ಕಿತ್ತೂರಿನಲ್ಲಿ ಕೂಡಲಸಂಗಮ ಪೀಠದ ಶಾಖಾಮಠ ಆರಂಭ

KannadaprabhaNewsNetwork |  
Published : Sep 29, 2025, 03:02 AM IST
ಕಾರ್ಯಕ್ರಮವನ್ನು ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಉದ್ಘಾಟಿಸಿದರು. | Kannada Prabha

ಸಾರಾಂಶ

ಕೂಡಲಸಂಗಮ ಪೀಠದ ಮಾದರಿಯಲ್ಲಿ ಕಿತ್ತೂರ ಪ್ರದೇಶದಲ್ಲಿ 4 ಎಕರೆ ಜಮೀನು ಖರೀದಿಸಿ ₹10 ಕೋಟಿ ವೆಚ್ಚದಲ್ಲಿ ಶಾಖಾಮಠ ಆರಂಭ

ಕನ್ನಡಪ್ರಭ ವಾರ್ತೆ ರಾಮದುರ್ಗ

ಟ್ರಸ್ಟ್ ಮತ್ತು ಮಠಗಳು ಬೇರೆ ಬೇರೆಯಾಗಿದ್ದು ಮಠಗಳು ಭಕ್ತರ ಆಸ್ತಿ. ಮಠಾಧೀಶರನ್ನು ಉಚ್ಚಾಟಿಸಲು ಟ್ರಸ್ಟಿಗೆ ಅಧಿಕಾರವಿಲ್ಲ. ಶ್ರೀಗಳನ್ನು ಉಚ್ಛಾಟಿಸುವವರು ತಮ್ಮ ವ್ಯಕ್ತಿತ್ವ ಅರಿತುಕೊಳ್ಳಬೇಕು. ಬಸವಜಯ ಮೃತ್ಯುಂಜಯ ಸ್ವಾಮೀಜಿ ಬೆಂಬಲಕ್ಕೆ ಪಂಚಮಸಾಲಿ ಸಮಾಜವಿದೆ. ಶ್ರೀಗಳು ಯಾವುದಕ್ಕೂ ಧೃತಿಗೆಡಬಾರದು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ತಾಲೂಕಿನ ಕುನ್ನಾಳ ಗ್ರಾಮದಲ್ಲಿ ಭಾನುವಾರ ಕಿತ್ತೂರು ಚನ್ನಮ್ಮನ ಅಶ್ವಾರೂಢ ಮೂರ್ತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಕೂಡಲಸಂಗಮ ಪೀಠದ ಮಾದರಿಯಲ್ಲಿ ಕಿತ್ತೂರ ಪ್ರದೇಶದಲ್ಲಿ 4 ಎಕರೆ ಜಮೀನು ಖರೀದಿಸಿ ₹10 ಕೋಟಿ ವೆಚ್ಚದಲ್ಲಿ ಶಾಖಾಮಠ ಆರಂಭಿಸಲಾಗುವುದು. ಶ್ರೀಗಳ ನೇತೃತ್ವದಲ್ಲಿ ಶಾಖಾಮಠ ಆರಂಭಿಸಿ ಅಲ್ಲಿ ನಿರಂತರ ದಾಸೋಹ ಜೊತೆಗೆ ಸಾವಿರಾರು ವಿದ್ಯಾರ್ಥಿಗಳ ಪ್ರಸಾದ ನಿಲಯ ಸ್ಥಾಪಿಸಲಾಗುವುದು. ಪಂಚಮಸಾಲಿ ಸಮಾಜ ಅಲ್ಲದೆ ಇತರೆ ಸಮಾಜದ ವಿದ್ಯಾರ್ಥಿಗಳಿಗೂ ಸ್ಪರ್ಧಾತ್ಮಕ ಪರೀಕ್ಷೆಗೆ ಅವಕಾಶ ನೀಡಲಾಗುವುದು. ಒಳ್ಳೆಯ ಕೆಲಸಕ್ಕೆ ಸಮಾಜದವರು ಉತ್ತಮ ದಾನ ಮಾಡಲು ಮುಂದಾಗಲಿದ್ದಾರೆ. ಶ್ರೀಗಳು ಯಾವುದಕ್ಕೂ ಹಿಂಜರಿಕೂಡದು ಎಂದು ಹೇಳಿದರು.

