ಹಲವು ವರ್ಷಗಳಿಂದ ಬಗರ್‌ಹುಕುಂ ಅಡಿಯಲ್ಲಿ ಜಮೀನು ಸಾಗುವಳಿ ಮಾಡಿಕೊಂಡು ಜೀವನ ನಡೆಸುತ್ತಿರುವ ರೈತರನ್ನು ಒಕ್ಕಲೆಬ್ಬಿಸುವುದು ಅಥವಾ ಅವರ ಭೂಹಕ್ಕಿಗೆ ಧಕ್ಕೆ ತರುವುದು ಯಾವುದೇ ಕಾರಣಕ್ಕೂ ಸೂಕ್ತವಲ. ಸರ್ಕಾರವು ರೈತರ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವ ಸಂದರ್ಭದಲ್ಲಿ ರೈತರಿಗೆ ಇರುವ ಹಕ್ಕುಗಳು, ಪರಿಹಾರದ ನಿಯಮಗಳು ಹಾಗೂ ಆಕ್ಷೇಪಣೆ ಸಲ್ಲಿಸುವ ವಿಧಾನಗಳ ಬಗ್ಗೆ ಮುಂಚಿತವಾಗಿ ತಿಳಿದುಕೊಳ್ಳಬೇಕು.

ಕನ್ನಡಪ್ರಭವಾರ್ತೆ ತಿಪಟೂರು

ರೈತರು ಬಗರ್‌ಹುಕುಂ ಅಡಿಯಲ್ಲಿ ಸಾಗುವಳಿ ಮಾಡುತ್ತಿದ್ದ ಜಮೀನುಗಳನ್ನು ಅರಣ್ಯ ಹಾಗೂ ಸರ್ಕಾರಕ್ಕೆ ಸೇರಿರುವ ಜಮೀನುಗಳು ಎಂದು ತೀರ್ಮಾನಿಸಿಕೊಂಡು ವಶಕ್ಕೆ ಪಡೆದಿರುವ ಕ್ರಮ ವಿರೋಧಿಸಿ ತಾಲೂಕಿನ ಹೊನ್ನವಳ್ಳಿ ಹೋಬಳಿ ರುದ್ರಾಪುರ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ಸಾಮೂಹಿಕ ನಾಯಕತ್ವ), ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ವತಿಯಿಂದ ರೈತ ದ್ರೋಹಿ ಸರ್ಕಾರದ ವಿರುದ್ಧ ಪ್ರತಿರೋಧದ ಸಮಾವೇಶ ಹಾಗೂ ರೈತರಿಗೆ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು.ನಿವೃತ್ತ ಜಿಲ್ಲಾಧಿಕಾರಿ ನಿಂಗಪ್ಪ ಮಾತನಾಡಿ, ರೈತನ ಭೂಮಿ ಕೇವಲ ಮಣ್ಣಿನ ತುಂಡಲ್ಲ. ಅದು ರೈತನ ಕುಟುಂಬದ ಬದುಕಿನ ಆಧಾರವಾಗಿದ್ದು, ಆತನ ಸ್ವಾಭಿಮಾನದ ಸಂಕೇತವೂ ಆಗಿದೆ. ಆದ್ದರಿಂದ ಭೂಮಿಗೆ ಸಂಬಂಧಿಸಿದ ಪ್ರತಿಯೊಂದು ದಾಖಲೆಯನ್ನೂ ಸುರಕ್ಷಿತವಾಗಿ ಇಟ್ಟುಕೊಂಡು, ಕಾಲಕಾಲಕ್ಕೆ ಪರಿಶೀಲಿಸುವ ಅಭ್ಯಾಸವನ್ನು ರೈತರು ಬೆಳೆಸಿಕೊಳ್ಳಬೇಕು. ರೈತನಾಗಿರುವುದನ್ನು ಕೀಳರಿಮೆಯಿಂದ ನೋಡುವ ಮನೋಭಾವ ಬಿಟ್ಟು, ನಾನು ರೈತ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಬೇಕು. ರೈತರ ಹಕ್ಕು ಹಾಗೂ ಭೂಮಿ ರಕ್ಷಣೆಗೆ ಸರ್ಕಾರದ ಯೋಜನೆಗಳ ಜೊತೆಗೆ ಕಾನೂನು ಅರಿವೂ ಅಗತ್ಯವಾಗಿದೆ ಎಂದು ಹೇಳಿದರು. ಕರ್ನಾಟಕ ರಾಜ್ಯ ರೈತ ಸಂಘದ ಸಾಮೂಹಿಕ ನಾಯಕತ್ವದ ಮುಖಂಡ ಕೆ.ಟಿ.ಗಂಗಾಧರ್ ಮಾತನಾಡಿ, ಹಲವು ವರ್ಷಗಳಿಂದ ಬಗರ್‌ಹುಕುಂ ಅಡಿಯಲ್ಲಿ ಜಮೀನು ಸಾಗುವಳಿ ಮಾಡಿಕೊಂಡು ಜೀವನ ನಡೆಸುತ್ತಿರುವ ರೈತರನ್ನು ಒಕ್ಕಲೆಬ್ಬಿಸುವುದು ಅಥವಾ ಅವರ ಭೂಹಕ್ಕಿಗೆ ಧಕ್ಕೆ ತರುವುದು ಯಾವುದೇ ಕಾರಣಕ್ಕೂ ಸೂಕ್ತವಲ. ಸರ್ಕಾರವು ರೈತರ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವ ಸಂದರ್ಭದಲ್ಲಿ ರೈತರಿಗೆ ಇರುವ ಹಕ್ಕುಗಳು, ಪರಿಹಾರದ ನಿಯಮಗಳು ಹಾಗೂ ಆಕ್ಷೇಪಣೆ ಸಲ್ಲಿಸುವ ವಿಧಾನಗಳ ಬಗ್ಗೆ ಮುಂಚಿತವಾಗಿ ತಿಳಿದುಕೊಳ್ಳಬೇಕು. ಕೇವಲ ಅಧಿಕಾರಿಗಳ ಮಾತನ್ನು ಅವಲಂಬಿಸದೆ, ದಾಖಲೆಗಳನ್ನು ಪರಿಶೀಲಿಸಿ ಕಾನೂನುಬದ್ಧವಾಗಿ ಮುಂದಿನ ಕ್ರಮ ಕೈಗೊಳ್ಳುವ ಸಾಮರ್ಥ್ಯವನ್ನು ರೈತರು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಅಧ್ಯಕ್ಷತೆಯನ್ನು ಸಿದ್ದಬಸವಯ್ಯ ವಹಿಸಿದ್ದರು. ಎಐಕೆಕೆಎಮ್‌ಎಸ್ ಸಂಘಟನೆ ರಾಜ್ಯಾಧ್ಯಕ್ಷ ಎಂ. ಶಶಿಧರ್, ಉಪಾಧ್ಯಕ್ಷ ಶಿವಪ್ರಕಾಶ್, ಸಹ ಕಾರ್ಯದರ್ಶಿ ಪ್ರಸನ್ನ ಕುಮಾರ್ ಸೇರಿ ಹಲವು ರೈತ ಮುಖಂಡರು ಮಾತನಾಡಿದರು.

