ಉ.ಕ. ಭಾಗದಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಿ: ಅರವಿಂದ ಬೆಲ್ಲದ

KannadaprabhaNewsNetwork |  
Published : Oct 27, 2024, 02:34 AM ISTUpdated : Oct 27, 2024, 02:35 AM IST
ಂೆಮಂಮ | Kannada Prabha

ಸಾರಾಂಶ

ಆಂಧ್ರಪ್ರದೇಶ, ತಮಿಳುನಾಡು ಗಡಿಯಲ್ಲಿ ವಿಮಾನ ನಿಲ್ದಾಣ ನಿರ್ಮಿಸಿ ಅವರಿಗೆ ಅನುಕೂಲ ಮಾಡಿಕೊಡುವ ಬದಲು ಮಧ್ಯ ಕರ್ನಾಟಕದಲ್ಲಿ ನಿರ್ಮಿಸಿದರೆ, ಉತ್ತರ ಕರ್ನಾಟಕ ಭಾಗಕ್ಕೂ ಅನುಕೂಲ ಆಗುತ್ತದೆ ಎಂದು ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.

ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದಲ್ಲಿಯೇ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಆದ್ಯತೆ ನೀಡುವಂತೆ ಈ ಭಾಗದ ಎಲ್ಲ ಕೈಗಾರಿಕೋದ್ಯಮಿಗಳು ಧ್ವನಿ ಎತ್ತಬೇಕು ಎಂದು ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.

ನಗರದ ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ಸಂವಾದದಲ್ಲಿ ಮಾತನಾಡಿದರು.

ಬೆಂಗಳೂರಿನ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಂಧ್ರಪ್ರದೇಶದ ಗಡಿಯಲ್ಲಿದೆ. ಅದರ ಸುತ್ತಮುತ್ತ 2ನೇ ನಿಲ್ದಾಣ ನಿರ್ಮಿಸಿದರೆ ಯಾವುದೇ ಪ್ರಯೋಜನ ಇಲ್ಲ. ಈಗ ತುಮಕೂರು ವರೆಗೆ ಬೆಂಗಳೂರು ಬೆಳೆಯುತ್ತಿದೆ. ಹೀಗಾಗಿ ತುಮಕೂರು-ಶಿರಾ ನಡುವೆ ವಿಮಾನ ನಿಲ್ದಾಣ ನಿರ್ಮಾಣವಾದರೆ ಕೈಗಾರಿಕೆಗಳ ಬೆಳವಣಿಗೆಗೆ ಸಹಕಾರಿಯಾಗಲಿದೆ. ಅಲ್ಲಿಂದ 60 ಕಿ.ಮೀ ದೂರದಲ್ಲಿ ಚಿತ್ರದುರ್ಗವಿದೆ. ಈ ಮೂಲಕ ಉತ್ತರ ಕರ್ನಾಟಕ ಭಾಗಕ್ಕೂ ಅನುಕೂಲವಾಗಲಿದೆ ಎಂದರು.

ಸಂವಾದ ಏರ್ಪಡಿಸಿ

ಆಂಧ್ರಪ್ರದೇಶ, ತಮಿಳುನಾಡು ಗಡಿಯಲ್ಲಿ ವಿಮಾನ ನಿಲ್ದಾಣ ನಿರ್ಮಿಸಿ ಅವರಿಗೆ ಅನುಕೂಲ ಮಾಡಿಕೊಡುವ ಬದಲು ಮಧ್ಯ ಕರ್ನಾಟಕದಲ್ಲಿ ನಿರ್ಮಿಸಿದರೆ, ಉತ್ತರ ಕರ್ನಾಟಕ ಭಾಗಕ್ಕೂ ಅನುಕೂಲ ಆಗುತ್ತದೆ. ಈ ನಿಟ್ಟಿನಲ್ಲಿ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಅವರನ್ನು ಕರೆಸಿ ಸಂವಾದ ಏರ್ಪಡಿಸಬೇಕು ಎಂದರು.

