ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಹಿಂದುಳಿದವರ ಸರ್ವತೋಮುಖ ಅಭಿವೃದ್ಧಿಗಾಗಿ ಹತ್ತು ಹಲವು ಕಾರ್ಯಕ್ರಮ ಹಮ್ಮಿಕೊಂಡು ದುರ್ಬಲ ವರ್ಗದ ಜನರ ಏಳಿಗೆಗೆ ಶ್ರಮಿಸಿದವರು ಡಿ.ದೇವರಾಜ್ ಅರಸು ಎಂದು ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು.ನವನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬುಧವಾರ ಜಿಲ್ಲಾಡಳಿತ, ಜಿಪಂ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಡಿ.ದೇವರಾಜ್ ಅರಸು 110ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹಾವನೂರು ಆಯೋಗದ ಶಿಫಾರಸ್ಸಿನ ಅನ್ವಯ ನೀಡಲಾದ ಶೈಕ್ಷಣಿಕ ಹಾಗೂ ಔದ್ಯೋಗಿಕ ಮೀಸಲಾತಿ, ಭೂ ಸುದಾರಣೆ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಉಳುವವನೆ ಭೂಮಿಯ ಒಡೆಯನನ್ನಾಗಿ ಮಾಡಿದ್ದಾರೆ. ಇಂತಹ ಮಹಾನ್ ನಾಯಕನ ಇತಿಹಾಸವನ್ನು ಇಂದಿನ ಯುವ ಪೀಳಿಗೆ ಅನುಸರಿಸುವ ಅಗತ್ಯವಿದೆ ಎಂದರು.
ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿ, ಅರಸು ಅವರು ರಾಜ ಮನೆತನದಲ್ಲಿ ಹುಟ್ಟಿದರೂ ದೀನದಲಿತರ ಹಾಗೂ ಬಡವರ ಪರವಾಗಿ ಸಮಾಜಮುಖಿ ಕಾರ್ಯಗಳನ್ನು ಮಾಡಲು ಮುಂದಾಗಿದ್ದರು. ಅವರ ಆಡಳಿತಾವಧಿಯಲ್ಲಿ ಜಾರಿಗೆ ತಂದ ಉಳುವವನೆ ಭೂಮಿಯ ಒಡೆಯ ಕಾಯಿದೆಯಿಂದ ಲಕ್ಷಾಂತರ ಬಡ ಕುಟುಂಬಗಳಿಗೆ ಆಧಾರವಾಗಿದೆ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಮೂಲಸೌಕರ್ಯ ಒದಗಿಸಲು ಅವರು ಹೋರಾಡಿದ ಪರಿಣಾಮವಾಗಿ, ಇಂದಿನ ಹಿಂದುಳಿದ ವಿದ್ಯಾರ್ಥಿಗಳ ನಿಲಯಗಳಲ್ಲಿ ಸಕಲ ಸೌಲಭ್ಯಗಳು ಲಭ್ಯವಾಗುತ್ತಿವೆ ಎಂದು ಹೇಳಿದರು.ವಸತಿ ನಿಲಯಗಳ ವಾತಾವರಣದಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ಉತ್ತಮ ಸಾಧನೆಗಳನ್ನು ಮಾಡಿದ್ದಾರೆ. ಕಳೆದ ವರ್ಷದ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿಯೂ ಇದೇ ಮುರಾರ್ಜಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿರುವುದು ಇದಕ್ಕೆ ಸಾಕ್ಷಿ. ಇಂತಹ ಶೈಕ್ಷಣಿಕ ವಾತಾವರಣ ನಿರ್ಮಿಸಲು