ಸದುಪಯೋಗಪಡಿಸಿಕೊಳ್ಳಲು ನ್ಯಾಯಾಧೀಶರ ಕರೆ
ಕನ್ನಡಪ್ರಭ ವಾರ್ತೆ ಭಟ್ಕಳಇಲ್ಲಿನ ನ್ಯಾಯಾಲಯಗಳ ಸಂಕೀರ್ಣದಲ್ಲಿ ಡಿ. ೧೩ರಂದು ಬೃಹತ್ ಲೋಕ ಅದಾಲತ್ ಏರ್ಪಡಿಸಲಾಗಿದ್ದು, ಕಕ್ಷಿದಾರರು ಇದರ ಸದುಪಯೊಗ ಪಡೆಯುವಂತೆ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಹಾಗೂ ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಶ ಕಾಂತ ಕುರಣಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಲೋಕ ಅದಾಲತ್‌ನಲ್ಲಿ ರಾಜೀಯಾಗಲಿರುವ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಅವಕಾಶವಿದೆ. ಕಕ್ಷಿದಾರರು, ವಕೀಲರ ಸಹಕಾರದಿಂದ ಕಾನೂನು ಸೇವಾ ಸಮಿತಿಯ ಮೂಲಕ ಲೋಕ ಅದಾಲತ್‌ನಲ್ಲಿ ಪ್ರಕರಣ ಇಟ್ಟು ರಾಜೀ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಅವಕಾಶ ಇದೆ. ಡಿ. ೧೩ರಂದು ನಡೆಯಲಿರುವ ಬೃಹತ್ ಲೋಕ ಅದಾಲತ್‌ನಲ್ಲಿ ಇತ್ಯರ್ಥಪಡಿಸಲು ಒಟ್ಟೂ 2116 ಪ್ರಕರಣಗಳನ್ನು ಗುರುತಿಸಲಾಗಿದೆ ಎಂದು ಹೇಳಿದರು.ಪ್ರಸ್ತುತ ದಾಖಲಾಗಿರುವ ಪ್ರಕರಣಗಳಲ್ಲಿ ಎರಡೂ ಪಕ್ಷಗಾರರ ಒಪ್ಪಿಗೆಯ ಮೇರೆಗೆ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗುವುದು. ಇಲ್ಲಿ ಪ್ರಕರಣ ಒಮ್ಮೆ ರಾಜೀಯಾಗಿ ಇತ್ಯರ್ಥವಾದರೆ ಅವುಗಳಿಗೆ ಅಪೀಲು ಕೂಡಾ ಇರುವುದಿಲ್ಲ ಮತ್ತು ನ್ಯಾಯಾಲಯಕ್ಕೆ ಕಟ್ಟಿದ ಕೋರ್ಟ್ ಫೀ ಕೂಡಾ ಪರತ್ ದೊರೆಯುವುದರಿಂದ ಕಕ್ಷಿದಾರರಿಗೆ ಹೊರೆಯಾಗುವುದಿಲ್ಲ ಎಂದರು.
ಐಪಿಸಿ, ರಾಜೀಯಾಗತಕ್ಕ ಕ್ರಿಮಿನಲ್ ಪ್ರಕರಣ, ಚೆಕ್ ಬೌನ್ಸ್ ಪ್ರಕರಣ, ಬ್ಯಾಂಕ್ ಸಾಲ ವಸೂಲಾತಿ, ಮೋಟಾರು ವಾಹನ ಕಾಯಿದೆ ಉಲ್ಲಂಘನೆ ಪ್ರಕರಣ, ವಾಂಟಣಿ ಪ್ರಕರಣ, ಜಮೀನು ಸ್ವಾಧೀನ ಪ್ರಕರಣ, ಎಕ್ಸಿಕ್ಯೂಶನ್ ಪ್ರಕರಣ, ಮೋಟಾರು ವಾಹನ ಅಪಘಾತ ಪ್ರಕರಣ ಇನ್ನೂ ಅನೇಕ ಪ್ರಕರಣಗಳನ್ನು ಇತ್ಯರ್ಥಪಡಿಸಬಹುದು. ಲೋಕ ಅದಾಲತ್ ಬಗ್ಗೆ ಪಕ್ಷಗಾರರು ನ್ಯಾಯಾಲಯದ ಆವರಣದಲ್ಲಿರುವ ಕಾನೂನು ಸೇವಾ ಸಮಿತಿ ಸಂಪರ್ಕಿಸಬಹುದು ಎಂದರು.ಟ್ರಾಫಿಕ್ ಕಾಯ್ದೆ ಉಲ್ಲಂಘಿಸಿದ ಪ್ರಕರಣದಲ್ಲಿ ದಂಡ ವಿಧಿಸಿದರೆ, ಇದನ್ನು ಶೇ. 50ರಷ್ಟು ಭರಣ ಮಾಡಿ ಪ್ರಕರಣ ಮುಕ್ತಾಯಗೊಳಿಸಲು ಡಿ. 12ರ ವರೆಗೆ ಕಾಲವಕಾಶ ಇದೆ. ಇದಕ್ಕೆ ನ. 21ರಿಂದ ಡಿ. 12ರ ವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಕಾನೂನು ಸೇವಾ ಸಮಿತಿಯ ಕಾರ್ಯದರ್ಶಿ ಹಾಗೂ ಪ್ರಧಾನ ಸಿವಿಲ್ ನ್ಯಾಯಾಧೀಶೆ ದೀಪಾ ಅರಳಗುಂಡಿ, ಹೆಚ್ಚುವರಿ ನ್ಯಾಯಾಧೀಶೆ ಧನವತಿ ಉಪಸ್ಥಿತರಿದ್ದರು.