ನೂತನ ಹಾಸ್ಟೆಲ್‌ ಕಟ್ಟಡ ಉದ್ಘಾಟನೆಗೆ ಕುಂಟು ನೆಪ

KannadaprabhaNewsNetwork |  
Published : Jul 11, 2024, 01:30 AM IST
10ಕೆಬಿಪಿಟಿ.1.ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಗ್ರಾಮದಲ್ಲಿ ಉದ್ಘಾಟನೆಗೆ ಸಿದ್ದವಾಗಿರುವ ಬಾಲಕರ ವಸತಿ ನಿಲಯ | Kannada Prabha

ಸಾರಾಂಶ

ತಾಲೂಕಿನ ಬೂದಿಕೋಟೆ ಗ್ರಾಮದಲ್ಲಿನ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಈ ಹಿಂದೆ ಇದ್ದಂತಹ ಕಟ್ಟಡ ಶಿಥಿಗೊಂಡಿತ್ತು. ೨ ವರ್ಷಗಳ ಹಿಂದೆ ಹಳೇ ಹಾಸ್ಟೆಲ್ ಕಟ್ಟಡವನ್ನು ಕೆಡವಿ ₹೧.೯೦ ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ನೂತನ ಕಟ್ಟಡ ಕಾಮಗಾರಿ ಪೂರ್ಣಗೊಂಡು ತಿಂಗಳುಗಲೇ ಕಳೆಯುತ್ತಿದ್ದರೂ ಉದ್ಘಾಟನೆ ಭಾಗ್ಯವಿಲ್ಲದ ಕಾರಣ ವಿದ್ಯಾರ್ಥಿಗಳು ಇನ್ನೂ ರೇಷ್ಮೆ ಸಾಕಾಣಿಕೆ ಮನೆಯಲ್ಲೇ ದಿನ ಕಳೆಯುವಂತಾಗಿದೆ. ತಾಲೂಕಿನ ಬೂದಿಕೋಟೆ ಗ್ರಾಮದಲ್ಲಿನ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಈ ಹಿಂದೆ ಇದ್ದಂತಹ ಕಟ್ಟಡ ಶಿಥಿಗೊಂಡಿತ್ತು. ೨ ವರ್ಷಗಳ ಹಿಂದೆ ಹಳೇ ಹಾಸ್ಟೆಲ್ ಕಟ್ಟಡವನ್ನು ಕೆಡವಿಸಿ ೧.೯೦ ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಚಾಲನೆ ದೊರೆಯಿತು.