ಕಾರಣಿಕರ್ತರಾಗಿದ್ದಾರೆ. ವಿದ್ಯಾರ್ಥಿ ನಿಲಯಗಳಲ್ಲಿ ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡಿ ಗುರಿ ಸಾಧಿಸಲು ಮುಂದಾಗಬೇಕು. ಸಮಸ್ಯೆಗಳು ಎದುರಾದಾಗ ಅವುಗಳನ್ನು ದೂಷಿಸುವುದು ಬೇಡ, ಎದುರಿಸಿ ಗುರಿಯತ್ತ ಸಾಗಬೇಕು ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ಉಪನ್ಯಾಸಕರಾಗಿ ಆಗಮಿಸಿದ್ದ ನ್ಯಾಯವಾದಿ ಮಹಾಂತೇಶ ಆವಾರಿ ಮಾತನಾಡಿ, ದೇವರಾಜ್ ಅರಸು ಅವರು ಒಬ್ಬ ದಾರ್ಶನಿಕ ವ್ಯಕ್ತಿಯಾಗಿದ್ದು, ಕರ್ನಾಟಕವನ್ನು ಸಾಂಸ್ಕೃತಿಕವಾಗಿ ಒಗ್ಗೂಡಿಸುವ ಕೆಲಸ ಮಾಡಿದ್ದಾರೆ. ಮಲ, ಜೀತ ಪದ್ಧತಿ ನಿರ್ಮೂಲನೆ, ದುಡಿಯುವ ವರ್ಗಕ್ಕೆ ಆರ್ಥಿಕ ಸ್ಥಿತಿ ಸುಧಾರಣೆ ಮಾಡುವ ಕಾರ್ಯ ಮಾಡಿದ್ದಾರೆ ಎಂದ ಅವರು, ದೇವರಾಜ್ ಅರಸು ಅವರು ನಡೆದು ಬಂದ ಹಾದಿ ಹಾಗೂ ಆದರ್ಶಗಳ ಬಗ್ಗೆ ವಿವರವಾಗಿ ತಿಳಿಸಿಕೊಟ್ಟರು.ಈ ಸಂದರ್ಭದಲ್ಲಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿದವರನ್ನು ಸನ್ಮಾನಿಸಲಾಯಿತು. ಅಲ್ಲದೇ ಎಸ್ಎಸ್ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಇಲಾಖೆ ವ್ಯಾಪ್ತಿಯ ವಿವಿಧ ವಸತಿ ನಿಲಯಗಳ ವಿದ್ಯಾರ್ಥಿಗಳನ್ನು ಸಹ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಪ್ರಭಾರಿ ಉಪನಿರ್ದೇಶಕ ರಮೇಶ ಚವ್ಹಾಣ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಈರಪ್ಪ ಆಶಾಪೂರ, ತಾಲೂಕು ಅಧಿಕಾರಿ ಎಸ್.ಎಂ.ಬಡಿಗೇರ, ಇಲಾಖೆ ವ್ಯವಸ್ಥಾಪಕ ಶಿವು ದರಗಾದ, ಸಮುದಾಯದ ಮುಖಂಡ ಶ್ರೀನಿವಾಸ ಬಳ್ಳಾರಿ ಸೇರಿ ಇತರರಿದ್ದರು.
ಅರಸು ಅವರ ಭಾವಚಿತ್ರದ ಅದ್ಧೂರಿ ಮೆರವಣಿಗೆಡಿ.ದೇವರಾಜ್ ಅರಸು ಅವರ 110ನೇ ಜಯಂತಿ ಅಂಗವಾಗಿ ಜಿಲ್ಲಾಡಳಿತ ಭವನದ ಆವರಣದಲ್ಲಿ ದೇವರಾಜ್ ಅರಸು ಅವರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಸಂಗಪ್ಪ, ಜಿಪಂ ಸಿಇಒ ಶಶಿಧರ ಕುರೇರ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆ ಜಿಲ್ಲಾಡಳಿತ ಭವನದಿಂದ ಪ್ರಾರಂಭವಾಗಿ ನಗರದ ನಾನಾ ಕಡೆ ಸಂಚರಿಸಿ ಕಲಾಭವನಕ್ಕೆ ಮುಕ್ತಾಯಗೊಂಡಿತು. ವಿವಿಧ ಜಾನಪದ ಕಲಾ ತಂಡಗಳು ಭಾಗವಹಿಸಿದ್ದವು.