ಸಕಲೇಶಪುರದ ವಾಣಿಜ್ಯ ಮಳಿಗೆಗಳ ಹರಾಜಿನಲ್ಲಿ ಭಾರಿ ಷಡ್ಯಂತ್ರ ಆರೋಪ

KannadaprabhaNewsNetwork | Published : Oct 9, 2024 1:30 AM

ಸಾರಾಂಶ

ಸಕಲೇಶಪುರ ತಾಲೂಕಿನ ಆನೇಮಹಲ್ ಗ್ರಾಮ ಪಂಚಾಯತ್ ಆಡಳಿತ ಬುಧವಾರ ನಡೆಸಲು ಉದ್ದೇಶಿಸಿರುವ ಹರಾಜಿನಲ್ಲಿ ಭಾರಿ ಷಡ್ಯಂತ್ರ ಅಡಗಿದೆ ಎಂಬ ಆರೋಪ ದಟ್ಟವಾಗಿ ಕೇಳಿ ಬರುತ್ತಿದೆ.

ಕಾರ್‌ ಶೆಡ್‌ಗಳನ್ನೇ ವಾಣಿಜ್ಯ ಮಳಿಗೆಗಳೆಂದು ಹರಾಜಿಗೆ ಮುಂದಾದ ಆನೆಮಹಲ್‌ ಗ್ರಾಮ ಪಂಚಾಯಿತಿ

ಕನ್ನಡಪ್ರಭ ವಾರ್ತೆ ಸಕಲೇಶಪುರ

ತಾಲೂಕಿನ ಆನೇಮಹಲ್ ಗ್ರಾಮ ಪಂಚಾಯತ್ ಆಡಳಿತ ಬುಧವಾರ ನಡೆಸಲು ಉದ್ದೇಶಿಸಿರುವ ಹರಾಜಿನಲ್ಲಿ ಭಾರಿ ಷಡ್ಯಂತ್ರ ಅಡಗಿದೆ ಎಂಬ ಆರೋಪ ದಟ್ಟವಾಗಿ ಕೇಳಿ ಬರುತ್ತಿದೆ.

ಆನೇಮಹಲ್ ಗ್ರಾ.ಪಂ ವ್ಯಾಪ್ತಿಯ ದೋಣಿಗಾಲ್ ಗ್ರಾಮದಲ್ಲಿ ಈ ಹಿಂದೆ ಗ್ರಾ.ಪಂ ಆಡಳಿತ ಮಂಜ್ರಾಬಾದ್ ಕೋಟೆ ವೀಕ್ಷಣೆಗೆ ಬರುವ ಪ್ರವಾಸಿಗರ ವಾಹನ ನಿಲುಗಡೆಗಾಗಿ ನಿರ್ಮಿಸಿದ್ದ ೧೭ ಶೆಡ್‌ಗಳಲ್ಲಿ ಇತ್ತೀಚೆ ಕೆಲವರು ವ್ಯಾಪಾರ ವಹಿವಾಟು ನಡೆಸುತ್ತಿದ್ದರು. ಸದ್ಯ ಈ ವಾಹನ ನಿಲುಗಡೆ ಶೆಡ್‌ಗಳನ್ನೇ ಗ್ರಾಮ ಪಂಚಾಯತ್‌ ಆಡಳಿತ ಅಂಗಡಿ ಮಳಿಗೆಗಳೆಂದು ಹರಾಜು ನಡೆಸಲು ಮುಂದಾಗಿದ್ದು ಇದರಲ್ಲಿ ಕೆಲವು ಗ್ರಾ.ಪಂ ಸದಸ್ಯರ ಸ್ವಹಿತಾಸಕ್ತಿ ಅಡಗಿದೆ ಎನ್ನಲಾಗುತ್ತಿದೆ.ನಿತ್ಯ ಮಂಜ್ರಾಬಾದ್ ಕೋಟೆಗೆ ಸಾವಿರಾರು ಜನರು ಭೇಟಿ ನೀಡುವುದರಿಂದ ಇಲ್ಲಿನ ಅಂಗಡಿ ಮಳಿಗೆಗೆಳು ನಿತ್ಯ ಲಕ್ಷಾಂತರ ವಹಿವಾಟು ನಡೆಸುತ್ತಿವೆ. ಇಂತಹ ಪ್ರದೇಶದಲ್ಲಿ ವ್ಯವಸ್ಥಿತವಾಗಿ ಅಂಗಡಿ ಮಳಿಗೆಗಳನ್ನು ನಿರ್ಮಿಸಿದರೆ ಗ್ರಾ.ಪಂ ಆಡಳಿತಕ್ಕೆ ಹೆಚ್ಚಿನ ಆದಾಯ ಬರಲಿದೆ. ಆದರೆ, ಶೆಡ್‌ಗಳನ್ನೆ ಬಾಡಿಗೆ ನೀಡುವ ಉದ್ದೇಶದಲ್ಲಿ ಭಾರಿ ಭ್ರಷ್ಟಾಚಾರ ಅಡಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.ಟೆಂಡರ್‌ನಲ್ಲಿ ಕೆಲವು ಅಂಶಗಳು:

