಆಕ್ಷೇಪಿಸಿದ್ದ ಸಿಪಿಐ ದಯಾನಂದ್
- ‘ಅಲ್ಲಿ ಮೆರವಣಿಗೆ ಮಾಡಿದರೆ ಗ್ರಹಚಾರ ಬಿಡಿಸುವೆ’ ಎಂದಿದ್ದ ಸಿಪಿಐ ಸಸ್ಪೆಂಡ್‌ಗೆ ಬಿಜೆಪಿಗರ ಪಟ್ಟು
- ಸಸ್ಪೆಂಡ್‌ಗೆ ಎಸ್ಪಿ ನಕಾರ. ಅಹೋರಾತ್ರಿ ಧರಣಿಗೆ ಮುಂದಾದ ವಿಪಕ್ಷ ನಾಯಕ ಅಶೋಕ್, ಇತರರು
- ಅಶೋಕ್ ಜೊತೆಗೆ ಯದುವೀರ್, ಪ್ರತಾಪ್ ಸಿಂಹ ಸೇರಿ ಅನೇಕ ನಾಯಕರು ವಶಕ್ಕೆ, ಬಿಡುಗಡೆ

