ಹಾನಗಲ್ಲ: ಕಾಡುಹಂದಿ ಬೇಟೆಯಾಡಲು ಇಟ್ಟಿದ್ದ ನಾಡ ಬಾಂಬ್ ತಿಂದು ಎಮ್ಮೆ ತೀವ್ರವಾಗಿ ಗಾಯಗೊಂಡಿದ್ದು, ನರಳಿ ನರಳಿ ಪ್ರಾಣ ಬಿಟ್ಟ ಘಟನೆ ಹಾನಗಲ್ಲ ತಾಲೂಕಿನ ಹೊಸಕೊಪ್ಪದ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಗ್ರಾಮದ ರೈತ ಬಾಷಾಸಾಬ್ ಬಂಕಾಪುರ ಅವರಿಗೆ ಸೇರಿದ ಎಮ್ಮೆ ಅರಣ್ಯ ಪ್ರದೇಶದಲ್ಲಿ ಹುಲ್ಲು ಮೇಯುತ್ತಿದ್ದಾಗ ನಾಡಬಾಂಬ್ ತಿಂದಿದೆ. ಅದು ಎಮ್ಮೆ ಬಾಯಲ್ಲೇ ಸ್ಫೋಟಗೊಂಡು ಎಮ್ಮೆ ಬಾಯಿ ಛಿದ್ರ ಛಿದ್ರವಾಗಿದ್ದು, ಬಳಿಕ ನರಳಿ ನರಳಿ ಸಾವನ್ನಪ್ಪಿದೆ. ಘಟನೆಯ ವಿಷಯ ತಿಳಿದ ಗ್ರಾಮಸ್ಥರು ವಲಯ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಅರಣ್ಯ ಅಧಿಕಾರಿಗಳು ಪರಿಶೀಲನೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ. ಈ ವೇಳೆ ಸ್ಥಳೀಯರಾದ ಜಿ.ಎಂ.ಮುಲ್ಲಾ, ಎಂ.ಎಂ.ಮುಲ್ಲಾ, ಬಾಷಾಸಾಬ ಬಂಕಾಪೂರ ಸೇರಿದಂತೆ ಅರಣ್ಯ ಅಧಿಕಾರಿಗಳು ಇದ್ದರು.