ಎಂಜಿನಿಯರಿಂಗ್ ಶಿಕ್ಷಣವು ಸಂಕೀರ್ಣ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯ
ಕನ್ನಡಪ್ರಭ ವಾರ್ತೆ ಮೈಸೂರು
ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆಯ ಬೆಳವಣಿಗೆಯಲ್ಲಿ ಎಂಜಿನಿಯರ್ ಗಳ ಪಾತ್ರ ದೊಡ್ಡದಿದೆ ಎಂದು ಬೆಂಗಳೂರಿನ ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆಯ ಮುಖ್ಯಸ್ಥ ಡಾ.ಬಿ.ಎಸ್. ದಯಾಸಾಗರ್ ತಿಳಿಸಿದರು.ನಗರದ ಎನ್ಐಇ ವಜ್ರ ಮಹೋತ್ಸವ ಕ್ರೀಡಾ ಸಂಕೀರ್ಣದಲ್ಲಿ ಶನಿವಾರ ನಡೆದ 16ನೇ ಪದವೀಧರರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಎಂಜಿನಿಯರಿಂಗ್ ಶಿಕ್ಷಣವು ಸಂಕೀರ್ಣ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯವನ್ನು ನಮ್ಮಲ್ಲಿ ಬೆಳೆಸುತ್ತದೆ ಎಂದರು.
ಇತರೆ ಪದವೀಧರರಿಗೆ ಹೋಲಿಸಿದರೆ ಎಂಜಿನಿಯರ್ ಗಳು ವಿವಿಧ ಜ್ಞಾನವನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುವ ಗುಣ ಹೊಂದಿರುತ್ತಾರೆ. ವೈದ್ಯಕೀಯ ಸಂಶೋಧನೆಗಳಲ್ಲಿ ಸಾಧಿಸಿರುವ ಪ್ರಗತಿಗೆ ಎಂಜಿನಿಯರಿಂಗ್ ಕ್ಷೇತ್ರದ ಉಪಕರಣಗಳು ಮತ್ತು ತಾಂತ್ರಿಕ ಆವಿಷ್ಕಾರಗಳ ಕೊಡುಗೆ ಮಹತ್ವದ್ದಾಗಿದೆ ಎಂದು ಅವರು ಹೇಳಿದರು.ಎಂಜಿನಿಯರ್ ಗಳು ಕೇವಲ ತಾಂತ್ರಿಕ ಕ್ಷೇತ್ರಕ್ಕೆ ಸೀಮಿತವಾಗದೆ, ಮೂಲ ವಿಜ್ಞಾನ, ಸಮಾಜ ವಿಜ್ಞಾನ ಸೇರಿದಂತೆ ವಿವಿಧ ಜ್ಞಾನವನ್ನು ಬೆಳೆಸಿಕೊಳ್ಳಬೇಕು. ಗಣಿತಜ್ಞನಂತೆ ಆಲೋಚಿಸಿ, ಭೌತವಿಜ್ಞಾನಿಯಂತೆ ತರ್ಕಿಸಿ, ಎಂಜಿನಿಯರ್ ನಂತೆ ಕಾರ್ಯರೂಪಕ್ಕೆ ತರುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಮೂಲ ವಿಜ್ಞಾನಗಳ ಅಧ್ಯಯನವನ್ನು ಎಂದಿಗೂ ನಿರ್ಲಕ್ಷಿಸಬಾರದು. ಜನಪ್ರಿಯ ಹಾಗೂ ತಾಂತ್ರಿಕ ಪುಸ್ತಕಗಳ ಜೊತೆಗೆ ವಿಜ್ಞಾನಿಗಳು, ಎಂಜಿನಿಯರ್ ಗಳು, ಉದ್ಯಮಿಗಳು, ಶಿಕ್ಷಣ ತಜ್ಞರು ಮತ್ತು ಸಾಧಕರ ಜೀವನಚರಿತ್ರೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಕೃತಕ ಬುದ್ಧಿಮತ್ತೆ (ಎಐ) ಹಲವು ಕೆಲಸಗಳನ್ನು ಸುಲಭಗೊಳಿಸಿದರೂ ಆಳವಾದ ಅಧ್ಯಯನ, ಸ್ವತಂತ್ರ ಚಿಂತನೆ ಮತ್ತು ವಿವೇಚನೆಗೆ ಮನುಷ್ಯನ ಸಹಜ ಬುದ್ಧಿಶಕ್ತಿಯೇ ಮುಖ್ಯವಾಗುತ್ತದೆ. ಯಾವುದೇ ವಿಷಯವನ್ನು ಆಳವಾಗಿ ಅರಿಯುವ ಹಂಬಲ ಹೊಂದಿರುವವರಿಗೆ ಎಐ ಒಂದು ಹಂತದವರೆಗೆ ಮಾತ್ರ ನೆರವಾಗಬಲ್ಲದು. ಅದರಾಚೆಗೆ ಸಹಜ ಬುದ್ಧಿಮತ್ತೆ ಮತ್ತು ವಿಶ್ಲೇಷಣಾ ಸಾಮರ್ಥ್ಯವೇ ನಿರ್ಣಾಯಕವಾಗುತ್ತದೆ ಎಂದರು.ಜೀವನದಲ್ಲಿ ವೈಯಕ್ತಿಕ ಸಾಧನೆ ಮತ್ತು ವೃತ್ತಿಪರ ಯಶಸ್ಸು ಗಳಿಸುವುದಷ್ಟೇ ಮುಖ್ಯವಲ್ಲ. ಸಮಾಜದ ಬಗ್ಗೆ ಕಾಳಜಿ, ಮಾನವೀಯತೆ ಮತ್ತು ಸೇವಾ ಮನೋಭಾವವನ್ನೂ ಬೆಳೆಸಿಕೊಳ್ಳಬೇಕು. ಅಹಂಕಾರ, ದರ್ಪ ಮತ್ತು ಒರಟುತನವನ್ನು ಬದಿಗಿಟ್ಟು ಉತ್ತಮ ನಾಗರಿಕರಾಗಿ ರೂಪುಗೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಎನ್ಐಇ ಆಡಳಿತ ಮಂಡಳಿ ಅಧ್ಯಕ್ಷ ಡಾ.ಎಂ.ಎಸ್. ರಂಗನಾಥ್ ಮಾತನಾಡಿ, ಇಂದಿನ ಪದವೀಧರರು ತಮ್ಮ ಕಲಿಕೆಯನ್ನು ಕಾಲೇಜು ಶಿಕ್ಷಣಕ್ಕೆ ಮಾತ್ರ ಸೀಮಿತಗೊಳಿಸಿಕೊಳ್ಳಬಾರದು. ಜ್ಞಾನ ಮತ್ತು ತಂತ್ರಜ್ಞಾನ ನಿರಂತರವಾಗಿ ಬದಲಾಗುತ್ತಿರುವ ಇಂದಿನ ಸಂದರ್ಭದಲ್ಲಿ ಹೊಸ ವಿಷಯ ಕಲಿಯುವ ಹಂಬಲವನ್ನು ಸದಾ ಜೀವಂತವಾಗಿಟ್ಟುಕೊಳ್ಳಬೇಕು. ಪ್ರತಿದಿನವೂ ಹೊಸ ಜ್ಞಾನವನ್ನು ಸಂಪಾದಿಸುವ ಮೂಲಕ ತಮ್ಮ ವೃತ್ತಿಪರ ಕೌಶಲವನ್ನು ಉನ್ನತೀಕರಿಸಿಕೊಳ್ಳಬೇಕು ಎಂದು ತಿಳಿಸಿದರು.ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎಸ್. ನಾಗೇಂದ್ರ ಪರಾಶಾರ್, ಉಪ ಪ್ರಾಂಶುಪಾಲ ಡಾ.ಎಂ.ವಿ. ಲಿಖಿತ್ ಕುಮಾರ್, ಡೀನ್ ಡಾ.ಎಚ್. ಪ್ರದೀಪ, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಎಸ್. ಕುಳಲ್ ವೈಮೋಳಿ, ಸಂಸ್ಥೆಯ ಖಜಾಂಚಿ ಸತ್ಯಕುಮಾರ್, ಟ್ರಸ್ಟಿ ನಾಗರಾಜ್ ಮೊದಲಾದವರು ಇದ್ದರು.