ಕನ್ನಡಪ್ರಭ ವಾರ್ತೆ, ತುಮಕೂರು
ಶಿರಾ ತಾಲೂಕಿನ ಹುಣಸೆಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕುಡಿಯುವ ನೀರು ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯಗಳ ಕೊರತೆ ಬಗ್ಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರ ಗಮನಕ್ಕೆ ಗ್ರಾಮಸ್ಥರು ತಂದರು. ಗ್ರಾಮಸ್ಥರೊಂದಿಗೆ ಸಂವಾದ ನಡೆಸಿ ಸಮಸ್ಯೆಯ ಮೂಲವನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ, ಗ್ರಾಮವು ಇನ್ನೂ ಕಂದಾಯ ಗ್ರಾಮವಾಗಿ ಘೋಷಣೆಯಾಗದಿರುವುದೇ ಅಭಿವೃದ್ಧಿ ಕಾರ್ಯಗಳು ಹಾಗೂ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಲು ಪ್ರಮುಖ ಕಾರಣವೆಂದು ತಿಳಿಸಿದರು.
ಈ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ: ಜಿ. ಪರಮೇಶ್ವರ ಅವರ ಮಾರ್ಗದರ್ಶನದಲ್ಲಿ ಜಿಲ್ಲೆಯಲ್ಲಿ ಕಂದಾಯ ಗ್ರಾಮಗಳ ರಚನೆಗೆ ವಿಶೇಷ ಆಂದೋಲನ ಕೈಗೊಳ್ಳಲಾಗಿದೆ ಎಂದರು.ಈ ಅಭಿಯಾನದಡಿ ಇದುವರೆಗೆ 22 ಸಾವಿರ ಕ್ಕೂ ಹೆಚ್ಚು ಕುಟುಂಬಗಳಿಗೆ ಹಕ್ಕುಪತ್ರಗಳನ್ನು ವಿತರಿಸುವ ಮೂಲಕ ಅವರಿಗೆ ಕಾನೂನುಬದ್ಧ ಹಕ್ಕು ಮತ್ತು ಭದ್ರತೆ ಕಲ್ಪಿಸಲಾಗಿದ್ದು, ಅಲೆಮಾರಿ ಕುಟುಂಬಗಳಿಗೆ ಹಾಗೂ ಹಕ್ಕಿಪಿಕ್ಕಿ ಕಾಲೋನಿಯ ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸಲಾಗಿದೆ ಎಂದರು.
ತುಮಕೂರು ನಗರದ ಎಳ್ಳಾರ ಬಂಡೆ, ಅರಳೀಮರದ ಪಾಳ್ಯ, ಎಸ್.ಎನ್. ಪಾಳ್ಯ, ಭಾರತಿ ನಗರ, ಬಿದಿರುಮೆಳೆ ತೋಟ, ಎನ್.ಆರ್. ಕಾಲೋನಿ ಹಾಗೂ ಎಸ್.ಎಲ್.ಎನ್. ನಗರ ಬಡಾವಣೆಗಳಲ್ಲಿರುವ ಸರ್ಕಾರಿ ಜಮೀನಿನಲ್ಲಿ ಮನೆಯನ್ನು ನಿರ್ಮಿಸಿಕೊಂಡು ವಾಸಿಸುತ್ತಿರುವ 349 ಕುಟುಂಬಗಳನ್ನು ಹಕ್ಕುಪತ್ರ ವಿತರಣೆಯ ವ್ಯಾಪ್ತಿಗೆ ತರಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ತುಮಕೂರು ಮಹಾನಗರ ಪಾಲಿಕೆ ಹಾಗೂ ಭೂ ದಾಖಲೆಗಳ ಇಲಾಖೆಯ ಸಹಯೋಗದಲ್ಲಿ ವಿವಿಧ ಕೊಳೆಗೇರಿ ಪ್ರದೇಶಗಳಲ್ಲಿ ಸರ್ವೆ ಕಾರ್ಯ ನಡೆಯುತ್ತಿದೆ. ಇದರ ಅಂಗವಾಗಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಎನ್.ಆರ್. ಕಾಲೋನಿಗೆ ಭೇಟಿ ನೀಡಿ, ಸರ್ವೆ ಕಾರ್ಯದ ಪ್ರಗತಿಯನ್ನು ಪರಿಶೀಲಿಸುವುದರ ಜೊತೆಗೆ ಫಲಾನುಭವಿಗಳಿಂದ ಅವರ ಸಮಸ್ಯೆಗಳು ಹಾಗೂ ಅಗತ್ಯ ಮಾಹಿತಿಯನ್ನು ಪಡೆದುಕೊಂಡರು.