ಹುಬ್ಬಳ್ಳಿ ವಿಮಾನ ನಿಲ್ದಾಣ ಸಹ ಮೇಲ್ದರ್ಜೆಗೇರಿಸಲಾಗುತ್ತಿದ್ದು, ಕಾಮಗಾರಿ ಆರಂಭವಾಗಿದೆ. ಇಲ್ಲಿ ದಟ್ಟಣೆ ಹೆಚ್ಚಾದರೆ ಸಹಜವಾಗಿಯೇ ಅಂತಾರಾಷ್ಟ್ರೀಯ ವಿಮಾನಗಳು ಕಾರ್ಯಾಚರಣೆ ಆರಂಭಿಸುತ್ತವೆ. ಮೂಲಸೌಕರ್ಯ ಕಲ್ಪಿಸುವ ಕೆಲಸವನ್ನು ಮಾಡಲಾಗುತ್ತಿದೆ. ರಾಯಾಪುರದಲ್ಲಿರುವ ಎನ್‌ಜಿಇಎಫ್‌ (ನ್ಯೂ ಗವರ್ನಮೆಂಟ್ ಎಲೆಕ್ಟ್ರಿಕಲ್ ಫ್ಯಾಕ್ಟರಿ) ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಇದರ ಉಳಿವಿಗೆ ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು ಎಂದರು.

₹1.50ಕೋಟಿ ಮಂಜೂರು

ಕೈಗಾರಿಕಾ ಪ್ರದೇಶದಲ್ಲಿ ಮೂಲಸೌಕರ್ಯ ಕೊರತೆ ಇರುವುದು ಗಮನಕ್ಕೆ ಬಂದಿದೆ. ಗಾಮನಗಟ್ಟಿ-ತಾರಿಹಾಳ ರಸ್ತೆ ಅಭಿವೃದ್ಧಿಗೆ ₹1.50 ಕೋಟಿ ಮಂಜೂರಾಗಿದೆ. ಗಾಮನಗಟ್ಟಿ ಬಳಿ ಸೇತುವೆ ವಿಸ್ತರಣೆ ಸೇರಿದಂತೆ ಹಲವು ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಬೇಲೂರಿನಲ್ಲಿ ಎಫ್‌ಎಂಸಿಜಿ ಕ್ಲಸ್ಟರ್‌ (ವೇಗವಾಗಿ ಸಾಗಾಟವಾಗುವ ಗ್ರಾಹಕ ಸರಕುಗಳು) ಆರಂಭವಾಗುತ್ತಿಲ್ಲ. ಈ ಬಗ್ಗೆಯೂ ಕೈಗಾರಿಕೋದ್ಯಮಿಗಳು ಧ್ವನಿ ಎತ್ತಬೇಕು ಎಂದರು.

ಸರ್ಕಾರದಿಂದ ನಿರ್ಲಕ್ಷ್ಯ

ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಸ್ಥಾಪಿಸಲಾಗಿದ್ದು, ಪ್ರತಿ ವರ್ಷ ಸಾವಿರಾರು ಕೋಟಿ ಅನುದಾನ ನೀಡಲಾಗುತ್ತಿದೆ. ಅದೇ ರೀತಿ ಈ ಭಾಗದ ಅಭಿವೃದ್ಧಿಗೆ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾಗ ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ರಚಿಸಿದ್ದರು. ಆದರೆ, ಈ ಸರ್ಕಾರ ಅದಕ್ಕೆ ಅನುದಾನ ನೀಡದೆ ನಿರ್ಲಕ್ಷ್ಯ ವಹಿಸಿದೆ ಎಂದು ದೂರಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಗಿರೀಶ ನಲವಡಿ, ಉಪಾಧ್ಯಕ್ಷ ಅಶೋಕ ಕುನ್ನೂರು, ಕಾರ್ಯದರ್ಶಿ ಶಂಕರ ಹಿರೇಮಠ, ಖಜಾಂಚಿ ರಮೇಶ ಯಾದವಾಡ, ಜಂಟಿ ಕಾರ್ಯದರ್ಶಿ ಭರತ್ ಕುಲಕರ್ಣಿ, ಮನೋಜರ ಕೊಟ್ಟೂರಶೆಟ್ಟರ್, ಆನಂದ ಪಾಂಡುರಂಗಿ ಸೇರಿದಂತೆ ಹಲವರಿದ್ದರು.

PREV

Recommended Stories

ಭಕ್ತರ ಸಹಕಾರದಿಂದ ದೇವಸ್ಥಾನದಲ್ಲಿ ಹೊಸತನ
ಪತ್ನಿ ಮೇಲೆ ಹಲ್ಲೆಗೈದು ಅರ್ಧ ತಲೆ ಬೋಳಿಸಿದ ಪತಿ