ಕನ್ನಡಪ್ರಭ ವಾರ್ತೆ ಮೈಸೂರು
ಅರಳುವ ಕವಿಗಳು ಮೊದಲು ಕನ್ನಡ ಸಾಹಿತ್ಯ ಲೋಕದ ಪೂರ್ವಜರ ಸಾಹಿತ್ಯ ಕೃತಿಗಳನ್ನು ವಿಸ್ತೃತವಾಗಿ ಓದಬೇಕು. ಜೊತೆಗೆ ಹಿರಿಯ ಸಾಹಿತಿಗಳ ಒಡನಾಟ ಹೊಂದಬೇಕು. ಆಗ ಹೊಸ ಅನುಭವಗಳು ದೊರೆಯುತ್ತವೆ ಎಂದು ಲೇಖಕಿ ಮೀನಾ ಮೈಸೂರು ತಿಳಿಸಿದರು.ನಗರದ ಬೋಗಾದಿಯಲ್ಲಿರುವ ಕ್ರಿಯಾ ಸಂಪನ್ಮೂಲ ಕೇಂದ್ರದಲ್ಲಿ ಕ್ರಿಯಾ ಮೈಸೂರು ಮತ್ತು ಸ್ಪಂದನ ಸಾಂಸ್ಕೃತಿಕ ಪರಿಷತ್ತು ಸಂಯುಕ್ತವಾಗಿ ಆಯೋಜಿಸಿದ್ದ ಮಾಗಿಯ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಪೂರ್ವಜರ ಸಾಹಿತ್ಯ ಓದಿನಿಂದ ಅರಿವನ್ನು ವಿಸ್ತರಿಸಿಕೊಳ್ಳಲು ಸಾಧ್ಯ ಎಂದರು.ಕವಿಗೆ ಜೀವನಾನುಭವ ಮತ್ತು ಮಾಗುವಿಕೆಯ ಅಗತ್ಯವಿದೆ. ಇದು ಧಕ್ಕುವುದು ಓದಿನಿಂದ ಮಾತ್ರ. ನವ ಕವಿಗಳು ಹಿರಿಯ ಕವಿಗಳ ಕೃತಿಗಳ ಓದಿನಿಂದ ಪಡೆದ ತಿಳಿವಳಿಕೆಯಿಂದ ತಮ್ಮ ಕವಿತೆಗಳನ್ನು ಮತ್ತೆ ಮತ್ತೆ ಓದುವ, ತಿದ್ದುವ, ಪರಿಷ್ಕರಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.ಒಂದು ಕಾಲದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಮೇಷ್ಟ್ರುಗಳು, ಸಾಹಿತ್ಯವನ್ನು ಆಳವಾಗಿ ಓದಿಕೊಂಡವರು ಮಾತ್ರ ಸಾಹಿತ್ಯ ಕೃಷಿ ಮಾಡುತ್ತಿದ್ದರು. ಆದರೆ, ಪ್ರಸ್ತುತ ಕಾಲಘಟ್ಟದಲ್ಲಿ ಬೇರೆ ಬೇರೆ ಹಿನ್ನೆಲೆಯಿಂದ ಬಂದಿರುವ ಕವಿಗಳು ಸಹ ಕೃಷಿ ಮಾಡುತ್ತಿದ್ದಾರೆ. ಇದರಿಂದ ಬರೆಯುವವರ ಸಂಖ್ಯೆ ಹೆಚ್ಚಿದೆ ಎಂದರು.ಮಹಾರಾಜ ಕಾಲೇಜು ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ.ಕೆ. ತಿಮ್ಮಯ್ಯ ಮಾತನಾಡಿ, ಕವಿಗಳು ಸಂಶೋಧನಾ ಪ್ರವೃತ್ತಿವುಳ್ಳವರಾಗಿರಬೇಕು, ಸಮಾಜದ ಓರೆಕೋರೆಗಳನ್ನು ತಿದ್ದುವ ಮತ್ತು ಸಮಾಜಕ್ಕೆ ಸ್ಪಂದಿಸುವ ಗುಣ ಹೊಂದಿರಬೇಕು ಎಂದು ತಿಳಿಸಿದರು.ಕ್ರಿಯಾ ಸಂಸ್ಥಾಪಕ ಪ್ರಸನ್ನಕುಮಾರ್ ಕೆರಗೋಡು ಅವರು, ಸಮಕಾಲೀನ ಕಾವ್ಯ ಸೃಷ್ಟಿಯ ಸವಾಲುಗಳು ಮತ್ತು ಕವಿಗಳ ಸಾಮಾಜಿಕ ಹೊಣೆಗಾರಿಕೆ ಕುರಿತು ಮಾತನಾಡಿದರು.ಕ್ರಿಯಾ ಸಂಚಾಲಕರಾದ ಬಿ. ಕುಮಾರ್, ಕೆ. ಲೋಕೇಶ್, ಬಿ. ಪುನಿತ್ ಕುಮಾರ್, ವೆಂಕಟೇಶ್, ಸ್ಪಂದನಾ ಸಾಂಸ್ಕೃತಿಕ ಪರಿಷತ್ತು ಅಧ್ಯಕ್ಷ ಟಿ. ಸತೀಶ್ ಜವರೇಗೌಡ, ಪದಾಧಿಕಾರಿಗಳಾದ ಚಂದ್ರು ಮಂಡ್ಯ, ಬಸಪ್ಪ ಸಾಲುಂಡಿ, ನವೀನ್ ಕುಮಾರ್ ಇದ್ದರು. ಕ್ರಿಯಾ ಪ್ರಧಾನ ಸಂಚಾಲಕರಾದ ಮಂದಾರ ಎಸ್. ಉಡುಪಿ ಸ್ವಾಗತಿಸಿದರು. ಸಂಚಾಲಕಿ ವೈ. ಶಾಲಿನಿ ನಿರೂಪಿಸಿದರು.