ಪ್ರಮುಖವಾಗಿರುವ ಸಬ್ರಿಜಿಸ್ಟಾರ್ ಕಚೇರಿಯಂತೂ ಪಟ್ಟಣದಲ್ಲಿ ಜನತೆಯ ಜೀವ ತೆಗೆಯುವ ಕೇಂದ್ರ
ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ಪಟ್ಟಣದಲ್ಲಿ ಮಿನಿ ವಿಧಾನಸೌಧ ನಿರ್ಮಾಣಗೊಂಡು ಕಾರ್ಯನಿರ್ವಹಿಸಲು ಪ್ರಾರಂಭವಾಗಿ ದಶಕಗಳು ಕಳೆಯುತ್ತಾ ಬಂದರೂ ಹಲವಾರು ಸರ್ಕಾರಿ ಕಚೇರಿಗಳು ಇನ್ನೂ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವುದು ಇಲಾಖೆ ಅಧಿಕಾರಿಗಳ ಸೋಗಲಾಡಿತನ ಹಾಗೂ ಸರ್ಕಾರದ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ.ಅದರಲ್ಲೂ ಪ್ರಮುಖವಾಗಿರುವ ಸಬ್ರಿಜಿಸ್ಟಾರ್ ಕಚೇರಿಯಂತೂ ಪಟ್ಟಣದಲ್ಲಿ ಜನತೆಯ ಜೀವ ತೆಗೆಯುವ ಕೇಂದ್ರವಾಗಿದ್ದು ಮಹಿಳೆಯರು, ಮಕ್ಕಳು, ವೃದ್ದರು ಹಾಗೂ ವಿಕಲಚೇತನರು ಸಬ್ರಿಜಿಸ್ಟಾರ್ ಕಚೇರಿಗೆ ಬರಲು ಭಯಪಡುವ ಪರಿಸ್ಥಿತಿ ಎದುರಾಗಿದೆ.
ಪಟ್ಟಣದ ಹಾಸನ-ಮೈಸೂರು ರಾಷ್ಟ್ರೀಯಹೆದ್ದಾರಿಯ ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಕಛೇರಿಯು ಎರಡನೇ ಮಹಡಿಯಲ್ಲಿ ಇರುವುದಲ್ಲದೆ ಇಲ್ಲಿಗೆ ಬರುವ ಸಾರ್ವಜನಿಕರಿಗೆ ಶೌಚಾಲಯ, ಕುಡಿಯುವನೀರು, ರ್ಯಾಂ ಪ್, ವಾಹನನಿಲ್ದಾಣ ಸೇರಿದಂತೆ ಬಂದಜನತೆ ವಿಶ್ರಮಿಸಲು ಒಂದಷ್ಟು ಜಾಗವಿಲ್ಲದೆ ಪರದಾಡುವಂತಾಗಿದೆ.ಇರುವ ಒಂದುಕಟ್ಟಡದಲ್ಲಿ ಬ್ಯಾಂಕ್, ಮೆಡಿಕಲ್ ಸೇರಿದಂತೆ ಇನ್ನಿತರ ಅಂಗಡಿಗಳಿದ್ದು ಇಲ್ಲಿಗೆ ಬರುವ ಎಲ್ಲಾ ಸಾರ್ವಜನಿಕರು ರಾಷ್ಟ್ರೀಯಹೆದ್ದಾರಿಯಲ್ಲೆ ವಾಹನ ನಿಲುಗಡೆ ಮಾಡುವುದರಿಂದ ಸುಗಮಸಂಚಾರಕ್ಕೆ ಅಡಚಣೆಯಾಗಿದ್ದು ಪ್ರತಿದಿನ ಅಪಘಾತವಾಗುತ್ತಿದ್ದು ಒಂದಲ್ಲ ಒಂದು ರೀತಿಯ ಕಲಹಕ್ಕೆ ಕಾರಣವಾಗಿದೆ.
ವೃದ್ದರು, ವಿಕಲಚೇತನರು ಕಚೇರಿಗೆ ಬಂದರೆ ಮೇಲೆ ಹತ್ತಲು ರ್ಯಾಂ ಪ್ ಇಲ್ಲದ ಕಾರಣ ಭಾರಿ ವಾಹನಗಳ ನಡುವೆ ನುಸುಳಿ ಬೇರೊಬ್ಬರ ಸಹಾಯದಿಂದ ಕಚೇರಿಗೆ ಬರುವಂತಾಗಿದೆ. ದಾಹ ಎಂದು ಬಂದರೆ ಒಂದು ಗ್ಲಾಸ್ ನೀರು ಸಹ ಇಲ್ಲದ ಇಲ್ಲಿ, ಶೌಚಾಲಯವಂತೂ ಮೊದಲೆ ಇಲ್ಲದ ಕಾರಣ ಇಲ್ಲಿಗೆ ಬರುವ ಎಲ್ಲ ಸಾರ್ವಜನಿಕರು ಎದುರಗಡೆ ಇರುವ ತಾಲೂಕು ಆಸ್ಪತ್ರೆ ಆವರಣವನ್ನು ಬಯಲು ಶೌಚಾಲಯವನ್ನಾಗಿಸಿಕೊಂಡಿದ್ದು, ವಾಹನಗಳು ಇಲ್ಲೆ ಟಿಕಾಣಿ ಹೂಡುತ್ತವೆ.ಮಿನಿ ವಿಧಾನಸೌಧದಲ್ಲಿ ಕಟ್ಟಡಗಳು ಖಾಲಿ ಇದ್ದರೂ ಹಾಗೂ ಪಟ್ಟಣದಲ್ಲಿ ಹತ್ತು ಹಲವಾರು ಸರಕಾರಿ ವಸತಿಗೃಹಗಳು ಖಾಲಿ ಇದ್ದರೂ ಸಹ ಸಬ್ ರಿಜಿಸ್ಟಾರ್ ಕಚೇರಿ ಸ್ಥಳಾಂತರಿಸದೆ ಯಾವುದೆ ಮೂಲಭೂತ ಸೌಲಭ್ಯವಿಲ್ಲದ ಕಟ್ಟಡಕ್ಕೆ ಪ್ರತಿ ತಿಂಗಳು 33 ಸಾವಿರ ಬಾಡಿಗೆ ಪಾವತಿಸಿ ಕಚೇರಿ ನಡೆಯುತ್ತಿರುವುದಾದರೂ ಏಕೆ ಎಂಬುದು ಯಕ್ಷಪ್ರಶ್ನೆಯಾಗಿದೆ.
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಜನತೆ ಈ ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡು ಸಬ್ರಿಜಿಸ್ಟಾರ್ ಕಚೇರಿಯನ್ನು ಮೂಲಸೌಲಭ್ಯವಿರುವ ಸರಕಾರಿಕಟ್ಟಡಕ್ಕೆ ಸ್ಥಳಾಂತರಿಸಿ ಜನತೆಗೆ ಆಗುತ್ತಿರುವ ಕಿರಿಕಿರಿಯನ್ನು ತಪ್ಪಿಸುವಂತೆ ಒತ್ತಾಯಿಸಿದ್ಧಾರೆ.