ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಧಿಕ್ಕಾರ ಕೂಗಿದ ರೈತರು, ಕೇಂದ್ರ ಸರ್ಕಾರ ಸಕ್ಕರೆಗೆ ಎಂಎಸ್ ಪಿ ನಿಗದಿ ಮಾಡಲೇಬೇಕು,

ಕನ್ನಡಪ್ರಭ ವಾರ್ತೆ ಮೈಸೂರು

ಕೇಂದ್ರ ಸರ್ಕಾರ ಸಕ್ಕರೆಗೆ ಎಂಎಸ್ ಪಿ ನಿಗದಿ ಮಾಡಲೇಬೇಕು ಹಾಗೂ ರಾಜ್ಯ ಸರ್ಕಾರ ಕಬ್ಬಿಗೆ ಹೆಚ್ಚುವರಿ ಎಫ್‌ಆರ್‌ ಪಿ ನೀಡಲೇಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದವರು ನಗರದ ಗನ್‌ ಹೌಸ್‌ ವೃತ್ತದ ಬಳಿ ಶನಿವಾರ ರಸ್ತೆತಡೆದು ಪ್ರತಿಭಟಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಧಿಕ್ಕಾರ ಕೂಗಿದ ರೈತರು, ಕೇಂದ್ರ ಸರ್ಕಾರ ಸಕ್ಕರೆಗೆ ಎಂಎಸ್ ಪಿ ನಿಗದಿ ಮಾಡಲೇಬೇಕು, ರಾಜ್ಯ ಸರ್ಕಾರ ಕಬ್ಬಿಗೆ ಎಫ್‌ಆರ್‌ ಪಿ ನೀಡಲೇಬೇಕು ಎಂದು ಘೋಷಣೆ ಕೂಗುತ್ತಾ ಮೈಸೂರು- ಊಟಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ದೇಶದಲ್ಲಿ 6 ಕೋಟಿಗೂ ಹೆಚ್ಚು ಕಬ್ಬು ಬೆಳೆಗಾರರು ದೇಶದ ಹಾಗೂ ರಾಜ್ಯದ ಅರ್ಥವ್ಯವಸ್ಥೆಗೆ ಸಿಂಹಪಾಲು ಕೊಡುಗೆ ನೀಡುತ್ತಿದ್ದಾರೆ. ರಾಜ್ಯ ಸರ್ಕಾರಕ್ಕೆ ಕಬ್ಬು ಬೆಳೆಗಾರರಿಂದ ವರ್ಷಕ್ಕೆ ಸುಮಾರು 50 ಸಾವಿರ ಕೋಟಿಗೂ ಹೆಚ್ಚು ಆದಾಯ ದೊರೆಯುತ್ತಿದೆ. ಹೀಗಿದ್ದರೂ ಸರ್ಕಾರಗಳು ರೈತರ ಸಮಸ್ಯೆ ಪರಿಹರಿಸಲು ವಿಫಲವಾಗಿವೆ ಎಂದು ಕಿಡಿಕಾರಿದರು.

ತಮಿಳುನಾಡು ಪ್ರತಿ ಟನ್ ಕಬ್ಬಿಗೆ ಹೆಚ್ಚುವರಿಯಾಗಿ 700 ಪ್ರೋತ್ಸಾಹಧನ ನೀಡುತ್ತಿದೆ. ಗುಜರಾತ್ ಪ್ರತಿ ಟನ್ ಕಬ್ಬಿಗೆ 800 ಹೆಚ್ಚುವರಿ ನೀಡುತ್ತಿದೆ. ಉತ್ತರಪ್ರದೇಶ 650 ನೀಡುತ್ತಿದೆ. ನಮ್ಮ ರಾಜ್ಯದಲ್ಲೂ ಪ್ರಸಕ್ತ ಸಾಲಿಗೆ ಪ್ರತಿ ಟನ್ ಕಬ್ಬಿಗೆ 1000 ರೂ. ಹೆಚ್ಚುವರಿ ಎಫ್‌ಆರ್‌ ಪಿ ನೀಡಲು ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಜೊತೆಗೆ ಚರ್ಚಿಸಿದ ಮುಖ್ಯಮಂತ್ರಿಗಳು, 2 ದಿನಗಳಲ್ಲಿ ರಾಜ್ಯ ಸಲಹಾ ಬೆಲೆ ಘೋಷಿಸುವುದಾಗಿ ಸಮಯ ಪಡೆದು, ಈಗ ತೀರ್ಮಾನ ಪ್ರಕಟಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪರಸ್ಪರ ಲವ್ ಲೆಟರ್‌ ಗಳನ್ನು ಬರೆದುಕೊಳ್ಳುತ್ತಾ ರೈತರ ಜೀವನದ ಜತೆಗೆ ಚೆಲ್ಲಾಟವಾಡುತ್ತಿದ್ದಾರೆ. ಅಲ್ಲದೆ, ಸಕ್ಕರೆ ಕಾರ್ಖಾನೆಗಳಿಂದ ಸಕ್ಕರೆ ಮಾರಾಟವನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ಆದೇಶಿಸಬೇಕು ಎಂದು ಅವರು ಆಗ್ರಹಿಸಿದರು.

