ಕನ್ನಡಪ್ರಭ ವಾರ್ತೆ ಮಧುಗಿರಿ
ಬುಧವಾರ ತಾಲೂಕಿನ ಕೊಡಿಗೇನಹಳ್ಳಿಯಲ್ಲಿ ಪೊಲೀಸ್ ಠಾಣೆ ನೂತನ ಕಟ್ಟಡದ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಪೊಲೀಸ್ ಇಲಾಖೆಯು ಸಮರ್ಥವಾಗಿ ಕೆಲಸ ನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದರು. ಮಧುಗಿರಿ ಉಪವಿಭಾಗದ ಕೊರಟಗೆರೆ ,ಪಾವಗಡ, ಮಧುಗಿರಿ ಮತ್ತು ಶಿರಾ ತಾಲೂಕುಗಳು ಅತ್ಯಂತ ಹಿಂದುಳಿದ ಪ್ರದೇಶಗಳಾಗಿದ್ದು, ನೀರಾವರಿ ಯೋಜನೆಯಡಿ ಎತ್ತಿನಹೊಳೆ, ಅಪ್ಪರ್ ಭದ್ರಾ ಮತ್ತು ಹೇಮಾವತಿ ಹೆಚ್ಚುವರಿ ನೀರನ್ನು ಹರಿಸುವ ಕೆಲಸ ಮಾಡಲಾಗುವುದು. ಈ ಹಿಂದೆ ನಮ್ಮ ಸರ್ಕಾರವಿದ್ದಾಗ ಸಿದ್ದರಾಮಯ್ಯನವರ ದೂರದೃಷ್ಟಿಯಿಂದ ಪಾವಗಡ ತಾಲೂಕಿಗೆ 2300 ಕೋಟಿ ರು.ಗಳ ವೆಚ್ಚದಲ್ಲಿ ತುಂಗಭದ್ರ ಕುಡಿಯುವ ನೀರಿನ ಯೋಜನೆ ಜಾರಿಗೆ ತಂದ ಫಲ ಇನ್ನೂ ಕೆಲವೇ ದಿನಗಳಲ್ಲಿ ಪಾವಗಡಕ್ಕೆ ನೀರು ಬರಲಿದೆ ಎಂದರು.
ಬಹು ದಿನಗಳ ಬೇಡಿಕೆಯಾಗಿದ್ದ ಕೊಡಿಗೇನಹಳ್ಳಿ ಪೊಲೀಸ್ ಇಲಾಖೆ ಕಟ್ಟಡವನ್ನು 1.5 ಕೋಟಿ ರು. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, 8 ತಿಂಗಳಲ್ಲಿ ಈ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, ನಮ್ಮ ಹಿಂದಿನ ಸರ್ಕಾರದ ಅವಧಿಯಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಇಮ್ಮಡಗೊಂಡನಹಳ್ಳಿ ಬಳಿ ಚೆಕ್ ಡ್ಯಾಂ ನಿರ್ಮಿಸಿದ್ದರಿಂದ ಪ್ರಸ್ತುತ ಮಳೆಯಿಂದ ದೊಡ್ಡಮಾಲೂರು ಕೆರೆ ಸಂಪೂರ್ಣ ತುಂಬುತ್ತಿದೆ. ನಮ್ಮ ಸರ್ಕಾರದ ಪ್ರಣಾಳಿಕೆಯನ್ನು ಡಾ.ಜಿ.ಪರಮೇಶ್ವರ್ ತಯಾರಿಸಿದ್ದು, ನಿಮ್ಮೆಲ್ಲರ ಆಶೀರ್ವಾದದಿಂದ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ. ಗ್ಯಾರಂಟಿಗಳ ಜಾರಿಗೆ 58 ಸಾವಿರ ಕೋಟಿ ರು. ವೆಚ್ಚ ಆಗುತ್ತಿದೆ. ನಮ್ಮ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದ ಸರ್ಕಾರವಾಗಿದೆ ಎಂದು ಜನರೇ ಹೇಳುತ್ತಿದ್ದಾರೆ. ಮಧುಗಿರಿ ತಾಲೂಕಿಗೆ 60 ಪೊಲೀಸ್ ವಸತಿ ಗೃಹಗಳ ಬೇಡಿಕೆಯಿದ್ದು, ಶೀಘ್ರ ನಿರ್ಮಿಸಿಕೊಡುವುದಾಗಿ ತಿಳಿಸಿ, ಕೊಡಿಗೇನಹಳ್ಳಿ ಬಸ್ ನಿಲ್ದಾಣ ಮತ್ತು ಹೆಣ್ಣುಮಕ್ಕಳಿಗೆ ಶೌಚಾಲಯ ಕಟ್ಟಿ ಕೊಡುವುದಾಗಿ ರಾಜಣ್ಣ ಭರವಸೆ ನೀಡಿದರು.