ಸಮಾವೇಶದಲ್ಲಿ ೫೦೦ಕ್ಕೂ ಹೆಚ್ಚು ರೈತ ಕುಟುಂಬಗಳು ಭಾಗವಹಿಸಿ ಭೂಹಕ್ಕುಗಳ ರಕ್ಷಣೆಗೆ ಹೋರಾಟ ಮುಂದುವರಿಸುವ ಸಂಕಲ್ಪ ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಮುಖಂಡರಾದ ಜಯನಂದಯ್ಯ, ದೇವರಾಜು ತಿಮ್ಲಾಪುರ, ಸಿದ್ಧಪ್ಪ ಬಳವನೇರಲು, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಚನ್ನಬಸವಣ್ಣ, ಪ್ರಧಾನ ಕಾರ್ಯದರ್ಶಿ ಯಶವಂತ್, ತೀಮ್ಮೇಗೌಡ ಗಡಬನಹಳ್ಳಿ, ಕೆಆರ್‌ಎಸ್ ಪಕ್ಷದ ಮಲ್ಲಿಕಾರ್ಜುನ್‌ ಭಟ್ಟರಹಳ್ಳಿ, ರುದ್ರೇಶ ಹೊಸದುರ್ಗ, ಲೋಕೇಶ್‌ ಭೈರನಾಯಕನಹಳ್ಳಿ, ಅಲ್ಲಾಬಕ್ಷ, ರಾಜಮ್ಮ, ರೈತರಾದ ಮಲ್ಲಪ್ಪ, ಕುಮಾರ್, ದಶರಥ, ಓಂಕಾರಮೂರ್ತಿ, ಬಸವನಾಯ್ಕ ಸೇರಿದಂತೆ ಮಲ್ಲಿದೇವರಹಳ್ಳಿ, ಬಳವನೇರಲು, ಮುದ್ದೇನಹಳ್ಳಿ, ರಟ್ಟೇನಹಳ್ಳಿ, ಮುದ್ದೇನಹಳ್ಳಿ, ಸೊರಗೊಂಡನಹಳ್ಳಿ ಗ್ರಾಮದ ರೈತರು ಉಪಸ್ಥಿತರಿದ್ದರು.