-ಕರ್ನಾಟಕ ಛಾಯಾಗ್ರಾಹಕರ ಕಲ್ಯಾಣ ಮಂಡಳಿ ರಚನೆಗೆ ದೇವನಗರಿ ಮನು, ಮಾಲತೇಶ ಅರಸ್ ಒತ್ತಾಯ
ಕನ್ನಡಪ್ರಭ ವಾರ್ತೆ ದಾವಣಗೆರೆ
ಛಾಯಾಗ್ರಹಣ ಮತ್ತು ವಿಡಿಯೋಗ್ರಫಿ ಕ್ಷೇತ್ರದ ವೃತ್ತಿಪರರನ್ನು ಒಂದೆಡೆ ಸೇರಿಸಿ, ಅಂತಹವರ ಸಾಧನೆ, ಸೇವೆ ಗೌರವಿಸಲು ಕರ್ನಾಟಕ ಫೋಟೋಗ್ರಾಫರ್ಸ್ ಅಂಡ್ ವಿಡಿಯೋಗ್ರಾಫರ್ಸ್ ಅಸೋಸಿಯೇಷನ್ ಹಾಗೂ ದಾವಣಗೆರೆ ತಾಲೂಕು ಫೋಟೋಗ್ರಾಫರ್ಸ್ ಅಂಡ್ ವಿಡಿಯೋಗ್ರಾಫರ್ಸ್ ಅಸೋಸಿಯೇಷನ್‌ನಿಂದ 187ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಹಾಗೂ 14ನೇ ವಾರ್ಷಿಕೋತ್ಸವದ ಸಮಾರಂಭ, ಛಾಯಾಗ್ರಾಹಕರ ಬೃಹತ್ 2ನೇ ರಾಜ್ಯ ಸಮಾವೇಶ ಭಾನುವಾರ ನಗರದಲ್ಲಿ ಆಯೋಜಿಸಲಾಗಿದೆ.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆ ರಾಜ್ಯಾಧ್ಯಕ್ಷ ಮನು ಎಂ.ದೇವನಗರಿ, ಅಂದು ಬೆಳಿಗ್ಗೆ 10.30ಕ್ಕೆ ಕನ್ನಡ ಕುವೆಂಪು ಭವನದಲ್ಲಿ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮಿಗಳು, ವಿರಕ್ತ ಮಠದ ಶ್ರೀಬಸವಪ್ರಭು ಸ್ವಾಮೀಜಿ ಸಾನಿಧ್ಯದಲ್ಲಿ ಸಚಿವ ಕೆ.ಎನ್.ಬಸಂವತಪ್ಪ ಸಮಾರಂಭ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.
ಛಾಯಾಗ್ರಹಣ ಮತ್ತು ವಿಡಿಯೋಗ್ರಫಿ ಕ್ಷೇತ್ರದ ಸಾಧಕರು, ಕನ್ನಡ ಪರ ಹೋರಾಟ, ಸಮಾಜ ಸೇವೆ ಮಾಡಿದ ಗಣ್ಯರಿಗೆ ಕರ್ನಾಟಕ ಸಮಾಜ ಸೇವಾ ರತ್ನ ಎಂಬ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ 120 ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಕನ್ನಡ ರತ್ನ ಎಂಬ ಬಿರುದು ನೀಡಲಾಗುವುದು. ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.80ರಷ್ಟು ಅಂಕ ಪಡೆದು ಉತ್ತೀರ್ಣರಾದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಚಿತ್ರಕಲೆ ಸ್ಪರ್ಧೆ ವಿಜೇತ ಮಕ್ಕಳಿಗೆ ಬಹುಮಾನ, ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದರು.
ಛಾಯಾಗ್ರಾಹಕರು ಮತ್ತು ವಿಡಿಯೋಗ್ರಾಫರ್ ಎದುರಿಸುತ್ತಿರುವ ವೃತ್ತಿಪರ ಸಮಸ್ಯೆ, ತಂತ್ರಜ್ಞಾನದ ವೇಗದ ಬದಲಾವಣೆ, ಡಿಜಿಟಲ್ ಮಾಧ್ಯಮದ ಪ್ರಭಾವ, ಹೊಸ ಕ್ಯಾಮೆರಾ ತಂತ್ರಜ್ಞಾನ, ಉದ್ಯೋಗಾವಕಾಶ ಹಾಗೂ ಸಂಘಟಿತವಾಗಿ ವೃತ್ತಿಪರರ ಹಕ್ಕನ್ನು ರಕ್ಷಿಸುವ ಕುರಿತು ಚರ್ಚೆ ನಡೆಯಲಿದೆ, ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಕ್ಯಾಮೆರಾಗಳಿಂದ ಹಿಡಿದು ಅತ್ಯಾಧುನಿಕ ವೃತ್ತಿಪರ ಕ್ಯಾಮೆರಾಗಳವರೆಗೆ ತಂತ್ರಜ್ಞಾನ ವೇಗವಾಗಿ ಬದಲಾಗುತ್ತಿದೆ. ವೃತ್ತಿಪರ ಛಾಯಾಗ್ರಾಹಕರು ತಮ್ಮ ಕೌಶಲ್ಯವನ್ನು ನಿರಂತಕ ನವೀಕರಿಸಿಕೊಳ್ಳುವ ಅಗತ್ಯವೂ ಹೆಚ್ಚಾಗಿದೆ ಎಂದು ಅವರು ತಿಳಿಸಿದರು.
ಸಂಘದ ಉಪಾಧ್ಯಕ್ಷ ಡಿ.ರಮೇಶ, ಪ್ರಧಾನ ಕಾರ್ಯದರ್ಶಿ ಕೆ.ದೇವೇಂದ್ರಪ್ಪ, ಖಜಾಂಜಿ ಸುಮಾ ಕಲ್ಲೇಶ, ಗೌರವ ಸಲಹೆಗಾರರಾದ ಸಿದ್ದೇಶ್ ಕೋಟಿಹಾಳ, ಹನುಮಂತು, ಎಚ್.ವೈ. ತಿಮ್ಮೇನಹಳ್ಳಿ, ರಾಮು ಇತರರು ಇದ್ದರು.
ಫೋಟೊ:22ಕೆಡಿವಿಜಿ2