ಸಮಾಜಕ್ಕೆ ಮೋಸ ಮಾಡಿದವರು, ಜೋಳಿಗೆಯ ಹಣ ನುಂಗಿದವರಿಗೆ ಎಂದಿಗೂ ಒಳ್ಳೆಯದು ಆಗುವುದಿಲ್ಲ. ಕೇವಲ ಎರಡು ಕುಟುಂಬಗಳ ಸದಸ್ಯರನ್ನು ಒಳಗೊಂಡಿರುವ ಪಂಚಮಸಾಲಿ ಟ್ರಸ್ಟಿನಲ್ಲಿ ಎಲ್ಲವೂ ಸರಿ ಇಲ್ಲ. ಮಠದಿಂದ ಶ್ರೀಗಳನ್ನು ಉಚ್ಛಾಟಿಸಲು ಟ್ರಸ್ಟಿಗೆ ಅಧಿಕಾರವಿಲ್ಲ ಎಂದರು. ರಾಜ್ಯ ಸರ್ಕಾರ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಪಂಚಮಸಾಲಿಗಳು ಲಿಂಗಾಯತ ಎಂದು ಬರೆಯಿಸದೇ ಹಿಂದೂ ಎಂದು ಬರೆಸಬೇಕು. ಒಂದು ವೇಳೆ ಲಿಂಗಾಯತ ಎಂದು ಬರೆಯಿಸಿದರೆ ಸಂವಿಧಾನದಲ್ಲಿ ಮಾನ್ಯತೆ ಸಿಕ್ಕಿಲ್ಲ. ಅದಕ್ಕಾಗಿ ಎಲ್ಲರೂ ಹಿಂದೂ ಎಂದು ಬರೆಯಿಸಬೇಕು ಎಂದರು.

ಕೂಡಲಸಂಗಮ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಮನುಷ್ಯನಿಗೆ ವಿಷ ಹಾಕುವುದಕ್ಕಿಂತಲೂ ಆಮಿಷವೊಡ್ಡುವುದು ಬಹಳ ಅಪಾಯಕಾರಿ. ಕೆಲವರ ಕುತಂತ್ರದಿಂದ ಆಮಿಷವೊಡ್ಡಿ ಸಮಾಜದ ಸಂಘಟನೆಗೆ ಅಡ್ಡಿಯಾಗುತ್ತಿದ್ದಾರೆ. ಅಂತಹ ಉಹಾಪೂಹಗಳಿಗೆ ಕಿವಿಗೊಡದೇ ಸಮಾಜ ಸಂಘಟನೆಗೆ ಮುಂದಾಗಬೇಕು ಎಂದು ಹೇಳಿದರು. ಪೀಠವನ್ನು ಹತೋಟಿಯಲ್ಲಿ ಇಟ್ಟುಕೊಂಡವರ ಕುತಂತ್ರದ ಕಪಿಮುಷ್ಠಿಯಿಂದ ನನಗೆ ಬಿಡುಗಡೆಯಾಗಿದೆ. ಮೀಸಲಾತಿ ಮತ್ತು ಸಮಾಜ ಸಂಘಟನೆ ಇನ್ನು ಮುಂದೆ ನಿರಂತರ ನಡೆಯಲಿದೆ. ಸಮಾಜಮುಖಿ ಕೆಲಸ ಮಾಡುವವರಿಗೆ ವಿಷ ಕೊಡುವ ವ್ಯಕ್ತಿಗಳಿಂದ ದೂರ ಇರಬೇಕು. ಪ್ರತಿಜ್ಞಾಕ್ರಾಂತಿ ಮೂಲಕ ಮೀಸಲಾತಿ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು.

ರಾಜ್ಯ ಸಭೆ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಜಾಗೃತಗೊಂಡಿರುವ ಪಂಚಮಸಾಲಿ ಸಮಾಜವನ್ನು ಸರಿಯಾದ ಮಾರ್ಗದಲ್ಲಿ ಕರೆದೊಯ್ಯಲು ಸಮಯ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಸಮಯಕ್ಕೆ ಬೆಲೆ ಕೊಡದ ಹೊರತು ಸಮಾಜದ ಉದ್ದಾರವಾಗುವುದಿಲ್ಲ ಎಂದರು. ಪಂಚಮಸಾಲಿ ಟ್ರಸ್ಟ್‌ನಿಂದ ಶ್ರೀಗಳಿಗೆ ಪ್ರಯೋಜನವಿಲ್ಲ. ಅಲ್ಲಿನ ಮಠ ಅಭಿವೃದ್ಧಿಪಡಿಸುವ ಮೂಲಕ ಶಾಖಾ ಮಠದ ಅಭಿವೃದ್ಧಿಗೆ ಕೈಜೋಡಿಸಲು ಸಮಾಜದ ಜನ ಮುಂದಾಗಬೇಕು ಎಂದು ವಿಧಾನಸಭಾ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.

ಈ ವೇಳೆ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ, ಜಿಪಂ ಮಾಜಿ ಸದಸ್ಯೆ ರೋಹಿಣಿ ಪಾಟೀಲ ಮಾತನಾಡಿದರು. ಸಮಾಜದ ತಾಲೂಕು ಅಧ್ಯಕ್ಷ ಸಿ.ಬಿ.ಪಾಟೀಲ ಅಧ್ಯಕ್ಷತೆ ವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