ರೈತರ ಬೇಡಿಕೆಗಳು

ಸಕ್ಕರೆಯ ಕನಿಷ್ಠ ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ಪ್ರಸಕ್ತ ಸಾಲಿಗೆ 6000 ನಿಗದಿಪಡಿಸಬೇಕು. ಎಫ್‌ಆರ್‌ ಪಿ ನಿಗದಿಗೆ ಇರುವ ಇಳುವರಿ ಮಾನದಂಡವನ್ನು ಶೇ.9.25 ಇಳುವರಿಗೆ ಆದೇಶಿಸಬೇಕು. ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗುವ ಸಕ್ಕರೆಯ ದರ ಹೆಚ್ಚಿಸಬೇಕು. ಸಕ್ಕರೆ ಕಾರ್ಖಾನೆಗಳಿಂದ ಉತ್ಪಾದನೆಯಾಗುವ ಸಂಪೂರ್ಣ ಎಥನಾಲ್ ಅನ್ನು ಇತರ ರಾಜ್ಯಗಳಂತೆ ಸರ್ಕಾರವೇ ಖರೀದಿ ಮಾಡಬೇಕು. ರೈತರಿಗೂ ಎಥನಾಲ್ ಉತ್ಪಾದನೆಗೆ ಅವಕಾಶ ಕಲ್ಪಿಸಿ ಪ್ರೋತ್ಸಾಹ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಕಟಾವು ಮತ್ತು ಸಾಗಾಣಿಕೆ ವೆಚ್ಚವನ್ನು ಕಾರ್ಖಾನೆ ಮಾಲೀಕರೇ ಭರಿಸಬೇಕು. ಉತ್ತರ ಮತ್ತು ದಕ್ಷಿಣ ಎಂಬ ತಾರತಮ್ಯದ ನಿಯಮ ಕೈಬಿಟ್ಟು, ರಾಜ್ಯಾದ್ಯಂತ ಇಳುವರಿ ಆಧಾರದ ಮೇಲೆ ಬೆಲೆ ನಿಗದಿಪಡಿಸಬೇಕು. ಕಾರ್ಖಾನೆ ಮತ್ತು ರೈತರ ನಡುವೆ ದ್ವಿಪಕ್ಷೀಯ ಒಪ್ಪಂದ ಜಾರಿಯಾಗಬೇಕು. 15 ತಿಂಗಳಾದರೂ ಕಬ್ಬು ಕಟಾವು ಮಾಡದೆ ರೈತರಿಗೆ ಇಳುವರಿ ನಷ್ಟ ಹಾಗೂ ಬ್ಯಾಂಕ್ ಸಾಲ ತೀರಿಸಲು ತೊಂದರೆಯಾದರೆ, ಒಪ್ಪಂದದ ಪ್ರಕಾರ ವಿಳಂಬ ಪಾವತಿಗೆ ಹೆಚ್ಚುವರಿ ಬಡ್ಡಿ ಸೇರಿಸಿ ಹಣ ಪಾವತಿಸಲು ಆದೇಶಿಸಬೇಕು ಎಂದು ಅವರು ಆಗ್ರಹಿಸಿದರು.

ಕಬ್ಬಿನ ಬಾಕಿ ಅಥವಾ ಲಾಭಾಂಶ ಹಂಚಿಕೆಯ ಹಣ ಪಾವತಿಸದ ಕಾರ್ಖಾನೆಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಎಲ್ಲಾ ಸಕ್ಕರೆ ಕಾರ್ಖಾನೆಗಳ ಮುಂದೆ ಸರ್ಕಾರದಿಂದಲೇ ತೂಕದ ಯಂತ್ರ ಅಳವಡಿಸಬೇಕು. ಇಳುವರಿ ಮೋಸ ತಪ್ಪಿಸಲು ಸ್ಥಳೀಯ ತಜ್ಞರ ಸಮಿತಿ ನೇಮಿಸಿ ಕಾರ್ಖಾನೆಗಳ ಮುಂದೆ ಪರೀಕ್ಷಾ ಲ್ಯಾಬ್‌ ಗಳನ್ನು ಸ್ಥಾಪಿಸಬೇಕು. ಹೊಸ ಕಾರ್ಖಾನೆ ಆರಂಭ ಹಾಗೂ ಕಬ್ಬು ಮೀಸಲು ಪ್ರದೇಶದ ನಿಯಮಗಳನ್ನು ರದ್ದುಗೊಳಿಸಬೇಕು. ಕಬ್ಬು ಬೆಳೆಗೂ ಬೆಳೆ ವಿಮೆ ವಿಸ್ತರಿಸಬೇಕು ಎಂದು ಅವರು ಒತ್ತಾಯಿಸಿದರು.

ಮುಖಂಡರಾದ ಕೆರೆಹುಂಡಿ ರಾಜಣ್ಣ, ಪ್ರಕಾಶ್ ಗಾಂಧಿ, ನಾಗರಾಜ್, ಮಲಿಯೂರು ಮಹೇಂದ್ರ, ಮುದ್ದಾಳಿ ಮಧು, ಶಿವಣ್ಣ, ಚಿದಂಬರ, ಅಂಡುವಿನಹಳ್ಳಿ ಜಗದೀಶ್, ಮಹೇಶ್, ದೇವಿರಮ್ಮನಹಳ್ಳಿ ಪ್ರಭು, ಸುಜ್ಜಲೂರು ಜಯಸ್ವಾಮಿ, ಎಚ್. ಗುಂಡ್ಲು ಜಗದೀಶ್, ಊರ್ದಳ್ಳಿ ರಾಮಣ್ಣ, ಬಸವರಾಜಪ್ಪ, ಗುರುಪುರ ಚಂದ್ರಪ್ಪ, ಪುಟ್ಟ ಮಲ್ಲೇಗೌಡ ಮೊದಲಾದವರು ಇದ್ದರು.