ಕೇವಲ ಆನೇಮಹಲ್ ಗ್ರಾ.ಪಂ ವ್ಯಾಪ್ತಿಯ ಜನರು ಮಾತ್ರ ಟೆಂಡರ್‌ನಲ್ಲಿ ಭಾಗವಹಿಸಬೇಕು ಎಂಬ ಅಂಶ ಹಲವು ಅನುಮಾನಗಳಿಗೆ ಎಡೆಮಾಡಿದ್ದು, ೧೭ ಮಳಿಗೆಗಳಿಗೆ ಕೇವಲ ೬೪ ಸಾವಿರ ಇಡಿಗಂಟು ವಿಧಿಸಿರುವುದರ ಹಿಂದೆ ಕೆಲವು ಗ್ರಾ.ಪಂ ಸದಸ್ಯರ ಕೈವಾಡವಿದೆ ಎಂಬ ಆರೋಪ ಕೇಳಿ ಬರುತ್ತಿದೆ. ರಾಷ್ಟ್ರೀಯ ಹೆದ್ದಾರಿ ೭೫ರ ವ್ಯಾಪ್ತಿಯಲ್ಲಿ ಬರುವ ಶೆಡ್‌ಗಳನ್ನು ಹರಾಜು ಹಾಕುವ ಮುನ್ನ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಒಪ್ಪಿಗೆ ಪಡೆಯಬೇಕು ಎಂಬ ನಿಯಮ ಸಹ ಸ್ವಷ್ಟವಾಗಿ ಉಲ್ಲಂಘನೆಯಾಗಿದ್ದರೆ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಟೆಂಡರ್‌ಗೂ ಮುನ್ನ ದರ ಪಟ್ಟಿ ನಿಗಧಿಪಡಿಸಬೇಕಿದೆ. ಆದರೆ, ಇಂತಹ ಯಾವುದೆ ನಿಯಮ ಸಹ ಪಾಲನೆಯಾಗಿಲ್ಲ. ಆದ್ದರಿಂದ ಯಾವ ಮಾನದಂಡದಲ್ಲಿ ಬಾಡಿಗೆ ನಿಗಧಿಪಡಿಸಲಾಗುತ್ತಿದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಸಾರ್ವಜನಿಕ ಟೆಂಡರ್‌ ಕರೆಯುವ ಮುನ್ನ ಮಳಿಗೆಗಳನ್ನು ವ್ಯವಸ್ಥಿತವಾಗಿ ನಿರ್ಮಿಸಿ ಕುಡಿಯುವ ನೀರು ಸೇರಿದಂತ ಸಕಲ ಮೂಲಭೂತ ಸೌಕರ್ಯ ಒದಗಿಸಬೇಕಿದೆ. ಆದರೆ, ಯಾವುದೇ ಮೂಲಭೂತ ಸೌಕರ್ಯವನ್ನು ಒದಗಿಸದೆ ಮಳಿಗೆಗಳನ್ನೆ ನಿರ್ಮಿಸದೆ ವಾಹನಗಳಿಗಾಗಿ ನಿರ್ಮಿಸಲಾದ ಶೆಡ್‌ಗಳನ್ನೆ ಅಂಗಡಿ ಮಳಿಗೆಗಳೆಂದು ಹರಾಜು ಮಾಡುವ ಮೂಲಕ ವಂಚಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಗ್ರಾ.ಪಂ ಆಡಳಿತ ಯಾವುದೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಮುನ್ನ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದು ನಿಯಮ. ಆದರೆ, ಈ ವಿಚಾರ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳ ಗಮನಕ್ಕೆ ಬಾರದಿರುವುದು ಗ್ರಾ.ಪಂ ಸದಸ್ಯರ ಷಡ್ಯಂತ್ರದಲ್ಲಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಯು ಭಾಗಿಯಾಗಿದ್ದಾರಯೇ ಎಂಬ ಅನುಮಾನ ಹುಟ್ಟುಹಾಕುವಂತೆ ಮಾಡಿದೆ.

