ಕನ್ನಡಪ್ರಭ ವಾರ್ತೆ ಹುಕ್ಕೇರಿ
ಇಲ್ಲಿನ ಎಸ್.ಕೆ.ಹೈಸ್ಕೂಲ್ ಮೈದಾನ ಮತ್ತು ಬಾಪೂಜಿ ಶಿಕ್ಷಣ ಸಂಸ್ಥೆ ಮೈದಾನದಲ್ಲಿ ಬೆಳಗ್ಗೆಯಿಂದಲೇ ಬಿರುಸಿನಿಂದ ಸಾಗಿದ ಮತದಾನ ಸಂಜೆ 7ರವರೆಗೂ ನಡೆಯಿತು. ಮತದಾರರು ಸರದಿ ಸಾಲಿನಲ್ಲಿ ನಿಂತು ಹುಮ್ಮಸ್ಸಿನಿಂದಲೇ ಮತ ಚಲಾಯಿಸಿದರು. ಒಟ್ಟು 15 ನಿರ್ದೇಶಕರ ಸಂಖ್ಯಾಬಲದ ಈ ಸಂಘದ ಚುನಾವಣೆಯಲ್ಲಿ 32 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದಾರೆ. ಸಾಮಾನ್ಯ ಕ್ಷೇತ್ರದಿಂದ 9 ಜನ, ಮಹಿಳಾ ಕ್ಷೇತ್ರದಿಂದ 2, ಹಿಂದುಳಿದ ಅ ವರ್ಗದಿಂದ 1, ಹಿಂದುಳಿದ ಮತ್ತು ಬ ವರ್ಗದಿಂದ 1, ಪರಿಶಿಷ್ಟ ಜಾತಿಗೆ 1, ಪರಿಶಿಷ್ಟ ಪಂಗಡದ 1 ಸ್ಥಾನಕ್ಕೆ ಮೀಸಲಾತಿ ಕಲ್ಪಿಸಲಾಗಿದೆ.
ಒಟ್ಟು 122 ವರೆಗೆ ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಚುನಾವಣಾ ಕರ್ತವ್ಯಕ್ಕೆ ಒಟ್ಟು 812 ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಮತದಾರರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ನೋಡಕೊಳ್ಳಲು ಪೊಲೀಸ್, ಸಹಾಯವಾಣಿ, ಕುಡಿಯುವ ನೀರು, ತಾತ್ಕಾಲಿಕ ಶೌಚಾಲಯ, ವಿದ್ಯುತ್, ಕ್ಯಾಮರಾ ಅಳವಡಿಕೆ, ವಿಕಲಚೇತನರಿಗೆ ಮತ್ತು ವೃದ್ದರಿಗೆ ವೀಲ್‌ಚೇರ್ ವ್ಯವಸ್ಥೆ ಮಾಡಲಾಗಿತ್ತು.ಅದೃಷ್ಟ ಪರೀಕ್ಷೆಗೆ ಇಳಿದ ಅಭ್ಯರ್ಥಿಗಳು:
ಮಹಿಳಾ ಕ್ಷೇತ್ರದಿಂದ ನಾಯಿಕವಾಡಿ ಮಹಬೂಬಿ ಗೌಸಅಜಂ (ಹುಕ್ಕೇರಿ), ಪಾಟೀಲ ಭಾಗ್ಯಶ್ರೀ ಬಾಬಾಗೌಡ (ಹೆಬ್ಬಾಳ), ಮೂಡಲಗಿ ಮಂಗಲ ಗುರಸಿದ್ದಪ್ಪಾ (ಶಿಂದಿಹಟ್ಟಿ), ಸುಮಿತ್ರಾ ಲಕ್ಷ್ಮಣ ಶಿಡ್ಲಹಾಳ (ಪಾಶ್ಚಾಪುರ) ಸ್ಪರ್ಧೆಯಲ್ಲಿದ್ದಾರೆ. ಹಿಂದುಳಿದ ಅ ವರ್ಗ ಕ್ಷೇತ್ರದಿಂದ ಕಳ್ಳಿ ಗಜಾನನ ನಿಂಗಪ್ಪಾ (ಸಂಕೇಶ್ವರ), ಹೆಗಡೆ ಶಂಕರ ವಿಠೋಬಾ (ಸಂಕೇಶ್ವರ) ಕಣದಲ್ಲಿದ್ದರೆ, ಹಿಂದುಳಿದ ಬ ವರ್ಗ ಕ್ಷೇತ್ರದಿಂದ ದಯಾನಂದ ಮಾರುತಿ ಪಾಟೀಲ (ದಡ್ಡಿ), ಸತ್ತೆಪ್ಪಾ ಭರಮಣ್ಣಾ ನಾಯಿಕ (ಬೆಳವಿ) ಸ್ಪರ್ಧೆಯಲ್ಲಿದ್ದಾರೆ.
ಕತ್ತಿ-ಜಾರಕಿಹೊಳಿ ಬಣಗಳ ನಡುವೆ ನೇರಾನೇರ ಸ್ಪರ್ಧೆ
ಜಾರಕಿಹೊಳಿ- ಜೊಲ್ಲೆ ಗುಂಪು ಅಪ್ಪಣಗೌಡ ಪಾಟೀಲ ಪೆನಲ್ ಮೂಲಕ ಮತದಾರರ ಮನವೊಲಿಸುವ ಪ್ರಯತ್ನ ನಡೆಸಿ ಸಂಸ್ಥೆಯ ಅಧಿಕಾರವನ್ನು ತಮ್ಮಲ್ಲೇ ಉಳಿಸಿಕೊಳ್ಳುವ ಕಸರತ್ತು ನಡೆಸಿದ್ದರೆ, ಕತ್ತಿ- ಎ.ಬಿ.ಪಾಟೀಲ ಗುಂಪು ಸ್ವಾಭಿಮಾನ ಪೆನಲ್ ಮೂಲಕ ಅಖಾಡಕ್ಕಿಳಿದಿದ್ದು ಕೈತಪ್ಪಿ ಹೋಗಿರುವ ಸಂಘದ ಚುಕ್ಕಾಣಿಯನ್ನು ಮರಳಿ ವಶ ಪಡೆಯುವ ವಿಶ್ವಾಸದಲ್ಲಿದೆ. ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಮಾಜಿ ಸಂಸದ ರಮೇಶ ಕತ್ತಿ, ಶಾಸಕ ನಿಖಿಲ್ ಕತ್ತಿ ಸಹಿತ ಅನೇಕರು ಮತ ಚಲಾಯಿಸಿದರು. ಮತಗಟ್ಟೆ ಮುಂಭಾಗ ಕತ್ತಿ-ಜಾರಕಿಹೊಳಿ ಬೆಂಬಲಿಗರು ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ, ವಾಗ್ವಾದ ನಡೆಯಿತು. ಇದೇ ವೇಳೆ ಮತಕೇಂದ್ರ ಬಳಿ ಜಮಾಯಿಸಿದ ಸಹಸ್ರಾರು ಜನರನ್ನು ಚದುರಿಸಲು ಪೊಲೀಸರು ಲಾಠಿ ಬೀಸಿದರು. ಇದರಿಂದ ಕೆರಳಿದ ಜನರು ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದರು.