ಉದಯ ಹೋಟೆಲ್ ಕಟ್ಟಡ ಹಿಂದಕ್ಕೆ ತಳ್ಳುವ ಕಾಮಗಾರಿ ಚಾಲನೆ । 18ಲಕ್ಷಕ್ಕೆ ಪಾರಮೌಂಟ್ ಕಂಪನಿಯೊಂದಿಗೆ ಒಪ್ಪಂದ । ತಮಿಳುನಾಡಿನ ಹೈಡ್ರಾಲಿಕ್ ಜಾಕ್ ಬಳಕೆ
ರಮೇಶ್ ಬಿದರಕೆರೆ
ಕನ್ನಡಪ್ರಭ ವಾರ್ತೆ ಹಿರಿಯೂರುಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಮೂರು ಅಂತಸ್ತಿನ ಕಟ್ಟಡವನ್ನು ಸುಮಾರು 20 ಅಡಿಗಳಷ್ಟು ಹಿಂದಕ್ಕೆ ತಳ್ಳುವ ಕಾಮಗಾರಿ ಸೋಮವಾರ ನಗರದಲ್ಲಿ ಆರಂಭಗೊಂಡಿದೆ.
ಪಟ್ಟಣದ ಅವಧಾನಿ ಬಡಾವಣೆ ಬಳಿಯ ಉದಯ ಹೋಟೆಲ್ ಕಟ್ಟಡವನ್ನು ಹಿಂದಕ್ಕೆ ತಳ್ಳಿ ಯಥಾಸ್ಥಿತಿಯಲ್ಲಿಯೇ ಕೂರಿಸುವ ಕಾಮಗಾರಿಯ ಮೊದಲ ಭಾಗವಾಗಿ ಸೋಮವಾರ ಸುಮಾರು ಎರಡೂವರೆ ಅಡಿಯಷ್ಟು ಹಿಂದಕ್ಕೆ ಜರುಗಿಸಲಾಯಿತು.ನಗರದಲ್ಲಿ ರಸ್ತೆ ಅಗಲೀಕರಣ ಪ್ರಾರಂಭವಾದ ಹಿನ್ನೆಲೆ ರಸ್ತೆ ಆಸುಪಾಸಿನ ಬಹುತೇಕ ಕಟ್ಟಡಗಳ ಮುಂಭಾಗ ತೆರವುಗೊಳಿಸಲಾಗಿದ್ದು ಉದಯ ಹೋಟೆಲ್‌ನ ಕಟ್ಟಡವನ್ನು ಸಹ ಮುಂಭಾಗ ತೆರವು ಮಾಡಲು ಗುರ್ತಿಸಲಾಗಿತ್ತು. ಕಟ್ಟಡದ ಅರ್ಧಭಾಗ ರಸ್ತೆ ವಿಸ್ತರಣೆಗೆ ಹೋಗುವ ಸ್ಥಿತಿಯಲ್ಲಿದ್ದದ್ದರಿಂದ ಕಟ್ಟಡ ಮಾಲೀಕರು ಅವರದೇ ಹಿಂದಿನ ಖಾಲಿ ಜಾಗಕ್ಕೆ ಕಟ್ಟಡ ಜರುಗಿಸಿಕೊಳ್ಳುವ ನಿರ್ಧಾರ ಮಾಡಿದರು. ತಮಿಳುನಾಡಿನ ಹೈಡ್ರಾಲಿಕ್ ಜಾಕ್ ಬಳಸಿ ಕಟ್ಟಡ ತಳ್ಳುವ ಪಾರಮೌಂಟ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡ ಹೋಟೆಲ್ ಕಟ್ಟಡದ ಮಾಲೀಕರು ಸುಮಾರು 20 ಅಡಿಯಷ್ಟು ಕಟ್ಟಡವನ್ನು ಹಿಂದೆ ತಳ್ಳುವ ಕಾಮಗಾರಿಯನ್ನು 18 ಲಕ್ಷ ಹಣಕ್ಕೆ ನೀಡಿದ್ದಾರೆ. ಇದೀಗ 37 ಅಡಿ ಉದ್ದ, 37 ಅಡಿ ಅಗಲದ ಮೂರಂತಸ್ತಿನ ಕಟ್ಟಡವನ್ನು ಸುಮಾರು 400ಕ್ಕೂ ಹೆಚ್ಚು ಹೈಡ್ರಾಲಿಕ್ ಜಾಕ್ ಬಳಸಿಕೊಂಡು ಹಿಂದಕ್ಕೆ ಸ್ಥಳಾಂತರಿಸುವ ಕಾಮಗಾರಿ ಭರದಿಂದ ಸಾಗಿದೆ.
ಕಟ್ಟಡ ಸರಿಸುವ ಕೆಲಸ ಹಿರಿಯೂರು ನಗರಕ್ಕೆ ಹೊಸದೇನು ಅಲ್ಲ. ಈಗಾಗಲೇ ಅಕ್ಷಯ ಪುಡ್ ಪಾರ್ಕ್‌ನ ಕಟ್ಟಡವನ್ನು 100 ಅಡಿ ಹಿಂದೆ ಸರಿಸಲಾಗಿತ್ತು. ಶ್ರೀನಿವಾಸ ಲಾಡ್ಜ್, ವೇದಾವತಿ ನಗರದ ಮಸೀದಿ ಹಾಗೂ ಪುಷ್ಪಾಂಜಲಿ ಚಿತ್ರಮಂದಿರದ ಬಳಿಯ ಬಿಲ್ಡಿಂಗ್‌ಗಳನ್ನು ಈಗಾಗಲೇ ಸ್ಥಳಾಂತರ ಮಾಡಲಾಗಿತ್ತು. ಇದೀಗ ಉದಯ ಹೋಟೆಲ್ ಕಟ್ಟಡವನ್ನು ಪ್ರತಿದಿನ 4 ರಿಂದ 5 ಅಡಿ ತಳ್ಳುವ ಗುರಿ ಇಟ್ಟುಕೊಂಡು ಕೆಲಸ ಆರಂಭಿಸಿದ್ದಾರೆ. ಕಟ್ಟಡ ತಳ್ಳುವ ಮೊದಲು ಕಟ್ಟಡದ ಒಳಭಾಗದಲ್ಲಿರುವ ಮಣ್ಣನ್ನು ಹೊರಗಡೆ ತೆಗೆದು ಹಾಕಲಾಗುತ್ತದೆ. ಬಳಿಕ ಮಧ್ಯ ಭಾಗದಲ್ಲಿರುವ ಪಿಲ್ಲರ್ ಕಂಬಗಳಿಗೆ ಜಾಕ್ ಕೂರಿಸುತ್ತಾರೆ. ನಂತರ ತಳಪಾಯದ ಸುತ್ತಲಿನ ಮಣ್ಣು ತೆಗೆದು ಕಟ್ಟಡಕ್ಕೆ ಇಂತಿಷ್ಟು ದೂರಕ್ಕೆ ಎಂಬಂತೆ ಒಂದೊಂದೇ ಜಾಕ್ ಅಳವಡಿಸಲಾಗುತ್ತದೆ. ಕಟ್ಟಡದ ಕಿಟಕಿ, ಬಾಗಿಲು ಸೇರಿದಂತೆ ಖಾಲಿ ಜಾಗಗಳಿಗೆ ಇಟ್ಟಿಗೆಗಳಿಂದ ಗೋಡೆ ನಿರ್ಮಾಣ ಮಾಡಲಾಗುತ್ತದೆ. ಕಟ್ಟಡ ತಳ್ಳುವ ಜಾಗದಲ್ಲಿ ಹೊಸ ತಳಪಾಯ ಸಿದ್ದಪಡಿಸಿಕೊಳ್ಳುತ್ತಾರೆ. ಕಬ್ಬಿಣದ ಆ್ಯಂಗ್ಲರ್‌ಗಳೊಂದಿಗೆ ಗಾಲಿ ಚಕ್ರದ ಜಾಕ್ ಅಳವಡಿಸಿಕೊಂಡು ಕಟ್ಟಡವನ್ನು ಇಂಚು ಇಂಚಾಗಿ ಸರಿಸುತ್ತಾ ಹೋಗುತ್ತಾರೆ. ಇದು ಕಟ್ಟಡ ತೆರವು ಮಾಡಿಕೊಂಡು ಮತ್ತೆ ಕಟ್ಟಿಸಿಕೊಳ್ಳುವುದಕ್ಕಿಂತ ಕಡಿಮೆ ಖರ್ಚಿನ ಕೆಲಸ ಎನ್ನಲಾಗಿದ್ದು ಸೋಮವಾರ ಉದಯ ಹೋಟೆಲ್ ಕಟ್ಟಡವನ್ನು ಹಿಂದಕ್ಕೆ ಸರಿಸುವುದನ್ನು ನಗರದ ಜನರು ಆಶ್ಚರ್ಯಚಕಿತರಾಗಿ ನೋಡುವ ದೃಶ್ಯ ಸಾಮಾನ್ಯವಾಗಿತ್ತು.ಆಧುನಿಕ ತಂತ್ರಜ್ಞಾನ ಬಳಸಿ ಬಹುಮಹಡಿ ಕಟ್ಟಡ ಸ್ಥಳಾಂತರ
ಪಾರಮೌಂಟ್ ಬಿಲ್ಡಿಂಗ್ ಶಿಫ್ಟ್ ಕಂಪನಿ ಮಾಲೀಕ ಸಿ.ಮೋಹನ್ ರಾಜ್ ಮಾತನಾಡಿ, ಆಧುನಿಕತೆಯ ಯುಗದಲ್ಲಿ ತಂತ್ರಜ್ಞಾನ ಬಳಸಿಕೊಂಡು ಬಹುಮಹಡಿ ಕಟ್ಟಡಗಳನ್ನು ಸಹ ಸ್ಥಳಾಂತರ ಮಾಡಲಾಗುತ್ತಿದೆ. ಈಗಾಗಲೇ ಹಿರಿಯೂರಿನಲ್ಲಿ ಮೂರ್ನಾಲ್ಕು ಕಟ್ಟಡಗಳನ್ನು ಸ್ಥಳಾಂತರ ಮಾಡಿಲಾಗಿದ್ದು, ಇದು 5ನೇ ಕಟ್ಟಡವಾಗಿದೆ. ಈ ಕಟ್ಟಡ ಸ್ಥಳಾಂತರಿಸಲು 3ತಿಂಗಳ ಕಾಲಾವಕಾಶ ತೆಗೆದುಕೊಂಡಿದ್ದು ಇನ್ನೊಂದು ತಿಂಗಳಲ್ಲಿ ಕಾಮಗಾರಿ ಮುಗಿಯಲಿದೆ. ಕಟ್ಟಡ ಸ್ಥಳಾಂತರ ಮಾಡುವುದರಿಂದ ಕಟ್ಟಡಕ್ಕೆ ಯಾವುದೇ ರೀತಿಯ ಹಾನಿಯಾಗುವುದಿಲ್ಲ. ಹೊಸ ಜಾಗಕ್ಕೂ ಸಹ ಕಟ್ಟಡ ಯಥಾವತ್ತಾಗಿ ಬಂದು ಕೂರುತ್ತದೆ. ಎಲ್ಲಾ ರೀತಿಯ ರಕ್ಷಣಾತ್ಮಕ ಸಿದ್ಧತೆಯನ್ನು ಬಳಸಿಕೊಂಡು ಕೆಲಸ ಆರಂಭಿಸಲಾಗುತ್ತದೆ. ತಮಿಳುನಾಡಿನಲ್ಲಿ ಬಹುಗಾತ್ರದ ಕಲ್ಯಾಣ ಮಂಟಪವನ್ನು ಸ್ಥಳಾoತರ ಮಾಡಿ ಸೈ ಎನಿಸಿಕೊಂಡಿದ್ದೇವೆ ಎಂದರು.
ಕಟ್ಟಡ ಮಾಲೀಕರಿಗೆ ಸ್ಥಳದಲ್ಲೇ ಪರವಾನಿಗೆ
ಹಿರಿಯೂರು ನಗರದ ಟಿಬಿ ವೃತ್ತದಿಂದ ತಾಲೂಕು ಕಚೇರಿಯವರೆಗೂ ಮುಖ್ಯ ರಸ್ತೆ ಅಗಲೀಕರಣ ಕಾಮಗಾರಿಯಲ್ಲಿ ರಸ್ತೆಗೆ ಹೆಚ್ಚುವರಿಯಾಗಿ ನಿರ್ಮಿಸಿದ್ದ ಕಟ್ಟಡವನ್ನು ಜಾಕ್ ಮೂಲಕ ಹಿಂದೆ ಸರಿಸಿ ರಸ್ತೆ ಅಗಲೀಕರಣ ಕಾಮಗಾರಿಗೆ ಅನುವು ಮಾಡಿಕೊಟ್ಟ ಕಟ್ಟಡ ಮಾಲೀಕರಿಗೆ ನಗರಸಭೆ ವತಿಯಿಂದ ಕಟ್ಟಡ ಪರವಾನಿಗೆಯನ್ನು ಸ್ಥಳದಲ್ಲೇ ನೀಡಲಾಯಿತು. ಈ ಸಂದರ್ಭದಲ್ಲಿ ಕಟ್ಟಡ ಮಾಲೀಕ ಮಣಿ, ನಗರಸಭೆ ಅಧ್ಯಕ್ಷ ಅಜಯ್ ಕುಮಾರ್, ಪೌರಾಯುಕ್ತ ವಾಸಿಂ,ನಗರಸಭೆ ಸದಸ್ಯ ಎಂ ಡಿ ಸಣ್ಣಪ್ಪ,ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ಸಾದತ್ ಉಲ್ಲಾ ಮುಂತಾದವರು ಉಪಸ್ಥಿತರಿದ್ದರು.