ಗದಗ: ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ಅಂಗವಾಗಿ ಬುಧವಾರ ನಗರದಲ್ಲಿ ಆಯೋಜಿಸಿದ್ದ ಬೃಹತ್ 100 ಮೀಟರ್ ಉದ್ದದ ತ್ರಿವರ್ಣ ಧ್ವಜ ಹಿಡಿದು ಸಾಗಿದ ತಿರಂಗಾ ಯಾತ್ರೆಯು ಸಾರ್ವಜನಿಕರಲ್ಲಿ ಹರ್ಷ, ವಿದ್ಯಾರ್ಥಿ, ವಿದ್ಯಾರ್ಥಿನಿಯರಲ್ಲಿ ದೇಶಭಕ್ತಿಯ ಅಭೂತಪೂರ್ವ ವಾತಾವರಣ ನಿರ್ಮಾಣಕ್ಕೆ ಕಾರಣವಾಯಿತು.
ಅದರಲ್ಲಿಯೂ ವ್ಯಕ್ತಿಯೊಬ್ಬರು ತಮ್ಮ ದ್ವಿಚಕ್ರ ವಾಹನದ ತುಂಬಾ ರಾಷ್ಟ್ರಧ್ವಜಗಳನ್ನು ಜೋಡಿಸಿಕೊಂಡು ಯಾತ್ರೆಯಲ್ಲಿ ಸಾಗಿದ್ದು ವಿಶೇಷ ಆಕರ್ಷಣೆಯಾಗಿತ್ತು. ರಸ್ತೆಯ ಎರಡೂ ಬದಿಗಳಲ್ಲಿ, ಮನೆ ಹಾಗೂ ವಾಣಿಜ್ಯ ಮಳಿಗೆಗಳ ಮಹಡಿಗಳ ಮೇಲೆ ನಿಂತಿದ್ದ ಜನರು ಈ ನೂರು ಮೀಟರ್ ಬೃಹತ್ ತಿರಂಗಾ ವೈಭವವನ್ನು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದು ಸಂಭ್ರಮಿಸಿದರು.
ತೋಂಟದಾರ್ಯ ಮಠದ ಮುಂಭಾಗದಲ್ಲಿ ವಂದೇ ಮಾತರಂ ಹಾಗೂ ರಾಷ್ಟ್ರಗೀತೆ ಹಾಡುವ ಮೂಲಕ ಭಾರತ ಮಾತೆಗೆ ಗೌರವ ಸಮರ್ಪಿಸಿ ಕಾರ್ಯಕ್ರಮ ಸಂಪನ್ನಗೊಂಡಿತು. ಯಾತ್ರೆಯುದ್ದಕ್ಕೂ ಕಂಡುಬಂದ ಶಿಸ್ತು, ಉತ್ಸಾಹ ಹಾಗೂ ದೇಶಪ್ರೇಮವನ್ನು ಮೂಡಿಸಿತು. ನೂರಾರು ಸಂಖ್ಯೆಯಲ್ಲಿದ್ದ ವಿದ್ಯಾರ್ಥಿಗಳು ದೇಶಭಕ್ತಿಯ ಘೋಷಣೆಗಳ ಮೂಲಕ ಗಮನ ಸಳೆದರು.ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಸ್ವಾತಂತ್ರ್ಯ ದಿನದ ಶುಭ ಸಂದರ್ಭದಲ್ಲಿ ಪ್ರತಿಯೊಬ್ಬರೂ ತಮ್ಮ ಮನೆ, ಅಂಗಡಿ ಹಾಗೂ ಸರ್ಕಾರಿ ಕಚೇರಿಗಳ ಮೇಲೆ ಹೆಮ್ಮೆಯಿಂದ ರಾಷ್ಟ್ರಧ್ವಜ ಹಾರಿಸಬೇಕು. ಪ್ರತಿಯೊಬ್ಬರಲ್ಲೂ ದೇಶವೇ ಮೊದಲು ಎಂಬ ಉದಾತ್ತ ಭಾವನೆ ನಿರಂತರವಾಗಿ ಬೆಳೆಯಬೇಕು ಎಂದರು.
ಬಿಜೆಪಿ ಮುಖಂಡ ಜಯತೀರ್ಥ ಕಟ್ಟಿ ಮಾತನಾಡಿ, ವಂದೇ ಮಾತರಂ ಗೀತೆ ರಚನೆಯಾಗಿ 150 ವರ್ಷಗಳು ಪೂರ್ಣಗೊಂಡಿವೆ. ಅಂದು ಈ ಗೀತೆಯ ಪ್ರೇರಣೆಯಿಂದಲೇ ಭಗತ್ ಸಿಂಗ್, ರಾಜಗುರು, ಸುಖದೇವ್ ಹಾಗೂ ರಾಂ ಪ್ರಸಾದ್ ಬಿಸ್ಮಿಲ್ ಅವರಂಥ ಅಸಂಖ್ಯಾತ ಕ್ರಾಂತಿಕಾರಿಗಳು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದರು. ಇಂದು ಯುವಶಕ್ತಿ ಭಾರತವನ್ನು ಜಗದ್ಗುರುವಿನ ಸ್ಥಾನದಲ್ಲಿ ನಿಲ್ಲಿಸಲು ತನ್ನನ್ನು ತಾನು ಸಮರ್ಪಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಆನಂದಗೌಡ ಪಾಟೀಲ, ಎಂ.ಎಸ್.ಕರಿಗೌಡ್ರ, ಪ್ರಶಾಂತ ನಾಯಕರ, ಮಹೇಶ ದಾಸರ, ನಗರಸಭೆಯ ಸದಸ್ಯರಾದ ರಾಘವೇಂದ್ರ ಯಳವತ್ತಿ, ಅನಿಲ ಅಬ್ಬಿಗೇರಿ, ಎಂ.ಎಂ.ಹಿರೇಮಠ ಸೇರಿದಂತೆ ಅನೇಕ ಮುಖಂಡರು ಇದ್ದರು.