ಮುಂಡರಗಿ: ಭಾರತದ ಸಂಸ್ಕೃತಿ, ಸಂಸ್ಕಾರ ತೋರಿಸುವ ಇಲ್ಲಿನ ಉಡುಗೆ, ತೊಡುಗೆಗಳಿಗೆ ವಿದೇಶಗಳಲ್ಲಿ ಹೆಚ್ಚಿನ ಗೌರವ ಇದೆ. ಅಲ್ಲಿನ ಜನ ನಮ್ಮನ್ನು ನೋಡಿ ಕೈಮುಗಿದು ಮಾತನಾಡಿಸುತ್ತಾರೆ ಎಂದು ಕ.ರಾ.ಬೆಲ್ಲದ ಮಹಾವಿದ್ಯಾಲಯದ ಮೇಲ್ವಿಚಾರಣಾ ಕಮೀಟಿ ಉಪ ಕಾರ್ಯಾಧ್ಯಕ್ಷ ವೀರನಗೌಡ ಗುಡದಪ್ಪನವರ ಹೇಳಿದರು. ಅವರು ಶುಕ್ರವಾರ ಪಟ್ಟಣದ ಕ.ರಾ. ಬೆಲ್ಲದ ಕಾಲೇಜಿನ ಸಭಾಭವನದಲ್ಲಿ ಜ.ಅ.ವಿದ್ಯಾ ಸಮಿತಿ ಶತಮಾನೋತ್ಸವ ಸಮಿತಿ, ಕ.ರಾ. ಬೆಲ್ಲದ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಸಂಯುಕ್ತಾ ಶ್ರಯದಲ್ಲಿ ಜರುಗಿದ ಜನಪದ ಮೇಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅತಿಥಿಯಾಗಿ ಪಾಲ್ಗೊಂಡಿದ್ದ ಗವಿಸಿದ್ದಯ್ಯ ಹಳ್ಳಿಕೇರಿಮಠ ಮಾತನಾಡಿ, ಹಿಂದಿನ ಜನಪದಕ್ಕೂ ಇಂದಿನ ಜನಪದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಹಿಂದಿನ ಜನಪದದಲ್ಲಿ ಜೀವನಾನುಭವದ ಪಾಠಗಳಿದ್ದವು. ಇಂದಿನ ಜನಪದದಲ್ಲಿ ಅವುಗಳನ್ನು ದೀಪ ಹಚ್ಚಿ ಹುಡುಕು. ಇದೀಗ ನಾವು ನಮ್ಮ ಮೂಲ ಜನಪದ ಉಳಿಸಿ ಬೆಳೆಸಬೇಕಾಗಿದೆ. ನಮ್ಮ ಮೂಲ ಜನಪದ ಸಾಹಿತ್ಯವನ್ನು ನಾವು ಎಂದಿಗೂ ಮರೆಯಬಾರದು ಎಂದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಡಾ.ಡಿ.ಸಿ. ಮಠ, ಕಾಲೇಜು ಮೇಲ್ವಿಚಾರಣಾ ಸಮಿತಿ ಕಾರ್ಯಾಧ್ಯಕ್ಷ ಪ್ರೊ. ಆರ್.ಎಲ್. ಪೊಲೀಸ್ ಪಾಟೀಲ, ಡಾ. ಸಂತೋಷ ಹಿರೇಮಠ, ಡಾ. ಸಚಿನ್ ಉಪ್ಪಾರ, ಡಾ. ಎ.ಎಸ್.ಕಲ್ಯಾಣಿ, ಎಲ್. ಹನಮಂತಪ್ಪ, ಕಾವೇರಿ ಹೊನ್ನತ್ತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಡಾ.ಆರ್.ಎಚ್. ಜಂಗನವಾರಿ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಪ್ರಿಯಾಂಕಾ ಬಾಗೇವಾಡಿ, ಯಲ್ಲಮ್ಮ ಹಿರೇನರ್ತಿ ನಿರೂಪಿಸಿದರು.ಡಾ. ಸಚಿನ್ ಉಪ್ಪಾರ ವಂದಿಸಿದರು.ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಕಾಲೇಜಿನ ಪ್ರಾಚಾರ್ಯರು, ಪ್ರಾಧ್ಯಾಪಕರು ವಿವಿಧ ದೇಶಿ ಜನಪದ ಉಡುಗೆ ತೊಡುಗೆಗಳನ್ನು ತೊಟ್ಟು ಅನ್ನದಾನೀಶ್ವರ ಮಠದಿಂದ ಗಾಂಧಿ ವೃತ್ತ, ಬಜಾರ, ಬೃಂದಾವನ ವೃತ್ತದ ಮೂಲಕ ಕಾಲೇಜು ತಲುಪಿದರು.