ಗ್ರಾ.ಪಂ ವ್ಯಾಪ್ತಿಯಲ್ಲಿ ಅಂಗಡಿ ಮಳಿಗೆಗಳ ಟೆಂಡರ್‌ ಕರೆಯುವ ವೇಳೆ ಕೇವಲ ಸ್ಥಳೀಯರು ಭಾಗವಹಿಸಬೇಕು ಎಂಬ ನಿಯಮ ಪಂಚಾಯತ್ ಅಧಿನಿಯಮದಲ್ಲಿ ಇಲ್ಲವಾದರೂ ಸ್ಥಳೀಯರು ಮಾತ್ರವೆ ಈ ಟೆಂಡರ್‌ನಲ್ಲಿ ಭಾಗವಹಿಸಬೇಕು ಎಂಬ ನಿಯಮ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಈ ಆರೋಪಕ್ಕೆ ಪ್ರತಿಕ್ರಿಯಿಸಿರುವ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್, ದೋಣಿಗಾಲ್ ಗ್ರಾಮದಲ್ಲಿ ಕಾನೂನು ಬಾಹಿರವಾಗಿ ವಾಹನ ನಿಲುಗಡೆ ಪ್ರದೇಶದಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದು ಇದರಿಂದ ಗ್ರಾ.ಪಂ ಆಡಳಿತಕ್ಕೆ ಯಾವುದೆ ಆದಾಯ ಬರುತ್ತಿರಲಿಲ್ಲ. ಆದ್ದರಿಂದ ಗ್ರಾ.ಪಂ ಆಡಳಿತಕ್ಕೆ ಆದಾಯ ಸಂಗ್ರಹಿಸುವ ಉದ್ದೇಶದಿಂದ ಟೆಂಡರ್ ಕರೆಯಲಾಗಿದೆ. ಸ್ಥಳೀಯರು ಮಾತ್ರವೆ ಟೆಂಡರ್‌ನಲ್ಲಿ ಭಾಗವಹಿಸುವಂತೆ ನಿಯಮವನ್ನು ಗ್ರಾಪಂ ಸಾಮಾನ್ಯ ಸಭೆಯಲ್ಲಿ ಮಾಡಿಕೊಳ್ಳಲಾಗಿದೆ. ಅಲ್ಲದೆ ಶೆಡ್‌ಗಳಾಗಿರುವುದರಿಂದ ದರಪಟ್ಟಿಯನ್ನು ನಾವೇ ನಿಗದಿಪಡಿಸಿಕೊಂಡಿದ್ದೇವೆ. ಒಟ್ಟಾರೆ ಪ್ರವಾಸಿ ಸ್ಥಳವನ್ನು ಸ್ವಚ್ಛವಾಗಿಕೊಂಡು ಆದಾಯ ಸಂಗ್ರಹಿಸುವ ಗುರಿಯನ್ನು ನಾವು ಹೊಂದಿದ್ದು ಯಾವುದೇ ಷಡ್ಯಂತ್ರವಿಲ್ಲ ಎಂದು ಸ್ವಷ್ಟಪಡಿಸಿದ್ದಾರೆ.

ಆದರೆ ಈ ಆಡಳಿತಾಧಿಕಾರಿಯ ಮಾತನ್ನು ಅಲ್ಲಗೆಳೆಯುತ್ತಿರುವ ಸಾರ್ವಜನಿಕರು, ಕೆಲವು ಗ್ರಾ.ಪಂ ಸದಸ್ಯರು ಟೆಂಡರ್‌ ಮೂಲಕ ಅಂಗಡಿ ಮಳಿಗೆಗಳನ್ನ ಪಡೆದು ಒಳ ಬಾಡಿಗೆ ನೀಡಲು ಉದ್ದೇಶಿಸಿದ್ದು ಇವರ ತಾಳಕ್ಕೆ ಅಭಿವೃದ್ಧಿ ಅಧಿಕಾರಿ ಹೆಜ್ಜೆ ಹಾಕುತ್ತಿದ್ದಾರೆಂಬ ಆರೋಪ ಕೇಳಿ ಬರುತ್ತಿದೆ. ಒಟ್ಟಾರೆ ಇಂದು ನಡೆಯಲಿರುವ ಟೆಂಡರ್ ಬಗ್ಗೆ ಹಿರಿಯ ಅಧಿಕಾರಿಗಳು ಗಮನಹರಿಸುವುದು ಉತ್ತಮ.

Share this article