ಸುಸಜ್ಜಿತ ಕಟ್ಟಡ ನಿರ್ಮಾಣ

ನೂತನ ಕಟ್ಟಡವನ್ನು ನಿರ್ಮಿಸುವ ಜವಾಬ್ದಾರಿಯನ್ನು ಕೆ.ಆರ್.ಐ.ಡಿ.ಎಲ್ ಸಂಸ್ಥೆಗೆ ನೀಡಲಾಗಿತ್ತು. ಅದರಂತೆ ಕಚೇರಿ, ಅಡುಗೆ ಕೋಣೆ, ಊಟದ ಕೊಠಡಿ, ೧೦ ಶೌಚಾಲಯ, ೧೦ ಸ್ನಾನದ ಕೊಠಡಿ, ಕೆಳ ಅಂತಸ್ಥಿನಲ್ಲಿ ಒಂದು ಕೊಠಡಿ, ಮೇಲಂತಸ್ಥಿನಲ್ಲಿ ೪ ಕೊಠಡಿಗಳನ್ನು ಸುಸಜ್ಜಿತವಾಗಿ ನಿರ್ಮಾಣ ಮಾಡಲಾಗಿದೆ. ಕಾಮಗಾರಿ ಪೂರ್ಣಗೊಂಡು ತಿಂಗಳುಗಳೇ ಕಳೆದಿದ್ದರೂ ಹಲವು ಕಾರಣಗಳ ನೆಪವೊಡ್ಡಿ ಅಧಿಕಾರಿಗಳು ಲೋಕಾರ್ಪಣೆಯನ್ನು ತಡೆದಿದ್ದಾರೆ. ಹಳೇ ಹಾಸ್ಟಲ್ ಕಟ್ಟಡದಲ್ಲಿ ಮಕ್ಕಳು ವಾಸಿಸಲು ಯೋಗ್ಯವಿಲ್ಲವೆಂದು ಗ್ರಾಮದ ಹೊರಗಿನ ರೇಷ್ಮೆ ಸಾಕಾಣಿಗೆ ಮನೆಯನ್ನು ಬಾಡಿಗೆಗೆ ಪಡೆದು ಸ್ಥಳಾಂತರಿಸಲಾಗಿತ್ತು. ಸದ್ಯ ಮಕ್ಕಳು ವಾಸಿಸುವ ಕಟ್ಟಡದಲ್ಲಿ ಶೌಚಾಲಯ, ಸ್ನಾನದ ಕೊಠಡಿ ಸೇರಿದಂತೆ ಮೂಲಭೂತ ಸೌಕರ್ಯಗಳು ಇಲ್ಲದಿದ್ದರೂ ಮಕ್ಕಳು ಕಳೆದ ಎರಡು ವರ್ಷಗಳಿಂದ ಕಾಲ ತಳ್ಳುತ್ತಿದ್ದಾರೆ. ಒಂದೇ ಕೊಠಡಿಯಲ್ಲಿ ಅಡುಗೆ, ಮಕ್ಕಳ ವಾಸ ಮತ್ತು ಕಚೇರಿ ಇದೆ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಮತ್ತು ವಾಸಕ್ಕೆ ತೊಂದರೆಯಾಗಿದೆ. ಜೊತೆಗೆ ಒಂದೇ ಶೌಚಾಲಯ ಮತ್ತು ಒಂದೇ ಸ್ನಾನದ ಕೊಠಡಿಯಿದ್ದು, ಮಕ್ಕಳು ನಿತ್ಯ ಕರ್ಮಗಳಿಗೆ ಬಯಲು ಪ್ರದೇಶಕ್ಕೆ ತೆರಳುವುದು ಸಾಮಾನ್ಯವಾಗಿದೆ. ಜೊತೆಗೆ ಹಾಸ್ಟೆಲ್ ಗ್ರಾಮದಿಂದ ದೂರವಿರುವ ಕಾರಣ ಆಗಾಗ ಹಾವು ಚೇಳುಗಳ ಕಾಟವೂ ಹೆಚ್ಚು. ಇದರಿಂದ ಮನೆ ಹತ್ತಿರವಿರುವ ಕೆಲವು ಮಕ್ಕಳು ರಾತ್ರಿ ವೇಳೆ ಮನೆಗಳಿಗೆ ತೆರಳುತ್ತಿದ್ದಾರೆ. ಸರ್ಕಾರದಿಂದ ಕೋಟ್ಯಂತರ ರು.ಗಳನ್ನು ಖರ್ಚು ಮಾಡಿ ನಿರ್ಮಿಸಿರುವ ಸುಸಜ್ಜಿತ ನೂತನ ಕಟ್ಟಡಕ್ಕೆ ಯಾವಾಗ ಹೋಗುತ್ತೇವೋ ಎಂಬ ಆಸೆಯೊಂದಿಗೆ ಮಕ್ಕಳು ಕನಸು ಕಾಣುತ್ತಿದ್ದು, ಆದಷ್ಟು ಬೇಗ ನೂತನ ಕಟ್ಟಡವನ್ನು ಲೋಕಾರ್ಪಣೆ ಮಾಡಿ ಮಕ್ಕಳನ್ನು ಸ್ಥಳಾಂತರಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ. ಸದ್ಯ ವಾಸವಿರುವ ಹಾಸ್ಟೆಲ್‌ನಲ್ಲಿ ವಾಸ ಮಾಡಲು ಕಷ್ಟವಾಗುತ್ತಿದೆ. ಸೊಳ್ಳೆಗಳ ಕಾಟ ಜಾಸ್ತಿ ಇದ್ದು, ಸ್ನಾನಕ್ಕೆ ಬಿಸಿ ನೀರಿಲ್ಲ. ರಾತ್ರಿ ಆದರೆ ಹಾಸ್ಟಲ್‌ನಲ್ಲಿ ಇರೋಕೆ ಭಯ ಆಗುತ್ತದೆ. ಆದಷ್ಟು ಬೇಗ ನಮ್ಮನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಿದರೆ ಶೈಕ್ಷಣಿಕ ಪ್ರಗತಿಗೆ ಅನುಕೂಲ ಆಗುತ್ತದೆ ಎಂಬುದು ಇಲ್ಲಿನ ಮಕ್ಕಳ ಅಳಲು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